ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆಯ ಪರಿಸ್ಥಿತಿಯನ್ನು ಅರೇಂಜ್ಡ್ ಮ್ಯಾರೇಜ್‌ಗೆ ಹೋಲಿಸಿದ ಕಿರಣ್ ಮಜುಂದಾರ್

Last Updated 15 ಮೇ 2021, 14:39 IST
ಅಕ್ಷರ ಗಾತ್ರ

ಬೆಂಗಳೂರು: ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಅವರು ದೇಶದ ಕೋವಿಡ್ -19 ಲಸಿಕಾ ಪರಿಸ್ಥಿತಿಯನ್ನು ಅರೇಂಜ್ಡ್ ಮ್ಯಾರೇಜ್‌ಗೆ ಹೋಲಿಸಿದ್ದಾರೆ. ಪ್ರಸ್ತುತ, ಲಸಿಕೆ ಬಗ್ಗೆ ಇರುವ ಗೊಂದಲವನ್ನು ಅವರು ಈ ರೀತಿ ಬಣ್ಣಿಸಿದ್ದಾರೆ.

‘ಭಾರತದಲ್ಲಿ ಲಸಿಕೆ ಪರಿಸ್ಥಿತಿಯು ಅರೇಂಜ್ಡ್ ಮ್ಯಾರೇಜ್‌ ರೀತಿ ಇದೆ. ಮೊದಲು ನೀವು ಲಸಿಕೆಗೆ ಸಿದ್ಧವಾಗಿರಲಿಲ್ಲ, ಬಳಿಕ, ನೀವು ಯಾವುದನ್ನೂ ಇಷ್ಟಪಡುತ್ತಿರಲಿಲ್ಲ, ನಂತರ ನಿಮಗೆ ಯಾವುದೂ ಸಿಗುತ್ತಿಲ್ಲ. ಸಿಕ್ಕಿದವರು ಅತೃಪ್ತಿಕರಾಗಿ ಬೇರೊಂದು ಲಸಿಕೆ ಪಡೆದಿದ್ದರೆ ಉತ್ತಮವಾಗಿರುತ್ತಿತ್ತೋ ಏನೋ ಎಂದು ಚಿಂತಿಸುತ್ತಿದ್ದಾರೆ. ಯಾವುದನ್ನೂ ಪಡೆಯದ ಕೆಲವರು ಈಗ ಯಾವುದಾದರೂ ಒಂದನ್ನು ಪಡೆಯಲು ಇಚ್ಛಿಸುತ್ತಿದ್ದಾರೆ’ ಎಂದು ಮಜುಂದಾರ್ ಷಾ ಶನಿವಾರ ಟ್ವೀಟ್ ಮಾಡಿದ್ದಾರೆ.

ಈ ವಾರದ ಆರಂಭದಲ್ಲಿ, ಕೋವಿಡ್ -19 ಲಸಿಕೆಗಳ ಕೊರತೆಯ ಬಗ್ಗೆ ಮಜುಂದಾರ್ ಶಾ ಕಳವಳ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಲಸಿಕೆ ಲಭ್ಯತೆಯ ಬಗ್ಗೆ ಸರ್ಕಾರದಿಂದ ಪಾರದರ್ಶಕತೆ ಅಗತ್ಯವಿತ್ತು. ಹಾಗಾಗಿದ್ದರೆ, ನಾಗರಿಕರು ತಮ್ಮ ಸರದಿಗಾಗಿ ತಾಳ್ಮೆಯಿಂದ ಕಾಯುತ್ತಿದ್ದರು ಎಂದು ಹೇಳಿದ್ದರು.

‘ಲಸಿಕೆಗಳ ಪೂರೈಕೆ ಏಕೆ ಕಡಿಮೆ ಇದೆ ಎಂಬುದರ ಬಗ್ಗೆ ಬಹಳ ಕಳವಳವಾಗುತ್ತಿದೆ. ಪ್ರತಿ ತಿಂಗಳು 70 ಮಿಲಿಯನ್ ಡೋಸ್‌ ಲಸಿಕೆ ಎಲ್ಲಿ ಹೋಗುತ್ತಿದೆ ಎಂದು ನಮಗೆ ತಿಳಿಯಬಹುದೇ? ಸಸ್ಪೆನ್ಸ್ ತಪ್ಪಿಸಲು ನಮಗೆ ಪಾರದರ್ಶಕತೆ ಬೇಕು. ಲಸಿಕೆಯ ಸರಬರಾಜು ವೇಳಾಪಟ್ಟಿಯಂತೆ ನಡೆದರೆ ಸಾರ್ವಜನಿಕರು ತಾಳ್ಮೆಯಿಂದ ಕಾಯಬಹುದು’ ಎಂದು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಟ್ಯಾಗ್ ಮಾಡಿ ಮಜುಂದಾರ್-ಶಾ ಅವರು ಟ್ವೀಟ್ ಮಾಡಿದ್ದರು.

ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ದೇಶದ ಅತಿ ದೊಡ್ಡ ಜನಸಂಖ್ಯೆಗೆ ಕೋವಿಡ್ ಲಸಿಕೆ ನೀಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು. ಆ ಬಳಿಕ, ದೆಹಲಿ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಲಸಿಕೆಗಳ ಕೊರತೆಯ ಬಗ್ಗೆ ದೂರು ಬಂದವು. ಲಸಿಕೆ ತಯಾರಕರು ಸಾಕಷ್ಟು ಲಸಿಕೆ ಉತ್ಪಾದನೆ ಮತ್ತು ರವಾನೆಯನ್ನು ಮುಂದುವರಿಸುತ್ತಿದ್ದರೂ ಔಷಧಿಗಳ ಬೇಡಿಕೆ ಮತ್ತು ಪೂರೈಕೆಯ ನಡುವೆ ದೊಡ್ಡ ಅಂತರದ ಬಗ್ಗೆ ಪ್ರಶ್ನೆ ಎದ್ದಿದೆ. ಕೆಲ ರಾಜ್ಯಗಳು ಸದ್ಯ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಅಭಿಯಾನಕ್ಕೆ ಫುಲ್ ಸ್ಟಾಪ್ ಇಟ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT