ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಪ್ರೀಂ ಕೋರ್ಟ್‌ ಕೊಲಿಜಿಯಂ ವಿರುದ್ಧ ಮತ್ತೆ ಹರಿಹಾಯ್ದ ಕೇಂದ್ರ ಸಚಿವ ರಿಜಿಜು

Last Updated 23 ಜನವರಿ 2023, 0:59 IST
ಅಕ್ಷರ ಗಾತ್ರ

ನವದೆಹಲಿ: ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿ ನೇಮಕದ ಕುರಿತಂತೆ ಸುಪ್ರೀಂ ಕೋರ್ಟ್‌ ಮತ್ತು ಕೇಂದ್ರ ಸರ್ಕಾರದ ನಡುವಣ ಜಟಾಪ‍ಟಿ ಮುಂದುವರಿದಿದೆ. ನ್ಯಾಯಮೂರ್ತಿಗಳನ್ನು ತಾನೇ ನೇಮಿಸಿಕೊಳ್ಳುತ್ತೇನೆ ಎನ್ನುವ ಮೂಲಕ ಸುಪ್ರೀಂ ಕೋರ್ಟ್‌, ಸಂವಿಧಾನವನ್ನು ಅಪಹರಿಸಿದೆ ಎಂದಿರುವ ನಿವೃತ್ತ ನ್ಯಾಯಮೂರ್ತಿಯೊಬ್ಬರನ್ನು ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಬೆಂಬಲಿಸಿದ್ದಾರೆ.

ದೆಹಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆರ್‌.ಎಸ್‌. ಸೋಧಿಅವರ ಸಂದರ್ಶನವೊಂದನ್ನು
ರಿಜಿಜು ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ‘ಇದು ನ್ಯಾಯಮೂರ್ತಿಯೊಬ್ಬರ ಧ್ವನಿ’ ಎಂದಿರುವ ರಿಜಿಜು, ಬಹುಸಂಖ್ಯಾತ ಜನರು ಕೂಡ ಇದೇ ರೀತಿಯ ‘ವಿವೇಕಯುತ ನಿಲುವು’ ಹೊಂದಿದ್ದಾರೆ ಎಂದು ಹೇಳಿದ್ದಾರೆ.

ಕಾನೂನು ರೂಪಿಸುವುದು ಸಂಸತ್ತಿನ ಹಕ್ಕು ಎಂದು ನಿವೃತ್ತ ನ್ಯಾಯಮೂರ್ತಿ ಸೋಧಿ ಹೇಳಿದ್ದಾರೆ.

‘ಬಹುಸಂಖ್ಯಾತ ಜನರು ಇದೇ ರೀತಿಯ ಆರೋಗ್ಯಕರ ಅಭಿಪ್ರಾಯ ಹೊಂದಿದ್ದಾರೆ. ಸಂವಿಧಾನದಲ್ಲಿರುವ ಅವಕಾಶಗಳು ಮತ್ತು ಜನಾದೇಶದ ಕುರಿತು ಅಸಡ್ಡೆ ಇರುವ ಜನರು ಮಾತ್ರ ತಾವು ಸಂವಿಧಾನಕ್ಕಿಂತ ಮೇಲಿನವರು ಎಂದು ಭಾವಿಸುತ್ತಾರೆ. ಭಾರತದ ಪ್ರಜಾಸತ್ತೆಯ ನಿಜವಾದ ಸೌಂದರ್ಯವೇ ಅದರ ಯಶಸ್ಸು. ಜನರು ತಮ್ಮ ಪ್ರತಿನಿಧಿಗಳ ಮೂಲಕ ಆಳ್ವಿಕೆ ಮಾಡುತ್ತಾರೆ. ಚುನಾಯಿತ ಪ್ರತಿನಿಧಿಗಳು ಜನರ ಹಿತಾಸಕ್ತಿಯನ್ನು ಪ್ರತಿನಿಧಿಸುತ್ತಾರೆ ಮತ್ತು ಕಾನೂನು ರೂಪಿಸುತ್ತಾರೆ. ನಮ್ಮ ನ್ಯಾಯಾಂಗವು ಸ್ವತಂತ್ರ ಮತ್ತು ಸಂವಿಧಾನವೇ ಸರ್ವೋಚ್ಚ’ ಎಂದು ರಿಜಿಜು ಅವರು ಟ್ವೀಟ್‌ ಮಾಡಿದ್ದಾರೆ.

ಸುಪ್ರೀಂ ಕೋರ್ಟ್‌ ಕಾನೂನು ರಚಿಸುವಂತಿಲ್ಲ ಮತ್ತು ಕಾನೂನು ರಚಿಸುವುದು ಸಂಸತ್ತಿನ ಹಕ್ಕು ಎಂದು ಸೋಧಿ ಅವರು ಸಂದರ್ಶನದಲ್ಲಿ ಹೇಳಿದ್ದಾರೆ.

‘...ನೀವು (ಸುಪ್ರೀಂ ಕೋರ್ಟ್‌) ಸಂವಿಧಾನಕ್ಕೆ ತಿದ್ದುಪಡಿ ತರಬಹುದೇ? ಸಂಸತ್ತು ಮಾತ್ರ ಸಂವಿಧಾನ ತಿದ್ದುಪಡಿ ಮಾಡಲು ಸಾಧ್ಯ. ಸಂವಿಧಾನವನ್ನು ಅಪಹರಿಸಿಕೊಂಡ ಬಳಿಕ, ನ್ಯಾಯಮೂರ್ತಿಗಳನ್ನು ನಾವೇ ನೇಮಿಸಿಕೊಳ್ಳುತ್ತೇವೆ. ಸರ್ಕಾರಕ್ಕೆ ಅದರಲ್ಲಿ ಯಾವ ಪಾತ್ರವೂ ಇಲ್ಲ ಎಂದು ಅವರು (ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳು) ಹೇಳಿಕೊಂಡಿದ್ದಾರೆ’ ಎಂದು ಸೋಧಿ ಅವರು ಹೇಳಿದ್ದಾರೆ.

ನ್ಯಾಯಮೂರ್ತಿಗಳನ್ನು ನೇಮಿಸುವ ಕೊಲಿಜಿಯಂ ವ್ಯವಸ್ಥೆಯ ವಿರುದ್ಧ ರಿಜಿಜು ಅವರು ಹಲವು ಬಾರಿ ಧ್ವನಿ ಎತ್ತಿದ್ದಾರೆ. ಕೊಲಿಜಿಯಂ ವ್ಯವಸ್ಥೆಯು ಸಂವಿಧಾನಕ್ಕೆ ‘ಅನ್ಯ’ವಾದುದು ಎಂದು ಇತ್ತೀಚೆಗೆ ಹೇಳಿದ್ದರು. ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ಕಾಯ್ದೆಯನ್ನು ಸುಪ್ರೀಂ ಕೋರ್ಟ್
ರದ್ದುಪಡಿಸಿದ್ದನ್ನು ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಅವರೂ
ಪ್ರಶ್ನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT