ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿಯನ್ನು 30 ನಿಮಿಷ ಕಾಯಿಸಿದ ಮೊಂಡು, ಸೊಕ್ಕಿನ ಮಮತಾ: ಕೇಂದ್ರದ ಟೀಕೆ

Last Updated 28 ಮೇ 2021, 17:01 IST
ಅಕ್ಷರ ಗಾತ್ರ

ಕೋಲ್ಕತ್ತ: ಯಸ್ ಚಂಡಮಾರುತದ ಪರಿಣಾಮವನ್ನು ಪರಿಶೀಲಿಸಲು ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಕರೆದಿದ್ದ ಸಭೆಗೆ ಗೈರಾದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬದಲಿಗೆ ಪ್ರಧಾನಿ ವೈಮಾನಿಕ ಸಮೀಕ್ಷೆ ಮುಗಿಸಿ ಬಂದಾಗ ವಾಯುನೆಲೆಯಲ್ಲಿ 15 ನಿಮಿಷಗಳ ತ್ವರಿತ ಸಂವಾದಕ್ಕೆ ಸಮಯ ಪಡೆದು ವರದಿ ಒಪ್ಪಿಸಿ ವಾಪಸ್ ಆಗಿದ್ದಾರೆ.

‘ನೀವು ನನ್ನನ್ನು ಭೇಟಿಯಾಗಲು ಬಯಸಿದ್ದೀರಿ ಅದಕ್ಕಾಗಿಯೇ ನಾನು ಇಂದು ಬಂದಿದ್ದೇನೆ. ನಾನು ಮತ್ತು ನನ್ನ ಮುಖ್ಯ ಕಾರ್ಯದರ್ಶಿ ಈ ವರದಿಯನ್ನು ನಿಮಗೆ ಸಲ್ಲಿಸಲು ಬಯಸುತ್ತೇವೆ. ಈಗ ನಾವು ದಿಘಾದಲ್ಲಿ ಸಭೆ ಇರುವುದರಿಂದ ಅಲ್ಲಿಗೆ ಹೊರಡಲು ನಿಮ್ಮ ಅನುಮತಿಯನ್ನು ಕೋರುತ್ತೇವೆ’ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ.

ಆದರೆ, ತ್ವರಿತ ಸಂವಾದಕ್ಕೆ ಸಮಯ ಕೇಳಿದ್ದ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ಮೋದಿ ಮತ್ತು ರಾಜ್ಯಪಾಲ ಜಗದೀಪ್ ಧಂಕರ್ ಅವರನ್ನು ಅರ್ಧ ಗಂಟೆಯವರೆಗೆ ಕಾಯಿಸಿದ್ದಾರೆ ಎಂದು ಕೇಂದ್ರ ಸರ್ಕಾರ ಆರೋಪಿಸಿದೆ. ರಾಜ್ಯಪಾಲ ಧಂಕರ್ ಅವರು ಟ್ವೀಟ್ ಮಾಡಿದ ಫೋಟೋದಲ್ಲಿ ಪ್ರಧಾನ ಮಂತ್ರಿ ಮೋದಿ, ಬಿಜೆಪಿ ನಾಯಕ ಸುವೇಂದು ಅಧಿಕಾರಿ ಉಳಿದಂತೆ ಖಾಲಿ ಕುರ್ಚಿಗಳಿರುವುದು ಕಂಡುಬಂದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ‘ಇದು ಸಾಂವಿಧಾನಿಕ ನೀತಿಗಳು ಮತ್ತು ಒಕ್ಕೂಟ ವ್ಯವಸ್ಥೆಯ ಸಹಕಾರಿ ಸಂಸ್ಕೃತಿಯ ಕೊಲೆ’ ಎಂದು ಆರೋಪಿಸಿದ್ದಾರೆ.

ಮೋದಿಯವರು ಸಹಕಾರಿ ಸಂಯುಕ್ತ ವ್ಯವಸ್ಥೆ ತತ್ವವನ್ನು ‘ಅತ್ಯಂತ ಪವಿತ್ರ’ಎಂದು ನಂಬಿದ್ದಾರೆ. ಸಂತ್ರಸ್ತ ಜನರಿಗೆ ಪರಿಹಾರ ನೀಡಲು ಪಕ್ಷ ತಾರತಮ್ಯವಿಲ್ಲದೆ ಎಲ್ಲ ಮುಖ್ಯಮಂತ್ರಿಗಳೊಂದಿಗೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಆಶ್ಚರ್ಯಕರವಾಗಿ, ಬ್ಯಾನರ್ಜಿಯ ತಂತ್ರಗಳು ಮತ್ತು ಸಣ್ಣತನದ ರಾಜಕೀಯವು ಮತ್ತೊಮ್ಮೆ ಬಂಗಾಳದ ಜನರನ್ನು ಕಾಡಲು ಆರಂಭಿಸಿದೆ ಎಂದು ಅವರು ಕಿಡಿ ಕಾರಿದ್ದಾರೆ.

‘ಯಸ್ ಚಂಡಮಾರುತದಿಂದ ತತ್ತರಿಸಿರುವ ಪಶ್ಚಿಮ ಬಂಗಾಳದ ನಾಗರಿಕರೊಂದಿಗೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ದೃಢವಾಗಿ ನಿಂತಿರುವಾಗ, ಮಮತಾ ಜಿ ಜನರ ಹಿತದೃಷ್ಟಿಯಿಂದ ತನ್ನ ಅಹಂಕಾರವನ್ನು ಬದಿಗಿಡಬೇಕು. ಪ್ರಧಾನ ಮಂತ್ರಿಗಳ ಸಭೆಯಲ್ಲಿ ಅವರು ಭಾಗವಹಿಸದೇ ಇರುವುದು ಸಾಂವಿಧಾನಿಕ ನೀತಿಗಳು ಮತ್ತು ಒಕ್ಕೂಟ ವ್ಯವಸ್ಥೆಯ ಸಹಕಾರಿ ಸಂಸ್ಕೃತಿಯ ಕೊಲೆ’ಎಂದು ಅವರು ಟ್ವೀಟ್ ಮಾಡಿದ್ದಾರೆ.

ಚಂಡಮಾರುತದ ಹೊಡೆತಕ್ಕೆ ಸಿಲುಕಿರುವ ಒಡಿಶಾ ಮತ್ತು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿರುವ ಪ್ರಧಾನಿ ಮೋದಿ ಸಮೀಕ್ಷೆ ಬಳಿಕ ಪರಿಸ್ಥಿತಿ ಕುರಿತು ಎರಡೂ ರಾಜ್ಯಗಳಲ್ಲಿ ಪರಿಶೀಲನಾ ಸಭೆ ನಡೆಸಿದರು.

ಮೋದಿ ಜೊತೆಗಿನ ಸಭೆಯಲ್ಲಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಭಾಗವಹಿಸಿದರೆ, ಮಮತಾ ಬ್ಯಾನರ್ಜಿ ತಮ್ಮ ರಾಜ್ಯದಲ್ಲಿ ನಡೆದ ಪರಿಶೀಲನಾ ಸಭೆಗೆ ಗೈರಾಗಿದ್ದರು.

ಆದರೂ, ಯಸ್ ಚಂಡಮಾರುತದಿಂದ ಉಂಟಾದ ಹಾನಿಯ ಬಗ್ಗೆ ಅವರು ಪ್ರಧಾನಿಗೆ ವರದಿ ಸಲ್ಲಿಸಿದ್ದು, ಹೆಚ್ಚು ಹಾನಿಗೊಳಗಾದ ಪ್ರದೇಶಗಳ ಪುನರಾಭಿವೃದ್ಧಿಗಾಗಿ ₹ 20,000 ಕೋಟಿ ಬೇಡಿಕೆ ಇಟ್ಟಿದ್ದಾರೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಕೇಂದ್ರ ಸರ್ಕಾರ ಮತ್ತು ಬಿಜೆಪಿ ಮುಖಂಡರ ನಡುವಿನ ಸಂಬಂಧಗಳು ಅಷ್ಟಾಗಿ ಉತ್ತಮವಾಗಿಲ್ಲ. ಬಿಜೆಪಿ ನಾಯಕರು ತಮ್ಮ ಸರ್ಕಾರಕ್ಕೆ ಕಿರುಕುಳ ನೀಡಲು ಕೇಂದ್ರದ ಏಜೆನ್ಸಿಗಳನ್ನು ಮತ್ತು ರಾಜ್ಯಪಾಲರ ಕಚೇರಿಯನ್ನು ಬಳಸುತ್ತಿದ್ದಾರೆ ಎಂದು ಮಮತಾ ಆಗಾಗ್ಗೆ ಆರೋಪಿಸುತ್ತಿರುತ್ತಾರೆ.
ದ್ದಾರೆ.

ಬಿಜೆಪಿ ಈ ಆರೋಪವನ್ನು ನಿರಾಕರಿಸುತ್ತಲೇ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT