ಪುದುಚೇರಿ: ರಾಹುಲ್ ಭೇಟಿಯ ಸನಿಹದಲ್ಲೇ ಮತ್ತೊಬ್ಬ ಕಾಂಗ್ರೆಸ್ ಶಾಸಕರ ರಾಜೀನಾಮೆ

ಪುದುಚೇರಿ: ಪುದುಚೇರಿಯ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಶಾಸಕರ ರಾಜೀನಾಮೆ ಸರಣಿ ಮುಂದುವರಿದಿದ್ದು, ಮಂಗಳವಾರ ಮುಖ್ಯಮಂತ್ರಿ ವಿ.ನಾರಾಯಣ ಸ್ವಾಮಿ ಅವರ ಆಪ್ತರಲ್ಲೊಬ್ಬರಾದ ಎ. ಜಾನ್ಕುಮಾರ್ ರಾಜೀನಾಮೆ ನೀಡಿದ್ದಾರೆ.
ಜಾನ್ಕುಮಾರ್ ಅವರ ರಾಜೀನಾಮೆಯೊಂದಿಗೆ, ವಿಧಾನಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಸದಸ್ಯರ ಸಂಖ್ಯೆ 10ಕ್ಕೆ ಇಳಿದಿದ್ದು, ಪ್ರಸ್ತುತ ಆಡಳಿತಾರೂಢ ಮತ್ತು ವಿರೋಧ ಪಕ್ಷಗಳು ತಲಾ 14 ಸದಸ್ಯರನ್ನು ಹೊಂದಿವೆ.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ಬುಧವಾರದಿಂದ ಪುದುಚೇರಿಯಲ್ಲಿ ಚುನಾವಣಾ ಪ್ರಚಾರ ಆರಂಭಿಸುತ್ತಿದ್ದು, ಇದೇ ಸಮಯದಲ್ಲಿ ಜಾನ್ಕುಮಾರ್ ರಾಜೀನಾಮೆ ನೀಡಿದ್ದಾರೆ. ಜಾನ್ಕುಮಾರ್ ಸೇರಿ ನಾಲ್ವರು ಶಾಸಕರು ಪಕ್ಷ ತೊರೆದಂತಾಗಿದೆ.
ಈ ಹಿಂದೆ ಆರೋಗ್ಯ ಸಚಿವ ಸ್ಥಾನ ತ್ಯಜಿಸಿದ್ದ ಪಕ್ಷದ ಹಿರಿಯ ಶಾಸಕ ಮಲ್ಲಾಡಿ ಕೃಷ್ಣರಾವ್ ಅವರು ಸೋಮವಾರವಷ್ಟೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಈ ಕುರಿತು ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ವಿಧಾನಸಭೆ ಅಧ್ಯಕ್ಷರು ‘ರಾಜೀನಾಮೆ ಪತ್ರವನ್ನು ಪರಿಶೀಲಿಸಿ, ಶೀಘ್ರ ನಿರ್ಧಾರ ತೆಗೆದುಕೊಳ್ಳುತ್ತೇನೆ‘ ಎಂದು ಹೇಳಿದರು. ಮಲ್ಲಾಡಿ ಕೃಷ್ಣರಾವ್ ಅವರ ರಾಜೀನಾಮೆ ಸೋಮವಾರ ರಾತ್ರಿ ಫ್ಯಾಕ್ಸ್ ಮೂಲಕ ತಲುಪಿದೆ ಎಂದು ಸ್ಪೀಕರ್ ತಿಳಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.