ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ರೈಸ್ತ ಧರ್ಮಕ್ಕೆ ಮತಾಂತರ: ಉದ್ಯೋಗ, ಹಣದ ಆಮಿಷ: ಉತ್ತರ ಪ್ರದೇಶ ಪೊಲೀಸರ ಮಾಹಿತಿ

ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಪೊಲೀಸರ ಮಾಹಿತಿ
Published : 5 ಮೇ 2023, 16:17 IST
Last Updated : 5 ಮೇ 2023, 16:17 IST
ಫಾಲೋ ಮಾಡಿ
Comments

ನವದೆಹಲಿ: ಪ್ರಯಾಗರಾಜ್‌ದ ಸ್ಯಾಮ್‌ ಹಿಗ್ಗಿನ್‌ಬಾತಮ್ಸ್ ಕೃಷಿ, ತಂತ್ರಜ್ಞಾನ ಮತ್ತು ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಆರ್.ಬಿ.ಲಾಲ್‌ ಮತ್ತು ಆಡಳಿತದ ನಿರ್ದೇಶಕ ವಿ.ಬಿ.ಲಾಲ್‌ ಅವರು ಹಿಂದೂ ಮತ್ತು ಮುಸ್ಲಿಂ ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದವರನ್ನು ಕ್ರೈಸ್ತ ಧರ್ಮಕ್ಕೆ ಕಾನೂನುಬಾಹಿರವಾಗಿ ಮತಾಂತರಗೊಳಿಸುತ್ತಿರುವ ಜಾಲದ ಪ್ರಮುಖ ಸಂಚುಕೋರರು ಎಂದು ಉತ್ತರ ಪ್ರದೇಶ ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

ಈ ಇಬ್ಬರು ಆರೋಪಿಗಳು ಹಲವು ದೇಶಗಳಿಂದ ₹ 34 ಕೋಟಿಗೂ ಅಧಿಕ ಮೊತ್ತ ಪಡೆದಿದ್ದು, ಅದನ್ನು ಈ ಕಾನೂನುಬಾಹಿರ ಮತಾಂತರಕ್ಕೆ ಬಳಸಿಕೊಂಡಿದ್ದಾರೆ ಎಂದೂ ಉತ್ತರ ಪ್ರದೇಶ ಪೊಲೀಸರು ಆರೋಪಿಸಿದ್ದಾರೆ.

ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ರದ್ದುಗೊಳಿಸಬೇಕು ಎಂದು ಕೋರಿ ಆರ್.ಬಿ.ಲಾಲ್‌ ಮತ್ತು ವಿ.ಬಿ.ಲಾಲ್‌ ಸಲ್ಲಿಸಿರುವ ಅರ್ಜಿಗೆ ಪ್ರತಿಯಾಗಿ ಉತ್ತರ ಪ್ರದೇಶ ಪೊಲೀಸರು ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಈ ಮಾಹಿತಿ ನೀಡಲಾಗಿದೆ.

‘ಬೆದರಿಕೆ ಒಡ್ಡುವ ಮೂಲಕ ಹಾಗೂ ಬಲವಂತದಿಂದ ಮತಾಂತರ ಮಾಡಲಾಗುತ್ತಿತ್ತು. ಉದ್ಯೋಗ, ಹಣ ಹಾಗೂ ಸುಂದರ ಯುವತಿಯರೊಂದಿಗೆ ಮದುವೆಯಂತಹ ಆಮಿಷಗಳನ್ನು ಒಡ್ಡುವ ಮೂಲಕ ಆರೋಪಿಗಳು ಮತಾಂತರ ಮಾಡಿಸುತ್ತಿದ್ದರು’ ಎಂದೂ ಆರೋಪಿಸಲಾಗಿದೆ.

‘ವಿ.ಬಿ.ಲಾಲ್‌ ಕ್ರಿಮಿನಲ್ ಮನಸ್ಥಿತಿಯ ವ್ಯಕ್ತಿ. ವಂಚನೆ, ಕೊಲೆಯಂತಹ ವಿವಿಧ ರೀತಿಯ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಕ್ಕೆ ಸಂಬಂಧಿಸಿ ಆತನ ವಿರುದ್ಧ ಕನಿಷ್ಠ 38 ಪ್ರಕರಣಗಳಿವೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ವಿಶ್ವವಿದ್ಯಾಲಯವು ವಿದೇಶಗಳಿಂದ ಪಡೆದಿದ್ದ ದೇಣಿಗೆಯನ್ನು ‘ಯೇಷು ದರ್ಬಾರ್ ಟ್ರಸ್ಟ್‌’ ಗೆ ನೀಡಲಾಗುತ್ತಿತ್ತು. ನಿರ್ಲಕ್ಷ್ಯಕ್ಕೆ ಒಳಗಾದ ಮುಸ್ಲಿಂ ಮತ್ತು ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸುವ ಕಾರ್ಯದಲ್ಲಿ ನಿರತವಾಗಿದ್ದ ಚರ್ಚ್‌ಗಳ ಪಾದ್ರಿಗಳು, ಬ್ರಾಡ್‌ವೆಲ್ ಆಸ್ಪತ್ರೆ ಸಿಬ್ಬಂದಿಗೆ ಈ ಹಣವನ್ನು ಹಂಚಲಾಗಿತ್ತು’ ಎಂದು  ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ.

‘ಫತೇಹಪುರದ ಸಿವಿಲ್‌ ಲೈನ್ಸ್‌ ರಸ್ತೆಯಲ್ಲಿರುವ ವರ್ಡ್‌ ವಿಷನ್‌ ಸಂಸ್ಥೆಯ ಭಾರತದ ಶಾಖಾ ಕಚೇರಿ ಮೇಲೆ ದಾಳಿ ನಡೆಸಿ, ಶೋಧ ನಡೆಸಲಾಗಿತ್ತು. ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡರೆ ಆಗುವ ಲಾಭಗಳೇನು ಹಾಗೂ ಮತಾಂತರಗೊಳ್ಳುವವರಿಗೆ ನೀಡಲಾಗುವ ವಸ್ತುಗಳ ವಿವರಗಳು ಇದ್ದ ಕರಪತ್ರಗಳನ್ನು ಈ ದಾಳಿ ಸಂದರ್ಭದಲ್ಲಿ ಜಪ್ತಿ ಮಾಡಲಾಗಿತ್ತು’ ಎಂದೂ ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT