ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25–30 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ: ಸಿಬಿಐನಿಂದ ಗೋವಾ ಮೂಲದ ಬಾಣಸಿಗನ ಸೆರೆ

Last Updated 20 ಜುಲೈ 2021, 17:10 IST
ಅಕ್ಷರ ಗಾತ್ರ

ನವದೆಹಲಿ: 25-30 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಗೋವಾ ಮೂಲದ ಬಾಣಸಿಗನನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಲೈಂಗಿಕ ವಿಡಿಯೊಗಳನ್ನು ಚಿತ್ರೀಕರಿಸಿ ಡಾರ್ಕ್ ವೆಬ್ ಮತ್ತು ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳ ಮೂಲಕ ಭಾರತೀಯರು ಮತ್ತು ವಿದೇಶಿಯರಿಗೆ ಮಾರಾಟ ಮಾಡಿದ ಆರೋಪವು ಬಂಧಿತನ ಮೇಲಿದೆ.

ಗೋವಾದ ಹೋಟೆಲ್‌ವೊಂದರಲ್ಲಿ ಬಾಣಸಿಗನಾಗಿರುವ 29 ವರ್ಷದ ಆರೋಪಿ ವಿರುದ್ಧ ಕಳೆದ ವರ್ಷ ಸಿಬಿಐ ಪ್ರಕರಣ ದಾಖಲಿಸಿತ್ತು. ಉತ್ತರ ಪ್ರದೇಶದಲ್ಲಿ ನೀರಾವರಿ ಇಲಾಖೆ ಎಂಜಿನಿಯರ್ ಆಗಿರುವ ಚಿತ್ರಕೂಟ್ ಮೂಲದ ಆಪಾದಿತ ಶಿಶುಕಾಮಿ ವಿರುದ್ಧ ತನಿಖೆಯ ಸಮಯದಲ್ಲಿ ಸಿಬಿಐಗೆ ಈತನ ಚಟುವಟಿಕೆಗಳ ಬಗ್ಗೆ ಪ್ರಮುಖ ಮಾಹಿತಿ ಸಿಕ್ಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಳೆದ ವರ್ಷ, ಸಿಬಿಐ ಶಿಶುಕಾಮದ ಸಂತ್ರಸ್ತರಿಗಾಗಿ ಹುಡುಕಾಟ ನಡೆಸಿತ್ತು. ಬಳಿಕ, 12-21 ವರ್ಷದೊಳಗಿನ ಸುಮಾರು 25 ಸಂತ್ರಸ್ತರನ್ನು ಗುರುತಿಸುವಲ್ಲಿ ಸಂಸ್ಥೆ ಯಶಸ್ವಿಯಾಗಿತ್ತು.

ಕೆಲವು ಸಂತ್ರಸ್ತರು ಸಮಾಜಕ್ಕೆ ಹೆದರಿ ದೂರು ನೀಡಲು ಮುಂದೆ ಬರುತ್ತಿಲ್ಲ ಎಂದು ಸಂಸ್ಥೆ ತಿಳಿಸಿದೆ.

ಹೋಟೆಲ್ ಮ್ಯಾನೇಜ್ಮೆಂಟ್ ಪದವೀಧರನಾದ ಆರೋಪಿ ಬಾಣಸಿಗನನ್ನು ಗೋವಾದಲ್ಲಿ ಪೋಕ್ಸೊ ಕಾಯ್ದೆಯಡಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಸಿಬಿಐ ವಕ್ತಾರ ಆರ್ ಸಿ ಜೋಶಿ ತಿಳಿಸಿದ್ದಾರೆ.

‘ಆರೋಪಿಯು ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಮತ್ತು ತನ್ನ ಕುಕೃತ್ಯವನ್ನು ಮೊಬೈಲ್ ಫೋನ್, ಡಿಜಿಟಲ್ ಕ್ಯಾಮೆರಾ ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸಿ ಚಿತ್ರೀಕರಿಸಿದ್ದಾನೆ.’ಎಂದು ಜೋಶಿ ಹೇಳಿದ್ದಾರೆ.

ಈತ ಡಾರ್ಕ್ ವೆಬ್ ಬಳಸಿ ಇತರ ಭಾರತೀಯರು ಮತ್ತು ವಿದೇಶಿಯರೊಂದಿಗೆ ಈ ಲೈಂಗಿಕ ಚಿತ್ರಗಳು ಮತ್ತು ಮಕ್ಕಳ ಲೈಂಗಿಕ ಕಿರುಕುಳದ ವಿಡಿಯೊಗಳನ್ನು ಮಾರಾಟ ಮಾಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT