ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂಟನ್‌ ನಿಯಮ ಹೇಳಿ ಹತ್ಯೆ ಸಮರ್ಥಿಸಿಕೊಂಡ ಬಿಜೆಪಿ ಶಾಸಕ ಸುರೇಂದ್ರ ಸಿಂಗ್

ಉತ್ತರ ಪ್ರದೇಶ ಶಾಸಕನ ಸಹಾಯಕನಿಂದ ಹತ್ಯೆ
Last Updated 16 ಅಕ್ಟೋಬರ್ 2020, 14:00 IST
ಅಕ್ಷರ ಗಾತ್ರ

ಲಖನೌ: ತಮ್ಮ ಸಹಾಯಕ ಮಾಡಿದ ಹತ್ಯೆಯನ್ನು ಸಮರ್ಥಿಸಿಕೊಳ್ಳಲು ಬಿಜೆಪಿ ಶಾಸಕರೊಬ್ಬರು ಭೌತವಿಜ್ಞಾನಿ ಐಸಾಕ್ ನ್ಯೂಟನ್‌ ಅವರ ಮೂರನೇ ನಿಯಮವನ್ನು ಉಲ್ಲೇಖಿಸಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ಗುರುವಾರ ನಡೆದಿದೆ.

ನ್ಯೂಟನ್‌ನ ಚಲನೆಯ ಮೂರನೇ ನಿಯಮದ ಪ್ರಕಾರ ‘ಪ್ರತಿಯೊಂದು ಕ್ರಿಯೆಗೂ ಪ್ರತಿಕ್ರಿಯೆ ಇದ್ದೇ ಇರುತ್ತದೆ’ ಎಂದು ಹೇಳಿ ತಮ್ಮ ಸಹಾಯಕ ಮಾಡಿದ ಹತ್ಯೆಯನ್ನು ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಸಮರ್ಥಿಸಿಕೊಂಡಿದ್ದಾರೆ.

ಬಲ್ಲಿಯಾ ಜಿಲ್ಲೆಯ ದುರ್ಜನ್‌ಪುರ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿಗಳ ಹಂಚಿಕೆ ಕುರಿತು ಗುರುವಾರ ಅಧಿಕಾರಿಗಳ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ನಡೆದ ವಾಗ್ವಾದದಲ್ಲಿ ಶಾಸಕರ ಸಹಾಯಕ ಧೀರೇಂದ್ರ ಸಿಂಗ್, ತನ್ನ ಪ್ರತಿಸ್ಪರ್ಧಿ ಜೈಪ್ರಕಾಶ್ ಪಾಲ್ ಎನ್ನುವವರ ಮೇಲೆ ಮೇಲೆ ನಾಲ್ಕು ಸುತ್ತು ಗುಂಡು ಹಾರಿಸಿ ಹತ್ಯೆ ಮಾಡಿದರು. ಇದನ್ನು ಶಾಸಕ ಸುರೇಂದ್ರ ಸಿಂಗ್ ಸಮರ್ಥಿಸಿಕೊಂಡಿದ್ದು, ಧೀರೇಂದ್ರ ತನ್ನ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾನೆ ಎಂದಿದ್ದಾರೆ.

‘ಯಾರಾದರೂ ಒಬ್ಬರಿಗೆ ಹೊಡೆದರೆ ಅಥವಾ ಸಹೋದರ, ಅಮ್ಮನಿಗೆ ಹೊಡೆದರೆ ಅವರ ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಸಿಕ್ಕೇ ಸಿಗುತ್ತದೆ ಎಂಬುದು ನನ್ನ ನಂಬಿಕೆ’ ಎಂದು ಶಾಸಕ ಸುರೇಂದ್ರ ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮೂಲಗಳ ಪ್ರಕಾರ, ಧೀರೇಂದ್ರ ಸಿಂಗ್ ತನ್ನ ಪ್ರತಿಸ್ಪರ್ಧಿಗೆ ಗುಂಡಿಕ್ಕಿದ ನಂತರ ಹಲವು ಸುತ್ತು ಗುಂಡು ಹಾರಿಸಿದ್ದ. ಇದರಿಂದ ಭಯಭೀತರಾಗಿದ್ದ ಅಧಿಕಾರಿಗಳು, ಪೊಲೀಸರು ಅಲ್ಲಿಂದ ಓಡಿಹೋಗಿದ್ದರು. ಈ ಸಂದರ್ಭದಲ್ಲಿ ಧೀರೇಂದ್ರ ಅಲ್ಲಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ ಎನ್ನಲಾಗಿದೆ.

‘ಶಾಸಕ ನೀಡಿದ ಪ್ರೋತ್ಸಾಹದಿಂದಲೇಧೀರೇಂದ್ರ ಈ ಕೃತ್ಯ ಎಸಗಿದ್ದಾನೆ. ಹಾಗಾಗಿ, ಪೊಲೀಸರು ಆರೋಪಿಗೆ ಪರಾರಿಯಾಗಲು ಅನುವು ಮಾಡಿಕೊಟ್ಟಿದ್ದಾರೆ’ ಎಂದು ಹತ್ಯೆಗೀಡಾದ ಜೈಪ್ರಕಾಶ್ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.

ಹತ್ಯೆಗೀಡಾದ ಪ್ರದೇಶದಲ್ಲಿ ಉದ್ವಿಗ್ನದ ವಾತಾವರಣ ಉಂಟಾಗಿದ್ದು, ಉತ್ತರ ಪ್ರದೇಶ ಸರ್ಕಾರವು, ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್, ಸರ್ಕಲ್ ಇನ್‌ಸ್ಪೆಕ್ಟರ್ ಸೇರಿದಂತೆ ಐವರು ಅಧಿಕಾರಿಗಳನ್ನು ಅಮಾನತು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT