ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರದಲ್ಲಿ ತೆರವಾಗಿರುವ ರಾಜ್ಯಸಭೆ ಸ್ಥಾನ ಬಿಜೆಪಿಯದ್ದು: ಚಿರಾಗ್‌ ಪಾಸ್ವಾನ್‌

Last Updated 28 ನವೆಂಬರ್ 2020, 15:03 IST
ಅಕ್ಷರ ಗಾತ್ರ

ಪಾಟ್ನ: ಕೇಂದ್ರ ಸಚಿವರಾಗಿದ್ದ, ಲೋಕ ಜನಶಕ್ತಿ ಪಕ್ಷದ(ಎಲ್‌ಜೆಪಿ) ಸಂಸ್ಥಾಪಕ ರಾಮ್‌ ವಿಲಾಸ್‌ ಪಾಸ್ವಾನ್‌ ಅವರ ನಿಧನದಿಂದ ತೆರವಾಗಿರುವ ರಾಜ್ಯಸಭೆ ಸ್ಥಾನವು ಬಿಜೆಪಿ ಪಕ್ಷಕ್ಕೆ ಸೇರಿದ್ದು, ಯಾರನ್ನು ಇಲ್ಲಿ ಅಭ್ಯರ್ಥಿಯನ್ನಾಗಿ ನಿಲ್ಲಿಸಬೇಕು ಎನ್ನುವುದು ಬಿಜೆಪಿಗೆ ಬಿಟ್ಟಿದ್ದು ಎಂದು ಎಲ್‌ಜೆಪಿ ಅಧ್ಯಕ್ಷ ಚಿರಾಗ್‌ ಪಾಸ್ವಾನ್‌ ಶನಿವಾರ ಹೇಳಿದ್ದಾರೆ.

ಈ ಸ್ಥಾನಕ್ಕೆ ಬಿಹಾರದ ಉಪಮುಖ್ಯಮಂತ್ರಿಯಾಗಿದ್ದ ಸುಶೀಲ್‌ ಕುಮಾರ್‌ ಮೋದಿ ಅವರನ್ನು ಅಭ್ಯರ್ಥಿಯನ್ನಾಗಿ ಬಿಜೆಪಿ ನಾಮನಿರ್ದೇಶನ ಮಾಡಿದ್ದು, ಮಹಾಘಟಬಂಧನವು ಅಭ್ಯರ್ಥಿಯನ್ನು ನಿಲ್ಲಿಸದೇ ಹೋದರೆ, ಸುಶೀಲ್‌ ಕುಮಾರ್‌ ಮೋದಿ ಅವರು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಮಹಾಘಟಬಂಧನವು ಅಭ್ಯರ್ಥಿಯನ್ನು ನಾಮನಿರ್ದೇಶನಗೊಳಿಸಿದರೆ, ಡಿ.14ರಂದು ಈ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ಪಾಟ್ನ ಸಾಹಿಬ್‌ ಲೋಕಸಭಾ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ರವಿ ಶಂಕರ್‌ ಪ್ರಸಾದ್‌ ಅವರು ಸ್ಪರ್ಧಿಸಿದ್ದ ಸಂದರ್ಭದಲ್ಲಿ ತೆರವಾಗಿದ್ದ ರಾಜ್ಯಸಭೆ ಸ್ಥಾನಕ್ಕೆ ಕಳೆದ ವರ್ಷ ರಾಮ್‌ ವಿಲಾಸ್‌ ಪಾಸ್ವಾನ್‌ ಸ್ಪರ್ಧಿಸಿ, ಗೆದ್ದಿದ್ದರು. ‘ಈ ಸ್ಥಾನವು ಬಿಜೆಪಿಯದ್ದು. ಉಪಚುನಾವಣೆಯಲ್ಲಿ ಯಾವ ಪಕ್ಷದಿಂದ ಯಾರನ್ನು ಅಭ್ಯರ್ಥಿಯನ್ನಾಗಿ ನಿಲ್ಲಿಸಬೇಕು ಎನ್ನುವುದನ್ನು ಬಿಜೆಪಿ ನಿರ್ಧರಿಸಬೇಕು’ ಎಂದರು.

ಚುನಾವಣೆ ಯಾವಾಗ ಬೇಕಾದರೂ ಆಗಬಹುದು: ‘ಹೊಸ ಸರ್ಕಾರವು ಆಡಳಿತ ನಡೆಸುತ್ತಿರುವುದನ್ನು ಗಮನಿಸಿದಾಗ, ಬಿಹಾರದಲ್ಲಿ ಮತ್ತೆ ಯಾವಗ ಬೇಕಾದರೂ ಚುನಾವಣೆ ನಡೆಯಬಹುದು’ ಎಂದು ಚಿರಾಗ್‌ ಹೇಳಿದ್ದಾರೆ.

ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಪತ್ರ ಬರೆದಿರುವ ಅವರು, ‘ಲೋಕಸಭೆಯಲ್ಲಿ ಪಕ್ಷದ ಆರು ಸದಸ್ಯರು, ರಾಜ್ಯಸಭೆಯಲ್ಲಿ ಒಬ್ಬರು ಸದಸ್ಯರಿದ್ದೂ, ನಮಗೆ ಎನ್‌ಡಿಎ ನೀಡಿದ್ದ 15 ಸೀಟು ಹಾಗೂ ನಮ್ಮ ಗೌರವವನ್ನು ಉಳಿಸಿಕೊಳ್ಳಲು ಎನ್‌ಡಿಎ ವಿರುದ್ಧವಾಗಿ ಸ್ಪರ್ಧೆ, ಇವೆರಡರ ನಡುವೆ ಆಯ್ಕೆ ಮಾಡಿಕೊಳ್ಳಬೇಕಿತ್ತು’ ಎಂದು ಉಲ್ಲೇಖಿಸಿದ್ದಾರೆ.

‘ಕಳೆದ ವಿಧಾನಸಭೆಯಲ್ಲಿ ಎನ್‌ಡಿಎ ಜೊತೆಗಿದ್ದರೂ ನಾವು ಎರಡು ಕ್ಷೇತ್ರಗಳನ್ನಷ್ಟೇ ಗೆದ್ದಿದ್ದೆವು. ಈ ಬಾರಿ ಯಾವುದೇ ತಾರಾ ಪ್ರಚಾರಕರಿಲ್ಲದೆ, ನಾವು 28 ಲಕ್ಷ ಮತಗಳನ್ನು ಪಡೆದಿದ್ದೇವೆ. ರಾಜ್ಯದಾದ್ಯಂತ ಪಕ್ಷದ ಬಗ್ಗೆ ಜನರು ಮಾತನಾಡುತ್ತಿದ್ದಾರೆ’ ಎಂದು ಅವರು ಉಲ್ಲೇಖಿಸಿದ್ದಾರೆ. ಆದರೆ, ಒಂದು ಪುಟದ ಪತ್ರದಲ್ಲಿ ಬಿಜೆಪಿ ಅಥವಾ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಪಾಸ್ವಾನ್‌ ಹೇಳಿಕೆಗಳನ್ನು ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT