ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಕಿಪಾಕ್ಸ್‌ ನಿಭಾಯಿಸಲು ಕೇಂದ್ರ ಸರ್ಕಾರದಿಂದ ಕಾರ್ಯಪಡೆ ರಚನೆ

ನೀತಿ ಆಯೋಗದ ಸದಸ್ಯ ಡಾ.ವಿ.ಕೆ. ಪಾಲ್‌ ನೇತೃತ್ವ
Last Updated 1 ಆಗಸ್ಟ್ 2022, 14:12 IST
ಅಕ್ಷರ ಗಾತ್ರ

ನವದೆಹಲಿ:ದೇಶದಲ್ಲಿ ಹೆಚ್ಚುತ್ತಿರುವ ಮಂಕಿಪಾಕ್ಸ್‌ನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲು ಮತ್ತು ರೋಗ ಹರಡುವಿಕೆ ನಿಭಾಯಿಸಲು ಕೇಂದ್ರ ಸರ್ಕಾರ ಕಾರ್ಯಪಡೆ ರಚಿಸಿದೆ ಎಂದು ಅಧಿಕೃತ ಮೂಲಗಳು ಸೋಮವಾರ ತಿಳಿಸಿವೆ.

ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ.ವಿ.ಕೆ. ಪಾಲ್‌ ಅವರ ನೇತೃತ್ವದಲ್ಲಿ ಈ ಕಾರ್ಯಪಡೆ ರಚಿಸಲಾಗಿದೆ. ಇದು ದೇಶದಲ್ಲಿ ಮಂಕಿಪಾಕ್ಸ್‌ ರೋಗನಿರ್ಣಯ ಸೌಲಭ್ಯಗಳನ್ನು ಹೆಚ್ಚಿಸುವ, ರೋಗ ಹರಡುವಿಕೆ ತಡೆಯಲು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಹಾಗೂ ರೋಗದ ವಿರುದ್ಧ ಲಸಿಕೆಯ ಸಂಬಂಧ ಸರ್ಕಾರಕ್ಕೆ ಸೂಕ್ತ ಮಾರ್ಗದರ್ಶನ ನೀಡಲಿದೆ ಎಂದು ಮೂಲಗಳು ತಿಳಿಸಿವೆ.

ದೇಶದಲ್ಲಿ ಕೈಗೊಂಡಿರುವ ಸಾರ್ವಜನಿಕ ಆರೋಗ್ಯ ಸನ್ನದ್ಧತೆ ಪರಿಶೀಲಿಸಲುಪ್ರಧಾನಿಜುಲೈ 26ರಂದು ನಡೆಸಿದ ಪ್ರಧಾನ ಕಾರ್ಯದರ್ಶಿಗಳ ಹಂತದ ಉನ್ನತ ಸಭೆಯಲ್ಲಿ ಕಾರ್ಯಪಡೆ ರಚಿಸುವ ನಿರ್ಧಾರ ಕೈಗೊಳ್ಳಲಾಗಿತ್ತು.

ಮಂಕಿಪಾಕ್ಸ್‌ ರೋಗದ ಬಗ್ಗೆ ‌ಸಕಾಲಕ್ಕೆ ವರದಿ ನೀಡುವುದು, ಪ್ರಕರಣಗಳ ಪತ್ತೆಹಚ್ಚುವಿಕೆ ಮತ್ತು ಪ್ರಕರಣಗಳ ನಿರ್ವಹಣೆಗೆ ಒತ್ತು ನೀಡಲು ಉದ್ದೇಶಿತ ಸಂವಹನ ಕಾರ್ಯತಂತ್ರ ಅಳವಡಿಸಿಕೊಂಡು ಕೆಲಸ ಮಾಡುವಂತೆ ರಾಷ್ಟ್ರೀಯ ಏಡ್ಸ್‌ ನಿಯಂತ್ರಣ ಸಂಸ್ಥೆ ಮತ್ತು ಆರೋಗ್ಯ ಸಚಿವಾಲಯದ ಆರೋಗ್ಯ ಸೇವೆಗಳ ಮಹಾನಿರ್ದೇಶಕರಿಗೆಸೂಚಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಮಂಕಿಪಾಕ್ಸ್ ರೋಗನಿರ್ಣಯಕ್ಕೆ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಮತ್ತುಪ್ರಯೋಗಾಲಯಗಳ ಜಾಲವನ್ನು ಸಜ್ಜುಗೊಳಿಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗೂ (ಐಸಿಎಂಆರ್)ಮಾರ್ಗಸೂಚಿಗಳನ್ನು ನೀಡಲಾಗಿದೆ.

ಕೇರಳದಲ್ಲಿ ಮಂಕಿಪಾಕ್ಸ್‌ ಸೋಂಕಿತ ಯುವಕ ಮೃತಪಟ್ಟ ಪ್ರಕರಣ ಸೇರಿ ದೇಶದಲ್ಲಿ ಈವರೆಗೆ ಐದು ಪ್ರಕರಣಗಳು ವರದಿಯಾಗಿವೆ. ಇತ್ತೀಚೆಗಷ್ಟೇ ವಿಶ್ವ ಆರೋಗ್ಯ ಸಂಸ್ಥೆಯು ಮಂಕಿಪಾಕ್ಸ್‌ ರೋಗವನ್ನು ಜಾಗತಿಕ ಆರೋಗ್ಯ ತುರ್ತು ಸ್ಥಿತಿ ಎಂದು ಘೋಷಿಸಿದೆ.

ಕೇರಳ: ಮೃತ ಯುವಕನಲ್ಲಿ ಮಂಕಿಪಾಕ್ಸ್‌ ದೃಢ

ಕೇರಳದ ತ್ರಿಶೂರಿನಲ್ಲಿಶನಿವಾರ ಮೃತಪಟ್ಟ 22 ವರ್ಷದ ಯುವಕನಲ್ಲಿನ ಮಾದರಿಯನ್ನು ರಾಷ್ಟ್ರೀಯ ವೈರಾಣು ಸಂಸ್ಥೆಯ ಅಲಪುಳದ ಘಟಕದಲ್ಲಿ ಪರೀಕ್ಷಿಸಿದ್ದು, ಮಂಕಿಪಾಕ್ಸ್‌ ವೈರಾಣು ಇರುವುದು ದೃಢಪಟ್ಟಿದೆ. ಪುಣೆಯಲ್ಲಿನ ರಾಷ್ಟ್ರೀಯ ವೈರಾಣು ಸಂಸ್ಥೆಯ ವರದಿಯಲ್ಲೂ ಸೋಂಕು ದೃಢಪಡಿಸಿದೆ.

ದೇಶದಲ್ಲಿ ಮಂಕಿಪಾಕ್ಸ್‌ ರೋಗದಿಂದ ಸಾವು ಸಂಭವಿಸಿದ ಮೊದಲ ಪ್ರಕರಣ ಇದಾಗಿದೆ.ಮೊದಲ ಮೂರು ಪ್ರಕರಣಗಳೂ ಕೇರಳದಲ್ಲೇ ಪತ್ತೆಯಾಗಿದ್ದವು. ಸಂಯುಕ್ತ ಅರಬ್‌ ಸಂಸ್ಥಾನದಿಂದ (ಯುಎಇ) ವಾಪಸಾದ ಮೂವರಲ್ಲಿ ರೋಗ ಪತ್ತೆಯಾಗಿತ್ತು. ನಾಲ್ಕನೇ ಪ್ರಕರಣ ಪಶ್ಚಿಮ ದೆಹಲಿಯಲ್ಲಿ ವರದಿಯಾಗಿತ್ತು.

ಮಂಕಿಪಾಕ್ಸ್‌ ರೋಗಿಗಳಿಗೆ ಚಿಕಿತ್ಸೆ ವಿಳಂಬ: ಮಂಕಿಪಾಕ್ಸ್‌ ಸೋಂಕಿನಲ್ಲಿ ಮರಣ ಪ್ರಮಾಣ ಕಡಿಮೆ ಇದೆ ಎನ್ನುವ ಕಾರಣಕ್ಕೆರೋಗಿಗಳಿಗೆ ಚಿಕಿತ್ಸೆ ಸಿಗುವುದು ವಿಳಂಬವಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT