ಗುರುವಾರ , ಡಿಸೆಂಬರ್ 12, 2019
24 °C

ಹಕ್ಕುಗಳ ರಕ್ಷಣೆಗೆ ಸಂವಿಧಾನಿಕ ಚೌಕಟ್ಟಿನಡಿ ಕಾನೂನು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ವಿಜಯಪುರ: ‘ಮಾನವ ಹುಟ್ಟಿನಿಂದಲೇ ನೈಸರ್ಗಿಕವಾಗಿ ಹಕ್ಕುಗಳನ್ನು ಪಡೆದುಕೊಳ್ಳುತ್ತಾನೆ. ಅವುಗಳ ರಕ್ಷಣೆಗಾಗಿ ಸಂವಿಧಾನಿಕ ಚೌಕಟ್ಟಿನಡಿ ಕಾನೂನುಗಳಿವೆ’ ಎಂದು ನ್ಯಾಯಾಧೀಶ ಸದಾನಂದ ನಾಯಕ ಹೇಳಿದರು.

ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಈಚೆಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

‘ಮಾನವ ಹಕ್ಕುಗಳ ರಕ್ಷಣೆಗೆ ಸಂವಿಧಾನ ಅವಕಾಶ ಕಲ್ಪಿಸಿದೆ. ಸಾಂವಿಧಾನಿಕ ಮಾನ್ಯತೆಯಿದೆ. ಅವುಗಳ ಉಲ್ಲಂಘನೆಯಾದಾಗ ಕಾನೂನು ನೆರವು ಪಡೆಯಲು ಅವಕಾಶವಿದೆ. ಮಾನವ ತನ್ನ ಇಷ್ಟದಂತೆ ಜೀವಿಸುವ, ಅಭಿಪ್ರಾಯ ವ್ಯಕ್ತಪಡಿಸುವ, ಧರ್ಮ ಅನುಸರಿಸುವ ಸಮಾನತೆ ಸೇರಿದಂತೆ ಇತರೆ ಹಕ್ಕುಗಳ ಉಲ್ಲಂಘನೆಯಾದಾಗ ಅಗತ್ಯ ಕಾನೂನು ನೆರವು ಪಡೆಯಬಹುದು. ಜಿಲ್ಲೆಯಲ್ಲಿ ಈವರೆಗೆ ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ಯಾವುದೇ ಪ್ರಕರಣ ದಾಖಲಾಗದಿರುವುದು ಸಂತಸದ ವಿಷಯ’ ಎಂದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿಕಾಸ್‌ ಕಿಶೋರ್‌ ಸುರಳಕರ್‌ ಮಾತನಾಡಿ, ಮಾನವ ಹಕ್ಕುಗಳ ರಕ್ಷಣೆ ಕುರಿತು ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆದ ಸಂದರ್ಭದಲ್ಲಿಯೇ ದೇಶದಲ್ಲಿ ಸಂವಿಧಾನ ರಚನೆ ಕಾರ್ಯ ನಡೆದಿತ್ತು. ಅದರ ಪರಿಣಾಮ ಭಾರತದ ಸಂವಿಧಾನದಲ್ಲಿ ಮಾನವ ಹಕ್ಕುಗಳ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಯಿತು. ಇತರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ಕಡಿಮೆ ಎಂದು ಹೇಳಿದರು.

ಕಾನೂನು ಸಲಹೆಗಾರ ಬಿ.ಎಂ.ನೂಲ್ವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಹೇಶ ಪೋತದಾರ ಪ್ರತಿಜ್ಞಾ ವಿಧಿ ಬೋಧಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪ್ರಸನ್ನ, ನ್ಯಾಯಾಧೀಶ ಪ್ರಭಾಕರಾವ್‌ ಸೇರಿದಂತೆ ಜಿಲ್ಲೆಯ ಎಲ್ಲ ತಹಶೀಲ್ದಾರ್‌ರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಶಿಕ್ಷಕ ಹುಮಾಯೂನ್‌ ಮಮದಾಪುರ ನಿರೂಪಿಸಿದರು. ಮಂಜುಳಾ ಹಿಪ್ಪರಗಿ ನಾಡಗೀತೆ ಹಾಡಿದರು. ಮಹಾನಗರ ಪಾಲಿಕೆ ಆಯುಕ್ತ ಡಾ.ಔದ್ರಾಮ ವಂದಿಸಿದರು.

ಪ್ರತಿಕ್ರಿಯಿಸಿ (+)