ಭಾನುವಾರ, ಸೆಪ್ಟೆಂಬರ್ 25, 2022
29 °C

ರಾಹುಲ್‌ಗೆ ನಾಯಕತ್ವ ಚುಕ್ಕಾಣಿ: ಪಕ್ಷದಲ್ಲಿ ಹೆಚ್ಚಿದ ಕೂಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ/ಚೆನ್ನೈ: ಕಾಂಗ್ರೆಸ್‌ ಅಧ್ಯಕ್ಷರ ಚುನಾವಣೆ ಸನಿಹದಲ್ಲಿ ಮತ್ತೆ ರಾಹುಲ್‌ ಗಾಂಧಿಯವರೇ ಪಕ್ಷದ ನಾಯಕತ್ವ ವಹಿಸಿಕೊಳ್ಳಬೇಕೆಂಬ ಒತ್ತಡ, ಕೂಗು ದೇಶದಾದ್ಯಂತ ಪಕ್ಷದೊಳಗೆ ಹೆಚ್ಚುತ್ತಿದೆ. 

ರಾಜಸ್ಥಾನ, ಛತ್ತೀಸಗಡ, ಗುಜರಾತ್‌ನಲ್ಲಿ ಪಕ್ಷದ ರಾಜ್ಯ ಘಟಕಗಳು ಹಿಡಿದ ಹಾದಿಯನ್ನೇ ಅನುಸರಿಸಿರುವ ತಮಿಳುನಾಡು, ಮಹಾರಾಷ್ಟ್ರ ಹಾಗೂ ಬಿಹಾರದಲ್ಲೂ ಪ್ರದೇಶ ಕಾಂಗ್ರೆಸ್‌ ಸಮಿತಿಗಳು, ರಾಹುಲ್‌ ಅವರ ಹೆಗಲಿಗೆ ಪಕ್ಷದ ನಾಯಕತ್ವದ ಚುಕ್ಕಾಣಿ ವಹಿಸಬೇಕೆಂದು ಸೋಮವಾರ ನಿರ್ಣಯ ಕೈಗೊಂಡಿವೆ.

ಚೆನ್ನೈನಲ್ಲಿ ನಡೆದ ಪಕ್ಷದ ಸಾಮಾನ್ಯ ಸಭೆಯಲ್ಲಿ, ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಅಳಗಿರಿ ಅವರು ಎಐಸಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವಂತೆ ರಾಹುಲ್ ಗಾಂಧಿಯವರನ್ನು ಕೋರಿ ಪ್ರಸ್ತಾಪಿಸಿದ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ಇದನ್ನು ಪಕ್ಷವು ಟ್ವೀಟ್‌ನಲ್ಲಿ ತಿಳಿಸಿದೆ.

ದಕ್ಷಿಣ ಮುಂಬೈನ ವೈ.ಬಿ. ಚವಾಣ್‌ ಕೇಂದ್ರದಲ್ಲಿ ನಡೆದ ಮಹಾರಾಷ್ಟ್ರ ರಾಜ್ಯ ಕಾಂಗ್ರೆಸ್‌ ಘಟಕದ 553 ಪ್ರತಿನಿಧಿಗಳು ಭಾಗವಹಿಸಿದ್ದ ಸಭೆಯಲ್ಲೂ ಇದೇ ರೀತಿಯ ನಿರ್ಣಯ ಅಂಗೀಕರಿಸಲಾಯಿತು. 

ಕಾಂಗ್ರೆಸ್‌ ಆಡಳಿತವಿರುವ ರಾಜಸ್ಥಾನ ಮತ್ತು ಛತ್ತೀಸಗಡದಲ್ಲಿ ರಾಜ್ಯ ಘಟಕಗಳು, ರಾಹುಲ್ ಗಾಂಧಿಯವರೇ ಪಕ್ಷದ ಅಧ್ಯಕ್ಷರಾಗಬೇಕೆಂಬ ನಿರ್ಣಯಗಳನ್ನು ಮೊದಲು ಅಂಗೀಕರಿಸಿವೆ. ಭಾನುವಾರವಷ್ಟೇ ಗುಜರಾತ್ ಕಾಂಗ್ರೆಸ್ ಘಟಕವೂ ಇದೇ ನಿರ್ಣಯ ಕೈಗೊಂಡಿದೆ.  

ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್‌ ಸಲ್ಲಿಸಿದ ನಿರ್ಣಯವನ್ನು ಹಿರಿಯ ನಾಯಕರಾದ ನಸೀಮ್ ಖಾನ್ ಹಾಗೂ ಚಂದ್ರಕಾಂತ್ ಹಂದೊರೆ ಅವರು ಅಂಗೀಕರಿಸಿದರು. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಾನಾ ಪಟೋಲ್‌ ಅವರು, ರಾಜ್ಯ ಘಟಕದ ಅಧ್ಯಕ್ಷರು, ಕಚೇರಿ ಸಿಬ್ಬಂದಿ ಹಾಗೂ ಎಐಸಿಸಿ ಪ್ರತಿನಿಧಿಗಳನ್ನು ನೇಮಿಸುವ ಅಧಿಕಾರವನ್ನು ಕಾಂಗ್ರೆಸ್ ಅಧ್ಯಕ್ಷರಿಗೆ ನೀಡುವ ನಿರ್ಣಯ ಮಂಡಿಸಿದರು. ಕಾಂಗ್ರೆಸ್‌ ಶಾಸಕಾಂಗ ನಾಯಕ ಬಾಳಸಾಹೇಬ್ ಥೋರಟ್‌ ಇದನ್ನು ಅನುಮೋದಿಸಿದರು.

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ 3,500 ಕಿ.ಮೀ ದೂರದ ಕಾಲ್ನಡಿಗೆಯ ‘ಭಾರತ್ ಜೋಡೊ ಯಾತ್ರೆ’ಯನ್ನು ರಾಹುಲ್‌ ಗಾಂಧಿ ಸೆ.7 ರಂದು ಪ್ರಾರಂಭಿಸಿದ್ದಾರೆ.

ಇಂಧನ ಬೆಲೆ ಏರಿಕೆ, ಸಬ್ಸಿಡಿ ಕಡಿತ ಸಮಸ್ಯೆ ಬಗ್ಗೆ ಚರ್ಚೆ

ಮೀನುಗಾರರ ಅಹವಾಲು ಆಲಿಸಿದ ರಾಹುಲ್‌

ಆಲಪ್ಪುಳ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು 12ನೇ ದಿನದ ‘ಭಾರತ್‌ ಜೋಡೊ’ ಯಾತ್ರೆಯನ್ನು ಆರಂಭಿಸುವಾಗ ವಡಾಕಲ್‌ ಬೀಚ್‌ನಲ್ಲಿ ಮಿನುಗಾರರ ಸಮುದಾಯದವರ ಜತೆಗೆ ಸೋಮವಾರ ಸಂವಾದ ನಡೆಸಿದರು. ದೋಣಿಯಲ್ಲಿ ಕುಳಿತು ಹುಟ್ಟು ಹಾಕುವ ಮೂಲಕ ರಾಹುಲ್‌ ಗಾಂಧಿ ಗಮನ ಸೆಳೆದರು.

ನಸುಕಿನಲ್ಲಿ ಮೀನುಗಾರರೊಂದಿಗೆ ಸಭೆ ಮಾಡಿದ ರಾಹುಲ್‌ ಗಾಂಧಿ, ಹೆಚ್ಚುತ್ತಿರುವ ಇಂಧನ ವೆಚ್ಚಗಳು, ಸಬ್ಸಿಡಿಗಳ ಕಡಿತ, ಮೀನು ದಾಸ್ತಾನು ಕ್ಷೀಣಿಸುವಿಕೆ, ಪರಿಸರ ನಾಶ, ಸಾಮಾಜಿಕ ಕಲ್ಯಾಣ ಮತ್ತು ಪಿಂಚಣಿ ಸೌಲಭ್ಯಗಳ ಕೊರತೆ, ಅಸಮರ್ಪಕ ಶೈಕ್ಷಣಿಕ ಅವಕಾಶಗಳು ಹಾಗೂ ಇತರ ಸವಾಲುಗಳ ಕುರಿತು ಚರ್ಚಿಸಿದರು. ಈ ವಿಷಯವನ್ನು ಪಕ್ಷದ ಹಿರಿಯ ನಾಯಕ ಜೈರಾಮ್‌ ರಮೇಶ್‌ ಅವರು ಟ್ವೀಟ್‌ ಮಾಡಿದ್ದಾರೆ.

ಪಕ್ಷದ ನಾಯಕರಾದ ಕೆ.ಮುರಳೀಧರನ್, ಕೊಡಿಕ್ಕುನ್ನಿಲ್‌ ಸುರೆಶ್, ರಮೇಶ್ ಚೆನ್ನಿಥಾಲಾ, ಕೆ.ಸಿ. ವೇಣುಗೋಪಾಲ್ ಹಾಗೂ ಪ್ರತಿ ಪಕ್ಷದ ನಾಯಕ ವಿ.ಡಿ. ಶತೀಶನ್ ಅವರು ಪಾದಯಾತ್ರೆಯಲ್ಲಿ ರಾಹುಲ್‌ ಗಾಂಧಿಯವರಿಗೆ ಸಾಥ್‌ ನೀಡಿದರು.  

 ಸೆ.10 ರಂದು ಕೇರಳ ಪ್ರವೇಶಿಸಿರುವ ‘ಭಾರತ್ ಜೋಡೊ’ ಯಾತ್ರೆಯು 19 ದಿನಗಳ ಅವಧಿಯಲ್ಲಿ ಏಳು ಜಿಲ್ಲೆಗಳನ್ನು ಹಾದು, ಅಕ್ಟೋಬರ್ 1ರಂದು ಕರ್ನಾಟಕಕ್ಕೆ ಪ್ರವೇಶಿಸಲಿದೆ.

‘ಕಾಂಗ್ರೆಸ್, ರಾಹುಲ್‌ಗೆ ‘ಭಾರತ್ ಜೋಡೊ’ ಯಾತ್ರೆ ಉಪಯುಕ್ತ’

ಪುಣೆ: ‘ಭಾರತ್‌ ಜೋಡೊ’ ಯಾತ್ರೆಯಿಂದ ಕಾಂಗ್ರೆಸ್‌ ಪಕ್ಷಕ್ಕೆ ಮತ್ತು ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರಿಗೆ ಪ್ರಯೋಜನವಿದೆ ಎನ್ನುವುದನ್ನು ನಿರಾಕರಿಸಲಾಗದು ಎಂದು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಸೋಮವಾರ ಹೇಳಿದ್ದಾರೆ.  

2024ರ ಲೋಕಸಭೆ ಚುನಾವಣೆಗೆ ವಿರೋಧ ಪಕ್ಷಗಳಲ್ಲಿ ಒಗ್ಗಟ್ಟು ಮೂಡಿದರೆ, ಕಾಂಗ್ರೆಸ್ ಒಳಗೊಳ್ಳುವಿಕೆಯನ್ನು ವಿರೋಧಿಸುವುದಿಲ್ಲವೆಂಬ ಸುಳಿವನ್ನು ಪವಾರ್‌  ನೀಡಿದರು.

ಮಹಾರಾಷ್ಟ್ರದ ಸೋಲ್ಲಾಪುರ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಭಾರತ್ ಜೋಡೊ’ ಯಾತ್ರೆಯಂತಹ ಬಹೃತ್‌ ಪಾದಯಾತ್ರೆ ರಾಜಕೀಯ ಪ್ರಭಾವ ಬೀರಲಿದೆ. ಜನರು ಇಂತಹ ಪಾದಯಾತ್ರೆಯನ್ನು ಪ್ರಾಮಾಣಿಕ ಉದ್ದೇಶದಿಂದ ಸ್ವಾಗತಿಸುತ್ತಾರೆ. ಇಂತಹ ದೊಡ್ಡ ಯಾತ್ರೆ ಕೈಗೊಂಡಾಗ ಅದರಿಂದ ಪಕ್ಷ ಮತ್ತು ನಾಯಕರಿಗೆ ಪ್ರಯೋಜವಾಗಲಿದೆ ಎನ್ನುವುದನ್ನು ತಳ್ಳಿಹಾಕಲಾಗದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. 

‘ಭಾರತ್‌ ಜೋಡೊ ಯಶಸ್ಸು; ಬಿಜೆಪಿಗೆ ಹತಾಶೆ’

ನವದೆಹಲಿ: ‘ಭಾರತ್‌ ಜೋಡೊ’ ಯಾತ್ರೆಯ ಯಶಸ್ಸಿನಿಂದ ಬಿಜೆಪಿಯ ನಾಯಕರು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಭಯಭೀತರಾಗಿದ್ದಾರೆ ಮತ್ತು ಹತಾಶೆಗೊಂಡಿದ್ದಾರೆ. ಹಾಗಾಗಿಯೇ ಯಾತ್ರೆ ಕುರಿತು ಸುಳ್ಳು ಮತ್ತು ಅಪ ಪ್ರಚಾರದ ಹಾದಿ ಹಿಡಿದಿದ್ದಾರೆ ಎಂದು ಕಾಂಗ್ರೆಸ್‌ ಸೋಮವಾರ ಆರೋಪಿಸಿದೆ.

ಕಾಂಗ್ರೆಸ್ ವಕ್ತಾರ ಗೌರವ್ ವಲ್ಲಭ್‌, ಯಾತ್ರೆಯ ಉದ್ದಕ್ಕೂ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಇದರಿಂದ ಧೃತಿಗೆಟ್ಟಿರುವ ಬಿಜೆಪಿ ನಾಯಕತ್ವ ರಾಹುಲ್ ಗಾಂಧಿಯವರ ಮೇಲೆ ವಾಗ್ದಾಳಿಗಿಳಿದಿದೆ. ಪ್ರಧಾನಿ ಮೋದಿಯವರ ಭೀತಿ, ಬಿಜೆಪಿ ನಾಯಕರ ಕೃತಿ ಮತ್ತು ಮಾತಿನಲ್ಲಿ ಹತಾಶೆಯ ರೂಪದಲ್ಲಿ ಪ್ರತಿಫಲಿಸುತ್ತಿದೆ ಎಂದು ಟೀಕಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು