ಸೋಮವಾರ, ಜನವರಿ 24, 2022
23 °C

ಬಿಜೆಪಿಯ ಸೂರ್ಯ ಅಸ್ತಮಿಸುವುದು ನಿಶ್ಚಿತ: ಅಖಿಲೇಶ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ: ‘ಬಿಜೆಪಿಯ ಸೂರ್ಯ ಅಸ್ತಮಿಸುವುದು ನಿಶ್ಚಿತ. ಬಿಜೆಪಿಯವರು ರೈತರ ಮೇಲೆ ದೌರ್ಜನ್ಯ ಎಸಗಿದ್ದಾರೆ. ರೈತರನ್ನು ವಾಹನದ ಚಕ್ರಕ್ಕೆ ಸಿಲುಕಿಸಿ ತುಳಿದಿದ್ದಾರೆ. ಚುನಾವಣೆಯಲ್ಲಿ ಬಿಜೆಪಿ ನಿರ್ನಾಮವಾಗಲಿದೆ’ ಎಂದು ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್‌ ಯಾದವ್‌ ಹೇಳಿದರು.

ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಜೊತೆಗಿನ ಚುನಾವಣಾ ಮೈತ್ರಿಯ ಅಂಗವಾಗಿ ಮೀರತ್‌ನಲ್ಲಿ ಮಂಗಳವಾರ ನಡೆದ ಉಭಯ ಪಕ್ಷಗಳ ಮೊದಲನೇ ಜಂಟಿ ರ‍್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರೈತರ ಕೋಪವು ಬಿಜೆಪಿಗೆ ದುಬಾರಿಯಾಗಲಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರೈತರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

‘ಈ ಸರ್ಕಾರವು ವಿಮಾನ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು ಏರ್‌ ಇಂಡಿಯಾವನ್ನು ಮಾರಾಟ ಮಾಡಿದೆ. ಉದ್ಯೋಗ ಅರಸಿ ಬಂದವರ ಮೇಲೆ ಲಾಠಿ ಚಾರ್ಜ್‌ ಮಾಡಲಾಗುತ್ತಿದೆ. ಹಣದುಬ್ಬರ ಗಗನಕ್ಕೇರಿದೆ’ ಎಂದು ಹೇಳಿದರು.

ರೈತರ ಪ್ರತಿಭಟನೆ ಪ್ರಸ್ತಾಪಿಸಿದ ಅಖಿಲೇಶ್‌, ಎಸ್‌ಪಿ–ಆರ್‌ಎಲ್‌ಡಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದರೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಹೆಚ್ಚಿಸಲಿದೆ. ಕೃಷಿ ಉತ್ಪನ್ನಗಳ ಮಾರಾಟದಲ್ಲಿ ರೈತರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಿರುದ್ಧ ವಾಗ್ದಾಳಿ ನಡೆಸಿದ ಆರ್‌ಎಲ್‌ಡಿ ಅಧ್ಯಕ್ಷ ಜಯಂತ್‌ ಚೌಧರಿ, ‘ಜಾನುವಾರುಗಳ ನಡುವೆ ಇದ್ದಾಗ ಮಾತ್ರ ಮುಖ್ಯಮಂತ್ರಿಗಳು ಸಂತೋಷ ವ್ಯಕ್ತಪಡಿಸುತ್ತಾರೆ. ಚುನಾವಣೆಯ ನಂತರ ಅವರನ್ನು ಅಧಿಕಾರದಿಂದ ಮುಕ್ತಗೊಳಿಸುವಂತೆ ಮನವಿ ಮಾಡುತ್ತೇನೆ. ಇದರಿಂದ ಅವರು ತಮ್ಮ ಸಮಯವನ್ನು ಜಾನುವಾರುಗಳ ಜೊತೆಗೆ ಕಳೆಯಬಹುದು’ ಎಂದರು.

‘ಬಿಜೆಪಿ ವಿರುದ್ಧದ ನಮ್ಮ ಹೋರಾಟದಲ್ಲಿ ಎರಡೂ ಪಕ್ಷಗಳು ಒಟ್ಟಿಗೆ ಇವೆ. ಮೈತ್ರಿಯ ಉದ್ದೇಶವನ್ನು ಸಾಧಿಸಲು ಒಗ್ಗಟ್ಟಿನಿಂದ ಕೆಲಸ ಮಾಡಬೇಕು’ ಎಂದು ಎಸ್‌ಪಿ ಮುಖಂಡ ಅತುಲ್‌ ಪ್ರಧಾನ್‌ ಎರಡೂ ಪಕ್ಷಗಳ ಕಾರ್ಯಕರ್ತರಿಗೆ ಸಲಹೆ ನೀಡಿದರು.

ಜಾಟ್‌ ಸಮುದಾಯದವರು ಹೆಚ್ಚಿರುವ ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಂಟಿ ರ‍್ಯಾಲಿ ನಡೆಸಲು ಉದ್ದೇಶಿಸಲಾಗಿದೆ. ಈ ಭಾಗದಲ್ಲಿ ಪರಿಶಿಷ್ಟ ಜಾತಿಯ ಮತಗಳನ್ನು ಸೆಳೆಯಲು ಎಸ್‌ಪಿ ಯೋಜನೆ ಹಾಕಿಕೊಂಡಿದ್ದು, ಭೀಮ್‌ ಆರ್ಮಿಯ ಸಂಸ್ಥಾಪಕ ಚಂದ್ರಶೇಖರ್‌ ಅಲಿಯಾಸ್‌ ರಾವಣ್‌ ಜೊತೆಗೆ ಅಖಿಲೇಶ್‌ ಮಾತುಕತೆ ನಡೆಸಿದ್ದಾರೆ ಎಂದು ಎಸ್‌ಪಿ ಮತ್ತು ಆರ್‌ಎಲ್‌ಡಿ ಮೂಲಗಳು ತಿಳಿಸಿವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು