ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯದಾನ ವಿಳಂಬ ಎಂಬ ವಿಶ್ಲೇಷಣೆ ಸರಿಯಲ್ಲ: ಸಿಜೆಐ ಎನ್.ವಿ. ರಮಣ ಅಭಿಮತ

Last Updated 17 ಜುಲೈ 2021, 18:52 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ನ್ಯಾಯಾಲಯಗಳಲ್ಲಿ 4.5 ಕೋಟಿ ಪ್ರಕರಣಗಳು ಬಾಕಿ ಉಳಿದಿದ್ದು, ಅವುಗಳನ್ನು ನಿಭಾಯಿಸಲು ನ್ಯಾಯಾಂಗ ಅಸಮರ್ಥವಾಗಿದೆ ಎಂಬ ಅರ್ಥದಲ್ಲಿ ಮಾಡುತ್ತಿರುವ ವಿಶ್ಲೇಷಣೆಗಳು ಸರಿಯಾದವಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅಭಿಪ್ರಾಯಪಟ್ಟಿದ್ದಾರೆ. ಐಷಾರಾಮಿ ದಾವೆಗಳು ನ್ಯಾಯದಾನ ವಿಳಂಬಕ್ಕೆ ಕಾರಣವಾಗಿವೆ ಎಂದೂ ಅವರು ಹೇಳಿದ್ದಾರೆ.

‘ಯಾವುದೇ ಸಮಾಜದಲ್ಲಿ ರಾಜಕೀಯ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಸೇರಿದಂತೆ ವಿವಿಧ ಕಾರಣಗಳಿಗಾಗಿ ನಡೆಯುವ ಘರ್ಷಣೆಗಳನ್ನು ತಪ್ಪಿಸಲಾಗುವುದಿಲ್ಲ. ಆದರೆ ಸಂಘರ್ಷ ಪರಿಹಾರಕ್ಕಾಗಿ ಕಾರ್ಯವಿಧಾನಗಳನ್ನು ಅಭಿವೃದ್ಧಿಪಡಿಸುವ ಅವಶ್ಯಕತೆಯಿದೆ’ ಎಂದು ಅಭಿಪ್ರಾಯಪಟ್ಟ ಅವರು, ಮಹಾಭಾರತವನ್ನು ಉಲ್ಲೇಖಿಸಿ, ಸಂಘರ್ಷ ಪರಿಹಾರದ ಸಾಧನವಾಗಿ ನಡೆದ ಮಧ್ಯಸ್ಥಿಕೆ ಯತ್ನದ ಉದಾಹರಣೆ ನೀಡಿದರು.

ಮಧ್ಯಸ್ಥಿಕೆಯು ಭಾರತದ ನೀತಿಯಲ್ಲಿ ಆಳವಾಗಿ ಹುದುಗಿದೆ. ಭಾರತದಲ್ಲಿ ಬ್ರಿಟಿಷ್ ವಿರೋಧಿ ವ್ಯವಸ್ಥೆಗೆ ಮುಂಚಿತವಾಗಿ ಅದು ಪ್ರಚಲಿತದಲ್ಲಿತ್ತು. ವಿವಾದ ಪರಿಹಾರದ ವಿಧಾನವಾಗಿ ವಿವಿಧ ರೀತಿಯ ಮಧ್ಯಸ್ಥಿಕೆ ತಂತ್ರಗಳನ್ನು ಅನುಸರಿಸಲಾಗುತ್ತಿದೆ ಎಂದು ಅವರು ಹೇಳಿದರು.

ಭಾರತ-ಸಿಂಗಪುರ ಮಧ್ಯಸ್ಥಿಕೆ ಶೃಂಗಸಭೆಯಲ್ಲಿ ‘ಮಧ್ಯಸ್ಥಿಕೆ ಮುಖ್ಯವಾಹಿನಿ: ಭಾರತ ಮತ್ತು ಸಿಂಗಪುರದಿಂದ ಪ್ರತಿಫಲನಗಳು’ ಎಂಬ ವಿಷಯದ ಕುರಿತು ಮುಖ್ಯ ಭಾಷಣ ಮಾಡಿದ ಮುಖ್ಯ ನ್ಯಾಯಮೂರ್ತಿ ರಮಣ ಅವರು, ಏಷ್ಯಾದ ಅನೇಕ ದೇಶಗಳು ವಿವಾದಗಳ ಸಹಕಾರಿ ಮತ್ತು ಸೌಹಾರ್ದಯುತ ಇತ್ಯರ್ಥದ ದೀರ್ಘ ಮತ್ತು ಶ್ರೀಮಂತ ಪರಂಪರೆಯನ್ನು ಹೊಂದಿವೆ ಎಂದು ಹೇಳಿದರು.

‘ಮಹಾಕಾವ್ಯ ಮಹಾಭಾರತವು ಸಂಘರ್ಷ ಪರಿಹಾರ ಸಾಧನದ ದೃಷ್ಟಾಂತವಾಗಿ ನಿಲ್ಲುತ್ತದೆ. ಶ್ರೀಕೃಷ್ಣನು ಪಾಂಡವರು ಮತ್ತು ಕೌರವರ ನಡುವಿನ ವಿವಾದವನ್ನು ಮಧ್ಯಸ್ಥಿಕೆ ವಹಿಸಿ ಪರಿಹರಿಸಲು ಪ್ರಯತ್ನಿಸಿದನು. ಈ ಮಧ್ಯಸ್ಥಿಕೆ ಯತ್ನ ವಿಫಲವಾಗಿದ್ದರೂ, ಅದನ್ನು ನೆನಪಿಸಿಕೊಳ್ಳುವುದರಲ್ಲಿ ಅರ್ಥವಿದೆ. ಮಧ್ಯಸ್ಥಿಕೆ ವಿಫಲವಾಗಿದ್ದೇ ಹಾನಿಕಾರಕ ಪರಿಣಾಮಗಳಿಗೆ ಕಾರಣವಾಯಿತು’ ಎಂದು ಅವರು ಹೇಳಿದರು.

‘ಸಾಕಷ್ಟು ಸಂಪನ್ಮೂಲಗಳನ್ನು ಹೊಂದಿರುವ ಕೆಲವರು ಪ್ರತಿಷ್ಠೆಗಾಗಿ ಹಲವು ಬಾರಿ ಅರ್ಜಿಗಳನ್ನು ಸಲ್ಲಿಸುತ್ತಾರೆ. ಹೀಗಾಗಿ ನ್ಯಾಯಾಂಗ ಪ್ರಕ್ರಿಯೆ ವಿಳಂಬವಾಗುತ್ತದೆ. ಇದರೊಂದಿಗೆ ಸದ್ಯದ ಕೋವಿಡ್‌–19 ಸಾಂಕ್ರಾಮಿಕವೂ ಈ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸಿದೆ’ ಎಂದು ಅವರು ಹೇಳಿದರು.

ಮಧ್ಯಸ್ಥಿಕೆ ಮೂಲಕ ವ್ಯಾಜ್ಯ ಪರಿಹರಿಸುವ ನಿಟ್ಟಿನಲ್ಲಿ ಭಾರತದಲ್ಲಿ ಪ್ರಯತ್ನ ನಡೆದಿದ್ದು, ಇಲ್ಲಿ ಅಂದಾಜು 43 ಸಾವಿರ ಮಧ್ಯಸ್ಥಿಕೆ ಕೇಂದ್ರಗಳಿವೆ. 2005ರಿಂದ 30 ಲಕ್ಷಕ್ಕೂ ಹೆಚ್ಚು ಪ್ರಕರಣಗಳನ್ನು ಮಧ್ಯಸ್ಥಿಕೆಗೆ ಶಿಫಾರಸು ಮಾಡಲಾಗಿದ್ದು, ಮಾರ್ಚ್‌ವರೆಗೆ 10 ಲಕ್ಷದಷ್ಟು ಪ್ರಕರಣಗಳನ್ನು ಮಧ್ಯಸ್ಥಿಕೆ ಮೂಲಕವೇ ಇತ್ಯರ್ಥಪಡಿಸಲಾಗಿದೆ ಎಂದರು.

ಪುರಾವೆ ಇದೆಯೇ?

ತಮ್ಮ ಭಾಷಣದ ವೇಳೆ ಕೆಲವು ತಮಾಷೆಯ ಸಂಗತಿಗಳನ್ನೂ ಅವರು ಹಂಚಿಕೊಂಡರು. ‘ನ್ಯಾಯಾಧೀಶರೊಬ್ಬರು ಪತ್ರಿಕೆ ಓದುತ್ತಾ ಕಾಫಿ ಕುಡಿಯುವ ವೇಳೆ ಅವರ ಮೊಮ್ಮಗಳು ಬಂದಳು. ‘ಅಜ್ಜ, ನನ್ನ ಅಕ್ಕ ನನ್ನ ಆಟಿಕೆ ತೆಗೆದುಕೊಂಡು ಹೋಗಿದ್ದಾಳೆ’ ಎಂದಳು. ಅವರ ತಕ್ಷಣದ ಪ್ರತಿಕ್ರಿಯೆ ‘ನಿನ್ನ ಬಳಿ ಯಾವುದಾದರೂ ಪುರಾವೆಗಳಿವೆಯೇ?’ ಎಂಬುದಾಗಿತ್ತು ಎಂದರು.

***

ನ್ಯಾಯದಾನ ವಿಳಂಬದ ವಿಷಯವು ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಇದೊಂದು ಸಂಕೀರ್ಣ ಸಮಸ್ಯೆ. ಪರಿಸ್ಥಿತಿಗೆ ಹಲವು ಅಂಶಗಳು ಕಾರಣ.

– ಎನ್.ವಿ. ರಮಣ, ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT