ಶುಕ್ರವಾರ, ಡಿಸೆಂಬರ್ 2, 2022
20 °C

ಸಾಕ್ಷ್ಯಾಧಾರಗಳ ಕೊರತೆ: ಗಲ್ಲು ಶಿಕ್ಷೆಗೆ ಗುರಿಯಾಗಿದ್ದವರ ಖುಲಾಸೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ : 19 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಪ್ರಕರಣ ಸಂಬಂಧ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಮೂವರು ಅಪರಾಧಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಸುಪ್ರೀಂ ಕೋರ್ಟ್‌ ಸೋಮವಾರ ಖುಲಾಸೆಗೊಳಿಸಿದೆ. 

ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್‌, ನ್ಯಾಯಮೂರ್ತಿಗಳಾದ ಎಸ್‌.ರವೀಂದ್ರ ಭಟ್‌ ಮತ್ತು ಬೇಲಾ ಎಂ.ತ್ರಿವೇದಿ ಅವರನ್ನೊಳಗೊಂಡ ತ್ರಿಸದಸ್ಯ ನ್ಯಾಯಪೀಠವು ಈ ಸಂಬಂಧ 40 ಪುಟಗಳ ತೀರ್ಪು ಪ್ರಕಟಿಸಿದೆ.

‘ಆರೋಪಿಗಳ ಬಂಧನ, ಕೃತ್ಯಕ್ಕೆ ಬಳಸಿದ್ದ ಕಾರು, ಘಟನಾ ಸ್ಥಳದಲ್ಲಿ ಜಪ್ತಿ ಮಾಡಿರುವ ಸಾಧನಗಳು ಹಾಗೂ ಕಲೆ ಹಾಕಿದ ಮಾದರಿ, ವೈಜ್ಞಾನಿಕ ಹಾಗೂ ವೈದ್ಯಕೀಯ ಸಾಕ್ಷ್ಯ, ಡಿಎನ್‌ಎ ವಿವರ, ಫೋನ್‌ನಲ್ಲಿ ಮಾತನಾಡಿರುವ ಕುರಿತಾದ ಧ್ವನಿ ಮುದ್ರಿಕೆ (ಸಿಡಿಆರ್‌) ಹೀಗೆ ಆರೋಪ ಸಾಬೀತು‍ಪಡಿಸಲು ಬೇಕಿರುವ ಯಾವುದೇ ಸಾಕ್ಷ್ಯಾಧಾರಗಳನ್ನು ಪ್ರಾಸಿಕ್ಯೂಷನ್‌ ಒದಗಿಸಿಲ್ಲ. ಹೀಗಾಗಿ ಬೇರೆ ದಾರಿ ಇಲ್ಲದೆ ಅಪರಾಧಿಗಳನ್ನು ಖುಲಾಸೆಗೊಳಿಸುತ್ತಿದ್ದೇವೆ’ ಎಂದು ನ್ಯಾಯಪೀಠ ಹೇಳಿದೆ. 

‘ಘೋರ ಅಪರಾಧದಲ್ಲಿ ಭಾಗಿಯಾಗಿದ್ದವರನ್ನು ಶಿಕ್ಷೆಗೆ ಒಳಪಡಿಸದಿದ್ದಾಗ ಅಥವಾ ಬಿಡುಗಡೆಗೊಳಿಸಿದಾಗ ಸಮಾಜದಲ್ಲಿ ಹತಾಶೆಯ ವಾತಾವರಣ ನಿರ್ಮಾಣವಾಗುವುದು ಸಹಜ. ಅದರಲ್ಲೂ ಮುಖ್ಯವಾಗಿ ಸಂತ್ರಸ್ತೆಯ ಕುಟುಂಬದವರಿಗೆ ವಿಪರೀತ ಸಂಕಟವಾಗುತ್ತದೆ. ಆದರೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ ಬರೀ ಅನುಮಾನದ ಆಧಾರದಲ್ಲಿ ಆರೋಪಿಗಳನ್ನು ಶಿಕ್ಷೆಗೆ ಗುರಿಪಡಿಸುವುದಕ್ಕೆ ಕಾನೂನು ಅನುವು ಮಾಡಿಕೊಡುವುದಿಲ್ಲ’ ಎಂದೂ ನ್ಯಾಯಪೀಠ ತಿಳಿಸಿದೆ.

‘ವಿಚಾರಣಾ ಪ್ರಕ್ರಿಯೆಯಲ್ಲಿ ಸಾಕಷ್ಟು ಲೋಪಗಳಾಗಿವೆ’ ಎಂದು ಹೇಳಿರುವ ನ್ಯಾಯಪೀಠವು ಸಂತ್ರಸ್ತೆಯ ಕುಟುಂಬದವರಿಗೆ ಪರಿಹಾರ ಪಡೆಯುವ ಹಕ್ಕು ಇದೆ’ ಎಂದೂ ತಿಳಿಸಿದೆ. 

ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಮಹಿಳೆಯನ್ನು 2012ರ ಫೆಬ್ರುವರಿಯಲ್ಲಿ ದೆಹಲಿಯ ಚಾವ್ಲಾ ಪ್ರದೇಶದಲ್ಲಿ ಅಪಹರಿಸಿದ್ದ ಅಪರಾಧಿಗಳು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಬರ್ಬರವಾಗಿ ಕೊಲೆ ಮಾಡಿದ್ದರು. ಘಟನೆ ನಡೆದ ಮೂರು ದಿನಗಳ ನಂತರ ಹರಿಯಾಣದ ರೇವಾರಿ ಬಳಿಯ ಗ್ರಾಮವೊಂದರಲ್ಲಿ ಕೊಳೆತ ಹಾಗೂ ತುಂಡರಿಸಿದ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿತ್ತು.    

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು