ಮಂಗಳವಾರ, ಸೆಪ್ಟೆಂಬರ್ 28, 2021
21 °C

ಮನೆಗೆ ತೆರಳಿ ಕೋವಿಡ್‌ ಲಸಿಕೆ ನೀಡುವಂತೆ ಆದೇಶಿಸಲು ಸಾಧ್ಯವಿಲ್ಲ: ಸುಪ್ರೀಂ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದ ವೈವಿಧ್ಯಮಯ ಸ್ಥಿತಿಗತಿಗಳನ್ನು ಗಮನಿಸಿದರೆ, ಪ್ರಸ್ತುತ ಮನೆ ಮನೆಗೆ ತೆರಳಿ ಕೋವಿಡ್‌ ಲಸಿಕೆ ನೀಡುವುದು ಕಾರ್ಯಸಾಧುವಲ್ಲ ಹಾಗೂ ಈಗಿರುವ ಲಸಿಕೆ ನೀತಿಯನ್ನು ರದ್ದುಗೊಳಿಸುವಂತೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.

ಅಂಗವಿಕಲರು ಮತ್ತು ಸಮಾಜದಲ್ಲಿರುವ ದುರ್ಬಲ ವರ್ಗದವರ ಮನೆಗೆ ತೆರಳಿ ಕೋವಿಡ್ ಲಸಿಕೆ ನೀಡಲು ನಿರ್ದೇಶನ ನೀಡುವಂತೆ ಕೋರಿ ಯುವ ವಕೀಲರ ಸಂಘ ಸಲ್ಲಿಸಿದ್ದ ಮನವಿಯನ್ನು ನಿರಾಕರಿಸಿದ ಸುಪ್ರೀಂ ಕೋರ್ಟ್‌, ‘ಪ್ರಸ್ತುತ ದೇಶದಾದ್ಯಂತ ಲಸಿಕೆ ನೀಡಿಕೆ ಪ್ರಗತಿಯಲ್ಲಿದ್ದು, ಶೇ 60ಕ್ಕಿಂತ ಹೆಚ್ಚು ಮಂದಿಗೆ ಲಸಿಕೆಯ ಮೊದಲ ಡೋಸ್‌ ನೀಡಲಾಗಿದೆ‘ ಎಂದು ಹೇಳಿದೆ.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ವಿಕ್ರಮ್ ನಾಥ್ ಮತ್ತು ಹಿಮಾ ಕೊಹ್ಲಿ ಅವರ ಪೀಠ, ‘ದೇಶದಲ್ಲಿ ಒಂದು ಪ್ರದೇಶಕ್ಕಿಂತ ಇನ್ನೊಂದು ಪ್ರದೇಶದ ಪರಿಸ್ಥಿತಿ ಭಿನ್ನವಾಗಿದೆ. ಲಡಾಖ್‌, ಉತ್ತರ ಪ್ರದೇಶದಲ್ಲಿರುವ ಪರಿಸ್ಥಿತಿ, ಕೇರಳಕ್ಕಿಂತ ಭಿನ್ನವಾಗಿದೆ. ಹಳ್ಳಿಗಳಿಗಿಂತ ನಗರ ಪ್ರದೇಶಗಳ ಪರಿಸ್ಥಿತಿ ಬೇರೆಯೇ ಇದೆ. ಇಂಥ ವಿಶಾಲ ರಾಷ್ಟ್ರದಲ್ಲಿರುವ ಪ್ರತಿ ರಾಜ್ಯದಲ್ಲೂ ವಿವಿಧ ರೀತಿಯ ಸಮಸ್ಯೆಗಳಿವೆ. ಇಂಥ ವೈವಿಧ್ಯಮಯ ಸನ್ನಿವೇಶಗಳಿರುವ ದೇಶಕ್ಕೆ ಒಂದೇ ಆದೇಶ ನೀಡಲು ಸಾಧ್ಯವಿಲ್ಲ‘ ಎಂದು ನ್ಯಾಯಪೀಠ ಹೇಳಿದೆ.

‘ಇದೊಂದು ಆಡಳಿತಾತ್ಮಕ ವಿಷಯವಾಗಿರುವುದರಿಂದ, ಈಗಿರುವ ಲಸಿಕೆ ನೀತಿಯನ್ನು ರದ್ದುಗೊಳಿಸಲು ಸಾಧ್ಯವಿಲ್ಲ‘ ಎಂದು ಹೇಳಿದ ಪೀಠ, ಅರ್ಜಿದಾರರಿಗೆ, ತಮ್ಮ ಸಲಹೆಗಳೊಂದಿಗೆ ಆರೋಗ್ಯ ಸಚಿವಾಲಯವನ್ನು ಸಂಪರ್ಕಿಸುವಂತೆ ತಿಳಿಸಿದೆ.

ಅಂಗವಿಕಲರು, ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ದುರ್ಬಲ ವರ್ಗದವರು ಹಾಗೂ ಕೋವಿನ್‌ ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಲಾಗದೇ ತೊಂದರೆ ಎದುರಿಸುತ್ತಿರುವವರ ಮನೆಗೆ ತೆರಳಿ ಕೋವಿಡ್‌ ಲಸಿಕೆ ನೀಡಲು ನಿರ್ದೇಶನ ನೀಡುವಂತೆ ಕೋರಿ ಯುವ ವಕೀಲರ ಸಂಘವೊಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು