ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಲ್ಕಿಸ್ ಅತ್ಯಾಚಾರಿಗಳ ಬಿಡುಗಡೆ: ಮೋದಿ ಅನುಮತಿ ಇದೆಯೇ– ಕಾಂಗ್ರೆಸ್‌ ಪ್ರಶ್ನೆ

Last Updated 17 ಆಗಸ್ಟ್ 2022, 15:48 IST
ಅಕ್ಷರ ಗಾತ್ರ

ನವದೆಹಲಿ: ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಬಿಡುಗಡೆಗೊಳಿಸಿರುವ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಬುಧವಾರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಗುಜರಾತ್ ಸರ್ಕಾರದ ನಿರ್ಧಾರವನ್ನು ಮೋದಿ ಅವರು ಅನುಮೋದಿಸಿದ್ದಾರೆಯೇ ಎಂದು ಪ್ರಶ್ನೆ ಮಾಡಿದೆ.

‘ಅಪರಾಧಿಗಳನ್ನು ಬಿಡುಗಡೆ ಮಾಡುವ ಮುನ್ನ ಗುಜರಾತ್ ಸರ್ಕಾರವು ಕೇಂದ್ರ ಸರ್ಕಾರದಿಂದ ಅನುಮತಿಯನ್ನು ಕೋರಿತ್ತೇ ಎನ್ನುವ ಕುರಿತು ನಾವು ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಉತ್ತರವನ್ನು ಕೋರುತ್ತೇವೆ’ ಎಂದು ಕಾಂಗ್ರೆಸ್ ವಕ್ತಾರ ಹಾಗೂ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್ ಖೇರಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

‘ಒಂದು ವೇಳೆ ಗುಜರಾತ್ ಸರ್ಕಾರವು ಕೇಂದ್ರದಿಂದ ಅನುಮತಿಯನ್ನು ಪಡೆದುಕೊಂಡಿಲ್ಲವಾದರೆ, ಪ್ರಧಾನಿ ಅವರ ಮಾತುಗಳು ಪೊಳ್ಳು ಎಂದು ಸಾಬೀತಾಗುತ್ತದೆ. ಪ್ರಧಾನಿ ಅವರು ಗುಜರಾತ್‌ನ ಬಿಜೆಪಿ ಸರ್ಕಾರದ ವಿರುದ್ಧ ಯಾವ ಕ್ರಮ ಕೈಗೊಳ್ಳುವರು? ಅಪರಾಧಿಗಳ ಶಿಕ್ಷೆ ಕಡಿತಗೊಳಿಸಿ, ಬಿಡುಗಡೆ ಮಾಡಲು ಶಿಫಾರಸು ಮಾಡಿದ್ದ ಜೈಲಿನ ಸಲಹಾ ಮಂಡಳಿಯಲ್ಲಿ ಯಾರು ಸದಸ್ಯರಿದ್ದರು ಎಂಬುದನ್ನೂ ನಾವು ತಿಳಿಯಬಯಸುತ್ತೇವೆ’ ಎಂದ ಅವರು, ‘ಈ ಮಂಡಳಿಯಲ್ಲಿ ಬಿಜೆಪಿಯ ಇಬ್ಬರು ಶಾಸಕರಿದ್ದರು’ ಎಂದೂ ಆರೋಪಿಸಿದ್ದಾರೆ.

‘ಒಂದು ವೇಳೆ ಇಂಥ ಪ್ರಕರಣಗಳನ್ನು ಸಿಬಿಐನಂಥ ಕೇಂದ್ರ ಅಪರಾಧ ಸಂಸ್ಥೆಗಳು ತನಿಖೆ ನಡೆಸಿದ್ದರೆ, ಆ ರಾಜ್ಯವು ಯಾವುದೇ ಕ್ರಮ ಅಥವಾ ಪರಿಹಾರವನ್ನು ನೀಡುವ ಮುನ್ನ ಕೇಂದ್ರ ಸರ್ಕಾರದ ಸಮ್ಮತಿ ಪಡೆದಿರಬೇಕೆಂದು ಕಾನೂನು ಹೇಳುತ್ತದೆ. ಅಷ್ಟೇ ಅಲ್ಲ, ಈ ವಿಚಾರವನ್ನು ಗುಜರಾತ್ ಸರ್ಕಾರವು ನ್ಯಾಯಾಲಯದ ಜತೆಗೆ ಹಂಚಿಕೊಂಡಿದೆಯೇ ಎಂದೂ ಅವರು ಪ್ರಶ್ನಿಸಿದ್ದಾರೆ.

‘ಪ್ರಧಾನಿ ಮತ್ತು ಗೃಹ ಸಚಿವರ ಅನುಮೋದನೆಯಿಲ್ಲದೆ ಗುಜರಾತ್ ಸರ್ಕಾರವು ಅಪರಾಧಿಗಳ ಶೀಘ್ರ ಬಿಡುಗಡೆಯನ್ನು ಅನುಮೋದಿಸಲು ಸಾಧ್ಯವೇ’ ಎಂದೂ ಕಾಂಗ್ರೆಸ್ ಕೇಳಿದೆ.

‘ಈ ಅನ್ಯಾಯದ ಬಗ್ಗೆ ಇತರ ವಿರೋಧಪಕ್ಷಗಳ ವಿವಿಧ ವಿಭಾಗಗಳು ಪ್ರಶ್ನಿಸದೇ ಏಕೆ ಮೌನವಾಗಿವೆ’ ಎಂದ ಖೇರಾ,‘ನಿರ್ಭಯಾ’ ಪ್ರಕರಣವನ್ನು ಆಧಾರವಾಗಿಟ್ಟುಕೊಂಡು ರಾಜಕೀಯ ಪ್ರವೇಶಿಸಿದ ಪಕ್ಷಗಳು ಇಂದು ಏಕೆ ಮೌನವಾಗಿವೆ? ಅವು ಕೇವಲ ಮತಗಳನ್ನು ಗಳಸಿಲು ಮಾತ್ರ ಅಸ್ತಿತ್ವದಲ್ಲಿವೆಯೇ’ ಎಂದೂ ಪರೋಕ್ಷವಾಗಿ ಆಮ್ ಆದ್ಮಿ ಪಕ್ಷದ ವಿರುದ್ಧ ವ್ಯಂಗ್ಯವಾಡಿದರು.

‘ನಿರ್ಭಯಾ ಅತ್ಯಾಚಾರ ನಂತರ ಒಂದೇ ದನಿಯಲ್ಲಿ ಬಲವಾದ ಕಾನೂನುಗಳನ್ನು ರೂಪಿಸಲು ಬಯಸಿದ್ದ ಮಾಧ್ಯಮಗಳೂ ಇಂದು ಏಕೆ ಮೌನವಾಗಿವೆ ಎಂಬುದನ್ನು ನಾವು ಕೇಳಲು ಬಯಸುತ್ತೇವೆ. ಇಂದು ನಾವು ಇಂಥ ಪ್ರಶ್ನೆಗಳ್ನು ಕೇಳದಿದ್ದರೆ ದೇಶಕ್ಕೆ ನಾಳೆಗಳು ಇರುವುದಿಲ್ಲ. ನಮ್ಮ ಸಮಾಜವೇ ಗಬ್ಬು ನಾರುತ್ತದೆ’ ಎಂದರು.

ಕೇಂದ್ರ ಸರ್ಕಾರದ 2014ರ ನೀತಿಯ ಪ್ರಕಾರ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದವರಿಗೆ ಕ್ಷಮೆ ನೀಡಲು ಸಾಧ್ಯವಿಲ್ಲ. ಗುಜರಾತ್ ಸರ್ಕಾರವು ಸುಪ್ರೀಂ ಕೋರ್ಟ್ ಆಧಾರದ ಮೇಲೆ ಶಿಕ್ಷೆಯಲ್ಲಿ ವಿನಾಯಿತಿ ನೀಡಲಾಗಿದೆ ಎಂದು ಹೇಳಿರುವುದು ದಿಕ್ಕು ತಪ್ಪಿಸುವ ತಂತ್ರ ಎಂದೂ ಖೇರಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT