ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂರವಾಣಿ ಮಾತುಕತೆಯ ತನಿಖೆಗೆ ಆದೇಶಿಸುವುದಿಲ್ಲ: ಸುಪ್ರೀಂ

ಅಮರಾವತಿ ಬೇನಾಮಿ ವ್ಯವಹಾರ ಪ್ರಕರಣ: ಮಾಜಿ ನ್ಯಾಯಮೂರ್ತಿ– ಜಿಲ್ಲಾ ಮುನ್ಸಿಫ್‌ ಮ್ಯಾಜಿಸ್ಟ್ರೇಟ್‌ ನಡುವೆ ಚರ್ಚೆ
Last Updated 22 ಫೆಬ್ರುವರಿ 2021, 11:17 IST
ಅಕ್ಷರ ಗಾತ್ರ

ನವದೆಹಲಿ: ಅಮರಾವತಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ವಿ. ಈಶ್ವರಯ್ಯ ಮತ್ತು ಅಮಾನತುಗೊಂಡಿರುವ ಜಿಲ್ಲಾ ಮುನ್ಸಿಫ್‌ ಮ್ಯಾಜಿಸ್ಟ್ರೇಟ್‌ ಎಸ್‌. ರಾಮಕೃಷ್ಣ ನಡುವೆ ನಡೆದ ದೂರವಾಣಿ ಮಾತುಕತೆ ಬಗ್ಗೆ ತನಿಖೆ ನಡೆಸಲು ಆದೇಶ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ತಿಳಿಸಿದೆ.

ಈ ಬಗ್ಗೆ ಹೈಕೋರ್ಟ್‌ ನಿರ್ಧಾರ ಕೈಗೊಳ್ಳಬೇಕು ಎಂದು ನ್ಯಾಯಮೂರ್ತಿಗಳಾದ ಅಶೋಕ್‌ ಭೂಷಣ್‌‌ ಮತ್ತು ಆರ್‌.ಎಸ್‌. ರೆಡ್ಡಿ ಅವರನ್ನೊಳಗೊಂಡ ಪೀಠವು ತಿಳಿಸಿದೆ.

ಎಸ್‌. ರಾಮಕೃಷ್ಣ ಜತೆ ಈಶ್ವರಯ್ಯ ಅವರು ನಡೆಸಿದ ದೂರವಾಣಿ ಮಾತುಕತೆ ಬಗ್ಗೆ ತನಿಖೆ ನಡೆಸುವಂತೆ ಆಂಧ್ರಪ್ರದೇಶ ಹೈಕೋರ್ಟ್‌ ಆದೇಶ ನೀಡಿತ್ತು. ನ್ಯಾಯಾಂಗದ ವಿರುದ್ಧ ಗಂಭೀರ ಸಂಚು ರೂಪಿಸಿದ್ದು ಈ ಇಬ್ಬರ ನಡುವಣ ಮಾತುಕತೆಯಿಂದ ಬಹಿರಂಗವಾಗಿತ್ತು ಎಂದು ಹೈಕೋರ್ಟ್‌ ತಿಳಿಸಿತ್ತು.

ಈ ತನಿಖೆಗೆ ತಡೆಯಾಜ್ಞೆ ನೀಡುವಂತೆ ಕೋರಿ ಮಾಜಿ ನ್ಯಾಯಮೂರ್ತಿ ಈಶ್ವರಯ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಕಾಯ್ದಿರಿಸಿದೆ.

‘ಅಮಾನತುಗೊಂಡಿರುವ ನ್ಯಾಯಾಂಗ ಅಧಿಕಾರಿಯಿಂದ ಬೇನಾಮಿ ವ್ಯವಹಾರಗಳ ಬಗ್ಗೆ ದೂರವಾಣಿ ಮೂಲಕ ಮಾಹಿತಿ ಪಡೆದುಕೊಂಡಿದ್ದೆ. ಈ ಮಾಹಿತಿಗಳು ಆಂಧ್ರಪ್ರದೇಶದ ಹೊಸ ರಾಜಧಾನಿಯಲ್ಲಿನ ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿದ್ದಾಗಿದ್ದವು’ ಎಂದು ಈಶ್ವರಯ್ಯ ಅವರು ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.

ಅಮಾನತುಗೊಂಡಿರುವ ಜಿಲ್ಲಾ ಮುನ್ಸಿಫ್‌ ಮ್ಯಾಜಿಸ್ಟ್ರೇಟ್‌ ಜತೆ ನಡೆಸಿದ ಮಾತುಕತೆ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಸುಪ್ರೀಂ ಕೋರ್ಟ್‌ ಜನವರಿ 11ರಂದು ಮಾಜಿ ನ್ಯಾಯಮೂರ್ತಿ ಈಶ್ವರಯ್ಯ ಅವರಿಗೆ ಸೂಚನೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT