ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ವಾತಿ ಘನತೆಗೆ ಧಕ್ಕೆ ತರಲು AAP ಯತ್ನ, ತಿರುಚಿದ ವಿಡಿಯೊಗಳ ಹಂಚಿಕೆ: ಬಿಜೆಪಿ

Published 18 ಮೇ 2024, 11:15 IST
Last Updated 18 ಮೇ 2024, 11:15 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್‌ ಅವರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿರುವ ತಮ್ಮದೇ ಪಕ್ಷದ ರಾಜ್ಯಸಭಾ ಸದಸ್ಯೆ ಸ್ವಾತಿ ಮಾಲಿವಾಲ್‌ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಎಎಪಿ ನಾಯಕರು ತಿರುಚಿದ ವಿಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಶನಿವಾರ ಆರೋಪಿಸಿದೆ.

‘ಎಎಪಿ ನಾಯಕರು ಸ್ವಾತಿ ಅವರಿಗೆ 'ಮಾನಹಾನಿ' ಮಾಡುವ ನಿಟ್ಟಿನಲ್ಲಿ ತಿರುಚಿದ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದು ವಿಷಾದನೀಯ ಸಂಗತಿ’ ಎಂದು ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಹೇಳಿದ್ದಾರೆ.

‘ಇಡೀ ಆಮ್ ಆದ್ಮಿ ಪಕ್ಷವೇ ಸ್ವಾತಿ ಅವರ ಇಮೇಜ್ ಅನ್ನು ಹಾಳು ಮಾಡಲು ಪ್ರಯತ್ನಿಸುತ್ತಿದೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಈ ವಿಷಯದ ಬಗ್ಗೆ ಮಾತನಾಡುವ ಸಮಯ ಬಂದಿದೆ’ ಎಂದು ಸಚ್‌ದೇವ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ನಿವಾಸದ ಸಿಸಿಟಿವಿ ದೃಶ್ಯಗಳನ್ನು ಎಎಪಿ ಶುಕ್ರವಾರ ಬಿಡುಗಡೆ ಮಾಡಿತ್ತು. ಸ್ವಾತಿ ಮಾಲಿವಾಲ್ ಮೇಲೆ ಭ್ರಷ್ಟಾಚಾರದ ಆರೋಪವಿದ್ದು, ಕೇಜ್ರಿವಾಲ್ ವಿರುದ್ಧ ಸಂಚು ರೂಪಿಸಲು ಬಿಜೆಪಿ ಅವರಿಗೆ ಬೆದರಿಕೆ ಹಾಕಿದೆ ಎಂದು ಆರೋಪಿಸಿತ್ತು. ಇದರ ಬೆನ್ನಲ್ಲೇ ಬಿಜೆಪಿಗರು ಎಎಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

‘ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನಿವಾಸಕ್ಕೆ ತೆರಳಿದ್ದಾಗ, ಅವರ ಕಾರ್ಯದರ್ಶಿಯಾಗಿರುವ ಬಿಭವ್ ಕುಮಾರ್ ತಮ್ಮ ಜೊತೆಗೆ ಅನುಚಿತವಾಗಿ ವರ್ತಿಸಿದ್ದು, ದೈಹಿಕವಾಗಿ ಹಲ್ಲೆ ನಡೆಸಿದ್ದರು’ ಎಂದು ಸಂಸದೆ ಸ್ವಾತಿ ಮಾಲಿವಾಲ್‌ ಅವರು ಆರೋಪಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿಕೊಂಡಿರುವ ದೆಹಲಿ ಪೊಲೀಸರು ಇಂದು ಬಿಭವ್‌ ಕುಮಾರ್ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT