ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಗೆ ಬಂದ ಬಿಜೆಪಿ ಅತೃಪ್ತರ ಬಣ: ಬಿಎಸ್‌ವೈ ವಿರುದ್ಧ ದೂರು

ವರಿಷ್ಠರೆದುರು ಪ್ರಕಟವಾದ ಅಸಮಾಧಾನ
Last Updated 27 ನವೆಂಬರ್ 2020, 21:28 IST
ಅಕ್ಷರ ಗಾತ್ರ

ನವದೆಹಲಿ: ಹಲವು ಘೋಷಣೆಗಳೊಂದಿಗೆ ರಾಜ್ಯದಲ್ಲಿ ವಿವಿಧ ಸಮುದಾಯಗಳ ಮೇಲೆ ‘ಹಿಡಿತ’ ಸಾಧಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಯತ್ನಿಸುತ್ತಿದ್ದರೆ, ರಾಷ್ಟ್ರ ರಾಜಧಾನಿಗೆ ದೌಡಾಯಿಸಿರುವ ಅವರದೇ ಸಂಪುಟ ಸದಸ್ಯರು ಮತ್ತು ಶಾಸಕರ ದಂಡು, ಯಡಿಯೂರಪ್ಪ ಮೇಲೆ ‘ಬಿಗಿಹಿಡಿತ’ ಸಾಧಿಸುವಂತೆ ಹೈಕಮಾಂಡ್‌ ಮನವೊಲಿಸುವ ಕಾರ್ಯ ನಡೆಸಿದೆ.

ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರ ಕಚೇರಿ ಉದ್ಘಾಟನೆಯ ನೆಪದೊಂದಿಗೆ ‘ಸಮಾನಮನಸ್ಕ’ ಮಿತ್ರರೊಂದಿಗೆ ಶುಕ್ರವಾರ ದೆಹಲಿಗೆ ಬಂದಿದ್ದ ಬಿಜೆಪಿಯ ಹಾಲಿ, ಮಾಜಿ ಶಾಸಕರು, ಸಚಿವರು, ಸಂಸದರು, ‘ನಾವು ವರಿಷ್ಠರ ಆಣತಿಗೆ ಬದ್ಧ’ ಎಂಬ ಸಂದೇಶವನ್ನು ರವಾನಿಸಿದರು.

ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್, ರಾಜ್ಯದ ನೂತನ ಉಸ್ತುವಾರಿ ಅರುಣ್‌ ಸಿಂಗ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ ಈ ಮುಖಂಡರು, ಯಡಿಯೂರಪ್ಪ ಅವರ ಆಡಳಿತ ವೈಖರಿ ಕುರಿತು ಅತೃಪ್ತಿ, ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಇವರಲ್ಲಿ ಕೆಲವರು ವರಿಷ್ಠರ ಎದುರು ‘ಒಂದೋ ಯಡಿಯೂರಪ್ಪ ಅವರನ್ನು ನಿಯಂತ್ರಿಸಬೇಕು, ಇಲ್ಲವೇ, ಬದಲಿಸಬೇಕು’ ಎಂಬ ಬೇಡಿಕೆ ಇರಿಸಿದ್ದರೆ, ಇನ್ನು ಕೆಲವರಂತೂ ‘ನಾಯಕತ್ವ ಬದಲಾವಣೆಗೆ ಇದು ಸೂಕ್ತ ಸಮಯ’ ಎಂದೇ ಹೇಳಿದ್ದಾಗಿ ಪಕ್ಷದ ಮೂಲಗಳು ಖಚಿತಪಡಿಸಿವೆ.

ಜನ್ಮದಿನ ಆಚರಿಸಿಕೊಂಡ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರ ನಿವಾಸಕ್ಕೆ ತೆರಳಿದ್ದ ಈ ಎಲ್ಲ ಮುಖಂಡರು, ಅವರಿಗೂ ‘ಶುಭ ಕೋರಿ’ ಮರಳಿದರು. ನಂತರ ಕೇಂದ್ರ ಸಚಿವರಾದ ಪೀಯೂಷ್‌ ಗೋಯೆಲ್‌ ಹಾಗೂ ಧರ್ಮೇಂದ್ರ ಪ್ರಧಾನ್‌ ಅವರನ್ನು ಭೇಟಿ ಮಾಡಿ ಚರ್ಚಿಸಿದರು.

ರಾಜ್ಯದಲ್ಲಿ ಸರ್ಕಾರ ಇದ್ದೂ ಇಲ್ಲದಂತಾಗಿದೆ. ಕೊರೊನಾ, ಪ್ರವಾಹ ಮತ್ತಿತರ ಸಮಸ್ಯೆಗಳು ಇದ್ದರೂ ಮುಖ್ಯಮಂತ್ರಿ ಲೆಕ್ಕಿಸುತ್ತಿಲ್ಲ. ಭ್ರಷ್ಟಾಚಾರ ಮಿತಿಮೀರಿದೆ. ಜೆಸಿಬಿಯೊಂದಿಗೆ ‘ಗೆಬರುವ’ ಮಾದರಿಯಲ್ಲೇ ಭ್ರಷ್ಟಾಚಾರಕ್ಕೆ ಇಳಿದಿದ್ದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ. ಇದರಿಂದ ಶಾಸಕರ ಆಕ್ರೋಶ ಮೇರೆಮೀರಿದೆ. ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ವಿವರಿಸಿದರು.

‘ಸಂಪುಟ ಪುನಾರಚನೆ ವೇಳೆ ಸ್ಥಾನ ಕಳೆದುಕೊಳ್ಳುವ ಭಯ ಕೆಲವು ಸಚಿವರಿಗಿದೆ. ಕೆಲವು ಶಾಸಕರಿಗೆ ಸಂಪುಟಕ್ಕೆ ಸೇರುವ ಬಯಕೆ ಇದೆ. ಅಂಥವರು ಕೈಬಿಡದಂತೆಯೂ, ಸೇರ್ಪಡೆ ಮಾಡಿಕೊಳ್ಳುವಂತೆಯೂ ಲಾಬಿ ನಡೆಸಲೂ ವರಿಷ್ಠರನ್ನು ಭೇಟಿಯಾದ ಸಾಧ್ಯತೆಗಳಿವೆ’ ಎಂದೂ ಅವರು ಹೇಳಿದರು.

‘ಅಭಿವೃದ್ಧಿ ಕಾರ್ಯಗಳೇ ನಡೆಯದ್ದರಿಂದ ಮತದಾರರಿಗೆ ಉತ್ತರ ಕೊಡಲಾಗುತ್ತಿಲ್ಲ. ಸಮಸ್ಯೆ ತಿಳಿಸಲು ಹೋದರೆ, ಯಡಿಯೂರಪ್ಪ ಭೇಟಿಗೆ ಅವರ ಪುತ್ರ ಅವಕಾಶ ನೀಡುವುದಿಲ್ಲ. ಎಲ್ಲದರಲ್ಲೂ ಹಸ್ತಕ್ಷೇಪ ಮುಂದುವರಿದಿದೆ. ನಮಗೂ ಕೆಟ್ಟ ಹೆಸರು ತರುತ್ತಿರುವ ಈ ಸರ್ಕಾರ ಇದ್ದರೆಷ್ಟು ಬಿಟ್ಟರೆಷ್ಟು ಎಂಬ ಅಭಿಪ್ರಾಯ ಸಾಮಾನ್ಯವಾಗಿ ಕೇಳಿಬರುತ್ತಿದೆ’ ಎಂಬುದು ವಿಧಾನ ಪರಿಷತ್‌ನ ಸದಸ್ಯರೊಬ್ಬರ ಆರೋಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT