ಶುಕ್ರವಾರ, ಮೇ 20, 2022
19 °C

ಉತ್ತರ ಪ್ರದೇಶದಲ್ಲಿ ಮೂವರು ಸೋದರಿಯರ ಮೇಲೆ ರಾಸಾಯನಿಕ ಸುರಿದ ಅಪರಿಚಿತ

ಪಿಟಿಐ Updated:

ಅಕ್ಷರ ಗಾತ್ರ : | |

ಗೊಂಡಾ: ಉತ್ತರ ಪ್ರದೇಶದ ಪಕ್ಸಾ ಎಂಬ ಗ್ರಾಮದಲ್ಲಿ ಮನೆಯ ಮಹಡಿ ಮೇಲೆ ನಿದ್ರೆ ಮಾಡುತ್ತಿದ್ದ ಮೂವರು ಸೋದರಿಯರ ಮೇಲೆ ಅಪರಿಚ ವ್ಯಕ್ತಿಯೊಬ್ಬ ರಾಸಾಯನಿಕ ಸುರಿದಿದ್ದಾನೆ. ಪರಿಣಾಮವಾಗಿ ಬಾಲಕಿಯರಿಗೆ ಸುಟ್ಟು ಗಾಯಗಳಾಗಿವೆ.

ಮೂವರು ಬಾಲಕಿಯರನ್ನೂ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಬಾಲಕಿಯರು ಸೋಮವಾರ ರಾತ್ರಿ ತಮ್ಮ ಮನೆ ಮೇಲೆ ಮಲಗಿದ್ದಾಗ ಈ ಘಟನೆ ನಡೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೈಲೇಶ್ ಕುಮಾರ್ ಪಾಂಡೆ ತಿಳಿಸಿದ್ದಾರೆ.

ಮೂವರು ಸೋದರಿಯರ ಪೈಕಿ ಹಿರಿಯವಳಾದ 17 ವರ್ಷದ ಖುಷ್ಬೂ ಎಂಬಾಕೆ ಮೇಲೆ ಅಪರಿಚಿತ ವ್ಯಕ್ತಿ ರಾಸಾಯನಿಕ ದ್ರಾವಣ ಸುರಿದಿದ್ದಾನೆ. ಆದರೆ, ಖುಷ್ಬೂ ಜೊತೆಗೇ ನಿದ್ರೆ ಮಾಡುತ್ತಿದ್ದ ಇನ್ನಿಬ್ಬರು ಸೋದರಿಯರಾದ ಕೋಮಲ್‌ (7) ಮುಸ್ಕಾನ್‌ (5) ಎಂಬುವವರ ಮೇಲೂ ರಾಸಾಯನಿಕ ಬಿದ್ದಿದೆ. ಇದರಿಂದ ಮೂವರಿಗೂ ಸುಟ್ಟ ಗಾಯಗಳಾಗಿವೆ. ಹಿರಿಯ ಬಾಲಕಿಗೆ ಶೇ. 30ರಷ್ಟು ಸುಟ್ಟ ಗಾಯಗಳಾಗಿವೆ ಎಂದು ಎಸ್ಪಿ ಹೇಳಿದರು.

ಇದು ಆಸಿಡ್ ದಾಳಿಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಎಸ್‌ಪಿ, ‘ದಾಳಿಯಲ್ಲಿ ಬಳಸಿದ ರಾಸಾಯನಿಕದ ‍ಪತ್ತೆ ಇನ್ನೂ ಆಗಿಲ್ಲ. ತಜ್ಞರ ತನಿಖೆಯ ನಂತರ ಇದು ಸ್ಪಷ್ಟವಾಗಲಿದೆ,’ ಎಂದು ಹೇಳಿದರು.

ಬಾಲಕಿಯರ ಮನೆ ಸಮೀಪ ವಾಸಿಸುತ್ತಿರುವವರೇ ಈ ಕೃತ್ಯ ಮಾಡಿದ್ದಾರೆ ಎಂಬ ಶಂಕೆ ಇದೆ. ಪ್ರಕರಣ ದಾಖಲಾಗಿದೆ. ತಪ್ಪಿತಸ್ಥರನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಎಸ್‌ಪಿ ತಿಳಿಸಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಗಳ ತಂಡ, ಶ್ವಾನ ದಳ ಮತ್ತು ವಿಧಿವಿಜ್ಞಾನ ತಂಡ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯ ಸಂಗ್ರಹಣೆಯಲ್ಲಿ ತೊಡಗಿತ್ತು.

ಪ್ರಿಯಾಂಕಾ ಟ್ವೀಟ್‌: ಸರ್ಕಾರದ ವಿರುದ್ಧ ಕಿಡಿ

ಘಟನೆ ತಿಳಿಯುತ್ತಲೇ ಸಂತ್ರಸ್ತ ಬಾಲಕೀಯರ ತಂದೆಯ ಹೇಳಿಕೆಯುಳ್ಳ ವಿಡಿಯೊವನ್ನು ಸಾಮಾಜಿಕ ತಾಣ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ, ’ಈ ವ್ಯಕ್ತಿಯ ಮೂವರು ಹೆಣ್ಣುಮಕ್ಕಳು ಮನೆಯಲ್ಲಿ ಮಲಗಿದ್ದಾಗ ಅಲ್ಲಿಗೆ ಪ್ರವೇಶಿದ ಅಪರಿಚಿತ ಅವರ ಮೇಲೆ ಆಸಿಡ್ ಎರೆಚಿದ್ದಾನೆ. ಮಹಿಳೆಯರ ಮೇಲಿನ ಅಪರಾಧಗಳನ್ನು ಸಮರ್ಥಿಸುವ ಮತ್ತು ರಕ್ಷಿಸುವ ಉತ್ತರ ಪ್ರದೇಶ ಸರ್ಕಾರದ ರಾಜಕೀಯ ಪ್ರೇರಿತ ನಿರೂಪಣೆಯು ರಾಜ್ಯಾದ್ಯಂತ ಅಪರಾಧಿಗಳಿಗೆ ಧೈರ್ಯ ತುಂಬುತ್ತಿದೆ,’ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು