ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರೆಸೇನಾ ಪಡೆಯ 100 ಕಂಪನಿಗಳು ಮತ್ತೆ ಜಮ್ಮು ಕಾಶ್ಮೀರಕ್ಕೆ

ಪಂಚರಾಜ್ಯಗಳ ಚುನಾವಣಾ ಕರ್ತವ್ಯಕ್ಕೆ ಕಣಿವೆಯಿಂದ ತೆರಳಿದ್ದ ಅರೆಸೇನಾ ಪಡೆ
Last Updated 19 ಏಪ್ರಿಲ್ 2022, 15:53 IST
ಅಕ್ಷರ ಗಾತ್ರ

ಶ್ರೀನಗರ: ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಕರ್ತವ್ಯಕ್ಕೆ ತೆರಳಿದ್ದ ಅರೆಸೇನಾ ಪಡೆಯ ಸುಮಾರು 100 ಕಂಪನಿಗಳು ಕಣಿವೆಯಲ್ಲಿ ಹೆಚ್ಚುತ್ತಿರುವ ಉಗ್ರರ ದಾಳಿ ಹಾಗೂ ಮುಂದಿನ ಅಮರನಾಥ ಯಾತ್ರೆಯ ಭದ್ರತೆಗಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ಮರಳುತ್ತಿವೆ.

‘ಹಲವು ದಿನಗಳ ವಿರಾಮದ ನಂತರ ಅರೆಸೇನಾ ಪಡೆಗಳು ಕೇಂದ್ರಾಡಳಿತ ಪ್ರದೇಶವನ್ನು ಪ್ರವೇಶಿಸುತ್ತಿದ್ದು, ಕಾಶ್ಮೀರದಲ್ಲಿ ನಾಗರಿಕರು, ರಜೆಯಲ್ಲಿರುವ ಭದ್ರತಾ ಸಿಬ್ಬಂದಿ, ಪೊಲೀಸರು ಹಾಗೂ ಸ್ಥಳೀಯರಲ್ಲದ ಜನರನ್ನು ಉಗ್ರರು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಅರೆಸೇನಾಪಡೆಯನ್ನು ಕಾಶ್ಮೀರಕ್ಕೆ ನಿಯೋಜಿಸಲಾಗುತ್ತಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್‌ 24ರಂದು ಜಮ್ಮುವಿಗೆ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿರುವುದರಿಂದ ಪಂಚ ರಾಜ್ಯಗಳಿಂದ ವಾಪಸ್‌ ಆಗಿರುವ ಅರೆಸೇನಾಪಡೆಗಳು ಜಮ್ಮುವಿನಲ್ಲೇ ಬೀಡುಬಿಟ್ಟಿವೆ. ಮೋದಿ ಅವರ ಒಂದು ದಿನದ ಪ್ರವಾಸ ಮುಗಿದ ಬಳಿಕ ಈ ಪಡೆಗಳು ಕಣಿವೆಗೆ ಮರಳಲಿವೆ’ ಎಂದು ಅವರು ಹೇಳಿದರು.

ಜೂನ್‌ 30ರಿಂದ ಆರಂಭವಾಗಲಿರುವ ವಾರ್ಷಿಕ ಅಮರನಾಥ ಯಾತ್ರೆಗೆ ಮತ್ತಷ್ಟು ಅರೆಸೇನಾಪಡೆಯ ಕಂಪನಿಗಳು ಅಗತ್ಯವಿರುವ ಹಿನ್ನೆಲೆಯಲ್ಲಿ ಇಲ್ಲಿನ ಆಡಳಿತವು ಹೆಚ್ಚುವರಿ ಅರೆಸೇನಾ ಪಡೆಯನ್ನು ನಿಯೋಜಿಸುವಂತೆ ಕೇಂದ್ರಕ್ಕೆ ಮನವಿ ಮಾಡಿದೆ.

‘ಅಮರನಾಥ ಯಾತ್ರೆಯನ್ನು ಸುಸೂತ್ರವಾಗಿ ನೆರವೇರಿಸಲು ಅಗತ್ಯವಿರುವ ಅರೆಸೇನಾಪಡೆಗಳ ವಿವರವನ್ನು ನೀಡುವಂತೆ ಕೇಂದ್ರ ಗೃಹ ಇಲಾಖೆಯು ಕೇಳಿದ್ದು, ಹೆಚ್ಚಿನ ಭದ್ರತೆಗಾಗಿ 400 ಹೆಚ್ಚುವರಿ ಅರೆಸೇನಾಪಡೆಯ ಕಂಪನಿಗಳನ್ನು ಒದಗಿಸುವಂತೆ ಕೇಳಿಕೊಂಡಿದ್ದು, ಮಾಹಿತಿಯನ್ನು ಕಳುಹಿಸಿದ ನಂತರ ಅರೆಸೇನಾಪಡೆಗಳ ವಿವಿಧ ಕಂಪನಿಗಳನ್ನು ಕಣಿವೆಗೆ ಬರಲಿವೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಉತ್ತರ ಪ್ರದೇಶ, ‍ಪಂಜಾಬ್‌, ಉತ್ತರಾಖಂಡ್‌,ಗೋವಾ, ಮಣಿಪುರ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಕರ್ತವ್ಯಕ್ಕಾಗಿ ಕಾಶ್ಮೀರ ಕಣಿವೆಯಿಂದ ಅರೆಸೇನಾಪಡೆಗಳನ್ನು ಹಿಂತೆಗೆದುಕೊಳ್ಳಲಾಗಿತ್ತು.

ಎರಡು ವರ್ಷಗಳ ಬಳಿಕ ನಡೆಯುತ್ತಿರುವ ಅಮರನಾಥ ವಾರ್ಷಿಕ ಯಾತ್ರೆಯಲ್ಲಿ 6–8 ಲಕ್ಷ ಯಾತ್ರಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT