ಗುರುವಾರ , ಜೂನ್ 24, 2021
25 °C
ಪಂಚಾಯಿತಿ ಚುನಾವಣೆ ಫಲಿತಾಂಶ

ಉತ್ತರ ಪ್ರದೇಶ ಪಂಚಾಯಿತಿ ಚುನಾವಣೆ: ಬಿಜೆಪಿಗೆ ಹಿನ್ನಡೆ, ಎಸ್‌ಪಿಗೆ ಮುನ್ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV File

ಲಖನೌ: ಉತ್ತರ ಪ್ರದೇಶದ ಪಂಚಾಯಿತಿಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಆಡಳಿತಾರೂಢ ಬಿಜೆಪಿಯ ಭದ್ರಕೋಟೆಗಳಲ್ಲಿಯೂ ಸಮಾಜವಾದಿ ಪಕ್ಷಕ್ಕೆ ಮುನ್ನಡೆ ಸಿಕ್ಕಿದೆ. ಫಲಿತಾಂಶವು ಬಿಜೆಪಿಗೆ ಎಚ್ಚರಿಕೆ ಗಂಟೆ ಎಂದು ವಿಶ್ಲೇಷಿಸಲಾಗುತ್ತಿದೆ.

ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲು ಏಳು ತಿಂಗಳಷ್ಟೇ ಉಳಿದಿರುವ ಈ ಸಂದರ್ಭದಲ್ಲಿ ಬಂದಿರುವ ಫಲಿತಾಂಶವು ಸಮಾಜವಾದಿ ಪಕ್ಷದಲ್ಲಿ (ಎಸ್‌ಪಿ) ಭಾರಿ ಹುರುಪು ತುಂಬಿದೆ. ಜಿಲ್ಲಾ ಪಂಚಾಯಿತಿಗಳ 3,050 ಸ್ಥಾನಗಳ ಪೈಕಿ 760ರಲ್ಲಿ ಎಸ್‌ಪಿ ಬೆಂಬಲಿತ ಅಭ್ಯರ್ಥಿಗಳು ಗೆದ್ದಿದ್ದಾರೆ.

ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪೈಕಿ 750 ಮಂದಿ ಗೆದ್ದಿದ್ದಾರೆ. ಬಿಎಸ್‌ಪಿ ಬೆಂಬಲದ 381 ಮತ್ತು ಕಾಂಗ್ರೆಸ್ ಬೆಂಬಲದ 76 ಅಭ್ಯರ್ಥಿಗಳು ಗೆಲುವು ಪಡೆದಿದ್ದಾರೆ. ಪಕ್ಷೇತರರು 1,083 ಸ್ಥಾನಗಳನ್ನು ಗೆದ್ದಿದ್ದಾರೆ.

ಪಂಚಾಯಿತಿಯ ಬಹುತೇಕ ಎಲ್ಲ ಸ್ಥಾನಗಳನ್ನು ಗೆಲ್ಲಲಾಗುವುದು ಎಂದು ಬಿಜೆಪಿ ಫಲಿತಾಂಶಕ್ಕೆ ಮುನ್ನ ಹೇಳಿತ್ತು. ಈಗಿನ ಫಲಿತಾಂಶವು ಆ ಪಕ್ಷಕ್ಕೆ ಆಘಾತ ನೀಡಿದೆ. ಬಿಜೆಪಿಯ ಭದ್ರಕೋಟೆಗಳಾದ ಕಾಶಿ, ಮಥುರಾ, ಅಯೋಧ್ಯೆ, ಲಖನೌ, ಕಾನ್ಪುರ, ಆಗ್ರಾ ಜಿಲ್ಲೆಗಳಲ್ಲಿಯೇ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಸೋತಿದ್ದಾರೆ.

ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಭಾರಿ ಸಂಖ್ಯೆಯಲ್ಲಿ ಗೆದ್ದಿದ್ದಾರೆ ಎಂದು ಆ ಪಕ್ಷದ ನಾಯಕರು ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದಾರೆ. ಆದರೆ, ಪರಿಸ್ಥಿತಿ ಹಾಗೆ ಇಲ್ಲ ಎಂದು ಪಕ್ಷಗಳು ಮೂಲಗಳು ಹೇಳಿವೆ. ಕೋವಿಡ್‌–19ರ ಎರಡನೇ ಅಲೆಯನ್ನು ಕೆಟ್ಟದಾಗಿ ನಿರ್ವಹಿಸಿರುವುದು ಪಕ್ಷಕ್ಕೆ ದುಬಾರಿಯಾಗಿದೆ ಎಂಬುದು ಮೂಲಗಳ ಅಭಿಪ್ರಾಯವಾಗಿದೆ.

ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆಯು ರಾಜ್ಯದ ಪೂರ್ವ ಮತ್ತು ಕೇಂದ್ರ ಭಾಗಗಳ ಜನರ ಅಸಮಾಧಾನಕ್ಕೆ ಕಾರಣ. ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರಲ್ಲಿ ಇರುವ ಅತೃಪ್ತಿಯು ರಾಜ್ಯದ ಪಶ್ಚಿಮ ಭಾಗದಲ್ಲಿ ಬಿಜೆಪಿಗೆ ಮುಳುವಾಗಿದೆ ಎಂದು ಉತ್ತರ ಪ್ರದೇಶ ಬಿಜೆಪಿಯ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.

ಪಕ್ಷದ ಚುನಾವಣಾ ಕಾರ್ಯತಂತ್ರವನ್ನು ಬದಲಾಯಿಸಲೇಬೇಕಾದ ಅನಿವಾರ್ಯ ಈಗ ಸೃಷ್ಟಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ಬಳಿಕ ಬಹುತೇಕ ನಿಷ್ಕ್ರಿಯವೇ ಆಗಿದ್ದ ಸಮಾಜವಾದಿ ಪಕ್ಷದಲ್ಲಿ ಈಗಿನ ಗೆಲುವು ಭಾರಿ ಉತ್ಸಾಹ ಮೂಡಿಸಿದೆ. ವಿಧಾನಸಭೆಗೆ ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಇಳಿಸಲು ಸಾಧ್ಯ ಎಂಬ ಭರವಸೆ ಮೂಡಿಸಿದೆ. ಕಾಂಗ್ರೆಸ್‌ ಪಕ್ಷಕ್ಕೆ ಭಾರಿ ಮುನ್ನಡೆ ದೊರೆಯದೇ ಇದ್ದರೂ ಸ್ಥಿತಿ ಉತ್ತಮಗೊಂಡಿದೆ. ಕಳೆದ ಬಾರಿಗೆ ಹೋಲಿಸಿದರೆ, ಪಂಚಾಯಿತಿಗಳಲ್ಲಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳ ಸಂಖ್ಯೆ ದುಪ್ಪಟ್ಟಾಗಿದೆ. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಲೋಕಸಭೆಯಲ್ಲಿ ಪ್ರತಿನಿಧಿಸುತ್ತಿರುವ ರಾಯಬರೇಲಿಯಲ್ಲಿ ಪಕ್ಷವು ಉತ್ತಮ ಸಾಧನೆ ಮಾಡಿದೆ.

ಪಂಚಾಯಿತಿ ಚುನಾವಣೆಯಲ್ಲಿ ಮತದಾರರು ಎಸ್‌ಪಿಗೆ ಆದ್ಯತೆ ಕೊಟ್ಟಿದ್ದಾರೆ. ಎಸ್‌ಪಿ ಬೆಂಬಲಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಪ್ರಜಾಪ್ರಭುತ್ವ ಉಳಿಸುವ ದಿಸೆಯಲ್ಲಿ ಜನರು ಅದ್ಭುತವಾದ ಕೆಲಸ ಮಾಡಿದ್ದಾರೆ ಎಂದು ಎಸ್‌ಪಿ ಅಧ್ಯಕ್ಷ ಅಖಿಲೇಶ್‌ ಯಾದವ್‌ ಹೇಳಿದ್ದಾರೆ.

ರಾಜ್ಯದಾದ್ಯಂತ ಪಕ್ಷಕ್ಕೆ ಭಾರಿ ಗೆಲುವು ಸಿಕ್ಕಿದೆ ಎಂದು ಬಿಜೆಪಿಯ ರಾಜ್ಯ ಮಟ್ಟದ ನಾಯಕರು ಹೇಳಿದ್ದಾರೆ. ಆದರೆ, ಪಂಚಾಯಿತಿ ಚುನಾವಣೆಯಲ್ಲಿ ಭಾರಿ ಹಿನ್ನಡೆ ಆಗಿದೆ ಎಂದು ಬಿಜೆಪಿಯ ಅಯೋಧ್ಯೆ ಘಟಕವು ಸೋಲೊಪ್ಪಿಕೊಂಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು