ಶುಕ್ರವಾರ, ಡಿಸೆಂಬರ್ 9, 2022
22 °C

ಅಂಕಿತಾ ಅಂತ್ಯಕ್ರಿಯೆ: ಸಿಎಂ ನ್ಯಾಯ ದೊರಕಿಸಿಕೊಡುವ ಭರವಸೆ, ಪ್ರತಿಭಟನೆ ವಾಪಸ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಡೆಹ್ರಾಡೂನ್: ಬಿಜೆಪಿ ನಾಯಕನ ಮಗನಿಂದ ಹತ್ಯೆಗೊಳಗಾಗಿದ್ದಾರೆ ಎನ್ನಲಾದ ಇಲ್ಲಿನ ರೆಸಾರ್ಟ್‌ವೊಂದರ ಸ್ವಾಗತಕಾರಿಣಿ ಅಂಕಿತಾ ಭಂಡಾರಿ ಅವರ ಅಂತ್ಯಕ್ರಿಯೆ ಭಾನುವಾರ ನೆರವೇರಿತು. 

ನ್ಯಾಯ ದೊರಕಿಸಿಕೊಡುವುದಾಗಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಭರವಸೆ ನೀಡಿದ ಬಳಿಕ ಇಲ್ಲಿನ ಪ್ರಮುಖ ಹೆದ್ದಾರಿಯಲ್ಲಿ 8 ಗಂಟೆಗಳಿಂದ ನಡೆಯುತ್ತಿದ್ದ ಪ್ರತಿಭಟನೆಯನ್ನು ಪ್ರತಿಭಟನಕಾರರು
ಹಿಂತೆಗೆದುಕೊಂಡರು. 

ಶ್ರೀನಗರದ ಅಲಕಾನಂದ ನದಿ ತೀರದಲ್ಲಿ ಭಾನುವಾರ ಸಂಜೆ 6.30ರ ವೇಳೆಗೆ ಅಂಕಿತಾ ಅವರ ಅಂತ್ಯಕ್ರಿಯೆ ನೆರವೇರಿತು. ಗಡ್ವಾಲ್ ಕಮಿಷನರ್ ಸುಶೀಲ್‌ಕುಮಾರ್, ಪೌರಿ ಜಿಲ್ಲಾಧಿಕಾರಿ ವಿಜಯಕುಮಾರ್ ಜೊಗ್‌ದಂಡೆ ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. 

ಅಂಕಿತಾ ಶವ ಶನಿವಾರ ಬೆಳಿಗ್ಗೆ ಋಷಿಕೇಶದ ಸಮೀಪವಿರುವ ಚೀಲಾ ಕಾಲುವೆ ಬಳಿ ಸಿಕ್ಕಿತ್ತು. ಆಕೆ ಕಾಣೆಯಾದ ಬಗ್ಗೆ ದೂರು ನೀಡಿ ಆರು ದಿನಗಳ ನಂತರ ದೇಹ ಪತ್ತೆಯಾಗಿತ್ತು. 

ಶನಿವಾರ ಮರಣೋತ್ತರ ಪರೀಕ್ಷೆಯ ಬಳಿಕ ಋಷಿಕೇಶದ ‘ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‘ ಬಿಡುಗಡೆ ಮಾಡಿದ ಪ್ರಾಥಮಿಕ ವರದಿಯಲ್ಲಿ ಅಂಕಿತಾ ಭಂಡಾರಿಯವರ ದೇಹದಲ್ಲಿ ಸಾವಿಗೂ ಮುಂಚೆ ಆದ ಗಾಯಗಳು ಕಂಡುಬಂದಿವೆ. ಆಕೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಪೂರ್ಣವಾಗಿಲ್ಲವೆಂದು ಅಂಕಿತಾ ಪೋಷಕರು ಈ ಹಿಂದೆ ಅಂತ್ಯಸಂಸ್ಕಾರಕ್ಕೆ ನಿರಾಕರಿಸಿದ್ದರು. ‌

‘ಎಸ್‌ಐಟಿ ತನ್ನ ಕೆಲಸವನ್ನು ಮಾಡುತ್ತಿದೆ ಮತ್ತು ಕೊಲೆಗಾರರಿಗೆ ತಕ್ಕ ಶಿಕ್ಷೆಯಾಗುತ್ತದೆ’ ಎಂದು ಮುಖ್ಯಮಂತ್ರಿ ಧಾಮಿ ಅವರು ಸಂದೇಶ ಕಳಿಸಿದ ಬಳಿಕ ಪೋಷಕರು ಅಂತಿಮ ಸಂಸ್ಕಾರ
ನೆರವೇರಿಸಿದ್ದಾರೆ.

ಅಂಕಿತಾ ಕೆಲಸ ಮಾಡುತ್ತಿದ್ದ ರೆಸಾರ್ಟ್‌ ಅನ್ನು ಕೆಡವುತ್ತಿರುವ ಕ್ರಮದ ವಿರುದ್ಧವೂ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಸಾಕ್ಷ್ಯ ನಾಶಪಡಿಸುವ ಪ್ರಯತ್ನವಾಗಿರಬಹುದು ಎಂದು ಅಜಯ್ ಹೇಳಿದ್ದಾರೆ. ಆದರೆ, ಇದನ್ನು ಪೊಲೀಸರು
ನಿರಾಕರಿಸಿದ್ದಾರೆ. 

ಸಂತ್ರಸ್ತೆ ತಂದೆಗೆ ಭರವಸೆ: ‘ಅಂಕಿತಾ ಹಂತಕರನ್ನು ಗಲ್ಲಿಗೇರಿಸಲು ಪೊಲೀಸರು ಸಾಕಷ್ಟು ಪುರಾವೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ’ ಎಂದು ಉತ್ತರಾಖಂಡದ ಡಿಜಿಪಿ ಅಶೋಕ್ ಕುಮಾರ್ ಅವರು ಸಂತ್ರಸ್ತೆ ತಂದೆಗೆ ಭರವಸೆ ನೀಡಿದ್ದಾರೆ. ‘ಆರೋಪಿಗಳು ತಪ್ಪಿತಸ್ಥರು ಎಂದು ಸಾಬೀತುಪಡಿಸಲು ನಮ್ಮ ಬಳಿ ಸಾಕಷ್ಟು ಪುರಾವೆಗಳಿವೆ’ ಎಂದು ಹೆಚ್ಚುವರಿ ಎಸ್ಪಿ ಕೋಟ್‌ದ್ವಾರ್ ಶೇಖರ್‌ಚಂದ್ರ ಸುಯಲ್ ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು