ಶನಿವಾರ, ಡಿಸೆಂಬರ್ 4, 2021
24 °C

ಎಲ್ಲ ಪ್ರಾದೇಶಿಕ ಭಾಷೆಗಳು ಸಣ್ಣ ಭಾಷೆಗಳು: ಸಿಬಿಎಸ್‌ಇ ವರ್ಗೀಕರಣ, ಪಂಜಾಬ್ ಆಕ್ಷೇಪ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೇಂದ್ರ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು (ಸಿಬಿಎಸ್‌ಇ) 10 ಮತ್ತು 12ನೇ ತರಗತಿಯ ಮೊದಲ ಅವಧಿಯ ಪರೀಕ್ಷೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಪ್ರಾದೇಶಿಕ ಭಾಷೆಗಳನ್ನು ವರ್ಗೀಕರಣ ಮಾಡಿದೆ. ಅದರ ಪ್ರಕಾರ, ಎಲ್ಲ ಪ್ರಾದೇಶಿಕ ಭಾಷೆಗಳನ್ನು ‘ಸಣ್ಣ ಭಾಷೆಗಳ’ ಗುಂಪಿಗೆ ಸೇರಿಸಿದೆ.

ಮುಖ್ಯಭಾಷೆಗಳ ಗುಂಪಿನಿಂದ ಪಂಜಾಬಿ ಭಾಷೆಯನ್ನು ಹೊರಗಿಡಲಾಗಿದೆ ಎಂದು ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್‌ ಚನ್ನಿ ತಕರಾರು ಎತ್ತಿದ್ದರು. ಅದರ ಹಿಂದೆಯೇ ಸಿಬಿಎಸ್‌ಇ ಭಾಷೆಗಳ ವರ್ಗೀಕರಣವನ್ನು ಮಾಡಿದೆ.

‘ಪಂಜಾಬಿ ಭಾಷೆಯನ್ನು ಮುಖ್ಯಭಾಷೆಗಳ ಗುಂಪಿನಿಂದ ಹೊರಗಿಡುವ ಸಿಬಿಎಸ್‌ಇ ಕ್ರಮವನ್ನು ವಿರೋಧಿಸುತ್ತೇನೆ. ಇದು, ಸಂವಿಧಾನದ ಆಶಯಗಳಿಗೆ ವಿರುದ್ಧ. ಇದು, ತಾಯ್ನೆಲದ ಭಾಷೆಯಲ್ಲಿ ಕಲಿಯುವ ಪಂಜಾಬಿ ಮಕ್ಕಳ ಹಕ್ಕುಗಳನ್ನು ಈ ಮೂಲಕ ಕಸಿಯುವ ಯತ್ನ. ಈ ತಾರತಮ್ಯವನ್ನು ನಾನು ವಿರೋಧಿಸುತ್ತೇನೆ’ ಎಂದು ಚನ್ನಿ ಅವರು ಟ್ವೀಟ್‌ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಸಿಬಿಎಸ್‌ಇ ಅಧಿಕಾರಿಯೊಬ್ಬರು, ‘ಸಿಬಿಎಸ್‌ಇ 10 ಮತ್ತು 12ನೇ ತರಗತಿಯ ಮೊದಲ ಅವಧಿಯ ಪರೀಕ್ಷೆಗಳಿಗೆ ಸಂಬಂಧಿಸಿ ಪ್ರಮುಖ ವಿಷಯಗಳಿಗೆ ಸಂಬಂಧಿಸಿ ಈಗ ವೇಳಾಪಟ್ಟಿ ಪ್ರಕಟಿಸಿದೆ‘ ಎಂದರು.

‘ಮೊದಲ ಅವಧಿಯ ಪರೀಕ್ಷೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಆಯಾ ವಿಷಯಗಳ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಸಂಖ್ಯೆಗಳಿಗೆ ಅನುಸಾರವಾಗಿ ಆಡಳಿತಾತ್ಮಕ ಉದ್ದೇಶದಿಂದ ಮಾತ್ರ ಈಗ ಭಾಷಾ ವರ್ಗೀಕರಣ ಮಾಡಲಾಗಿದೆ. ಅಲ್ಲದೆ, ಭಾಷೆಯನ್ನು ಸಣ್ಣದು ಅಥವಾ ದೊಡ್ಡದು ಎಂದು ನೋಡುವ ಯಾವುದೇ ಉದ್ದೇಶವಿಲ್ಲ‘ ಎಂದು ಸ್ಪಷ್ಟನೆ ನೀಡಿದ್ದಾರೆ.

10ನೇ ತರಗತಿಯ ಮೊದಲ ಅವಧಿಯ ಪರೀಕ್ಷೆಯು ನವೆಂಬರ್ 30ರಿಂದ ಹಾಗೂ 12ನೇ ತರಗತಿಯ ಮೊದಲ ಅವಧಿಯ ಪರೀಕ್ಷೆಯು ಡಿಸೆಂಬರ್ 1ರಿಂದ ಆರಂಭವಾಗಲಿದೆ ಎಂದು ಮಂಡಳಿಯು ಸೋಮವಾರ ಪ್ರಕಟಿಸಿತ್ತು.

ಸಣ್ಣ (ಮೈನರ್) ವಿಷಯಗಳ ಪರೀಕ್ಷೆಗಳು 10ನೇ ತರಗತಿಗೆ ನವೆಂಬರ್ 17 ರಿಂದ ಡಿಸೆಂಬರ್ 7 ಹಾಗೂ 12ನೇ ತರಗತಿಗೆ ಡಿಸೆಂಬರ್ 1ರಿಂದ ಆರಂಭವಾಗಲಿವೆ ಎಂದು ತಿಳಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು