ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಘಾಟನೆಗೂ ಮುನ್ನ ಚಿತ್ರ ಪ್ರದರ್ಶನ: ಚಿರಂಜೀವಿಗೆ ಗೌರವ

ಚಿರಂಜೀವಿಗೆ ‘ಇಂಡಿಯನ್‌ ಫಿಲ್ಮ್‌ ಪರ್ಸನಾಲಿಟಿ ಆಫ್‌ ದಿ ಇಯರ್‌’ ಗೌರವ
Last Updated 20 ನವೆಂಬರ್ 2022, 18:40 IST
ಅಕ್ಷರ ಗಾತ್ರ

ಪಣಜಿ: ಭಾರತೀಯ ಸಿನಿಮಾದ ಮೇರು ಕಲಾವಿದರೊಬ್ಬರಿಂದ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವವನ್ನು
ಉದ್ಘಾಟಿಸುವ ಸಂಪ್ರದಾಯ ಕೊನೆಗೊಂಡಿದೆ. ಕೇಂದ್ರ ಪ್ರಸಾರ ಖಾತೆಯ ಹೊಣೆ ಹೊತ್ತ ಸಚಿವರೇ ಚಿತ್ರೋತ್ಸವವನ್ನು ಉದ್ಘಾಟಿಸುವ
ಹೊಸ ಪರಿಪಾಟಕ್ಕೆ ಭಾನುವಾರ ಆರಂಭವಾದ ಗೋವಾ ಚಿತ್ರೋತ್ಸವ ಸಾಕ್ಷಿಯಾಯಿತು.

ಗೋವಾ ಯೂನಿವರ್ಸಿಟಿಯ ಒಳಾಂಗಣ ಕ್ರೀಡಾಂಗಣದಲ್ಲಿ ಸಂಜೆ ನಡೆದ ವರ್ಣರಂಜಿತ ಸಮಾರಂಭದಲ್ಲಿ ಸಚಿವ ಅನುರಾಗ್‌ ಠಾಕೂರ್‌, ರಾಜಕಾರಣಿಗಳು ಮತ್ತು ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ದೀಪ ಬೆಳಗಿಸಿ ಒಂಬತ್ತು ದಿನಗಳ ಚಿತ್ರೋತ್ಸವಕ್ಕೆ
ಚಾಲನೆ ನೀಡಿದರು.

ಇತ್ತೀಚಿನ ವರ್ಷಗಳಲ್ಲಿ ಉದ್ಘಾಟನಾ ಸಮಾರಂಭದಲ್ಲಿ ಮಾತುಗಳಿಗೆ ಹೆಚ್ಚಿನ ಅವಕಾಶ ಇರುತ್ತಿರಲಿಲ್ಲ. ಅನುರಾಗ್‌ ಠಾಕೂರ್‌, ಪ್ರಸಾರ ಖಾತೆ ರಾಜ್ಯಮಂತ್ರಿ ಡಾ.ಮುರುಗನ್‌, ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌, ರಾಜ್ಯಪಾಲ ಶ್ರೀಧರನ್‌ ಪಿಳ್ಳೈ ಮತ್ತಿತರರು ಭಾಷಣ ಮಾಡಿ ಸಿನಿಮಾ, ಕಲೆ, ಕ್ರೀಡೆ ಮತ್ತಿತರ ರಂಗದ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿಯವರ ದಿಟ್ಟ ನಾಯಕತ್ವವೇ ಕಾರಣ ಎಂದು ಪ್ರಶಂಸಿಸಿದರು. ಇನ್ನು ಕಾರ್ಯಕ್ರಮ ನಿರೂಪಕ ಕೇಳಿದ ಕೆಲ ಪ್ರಶ್ನೆಗಳಿಗೆ ವೇದಿಕೆಗೆ ಬಂದ ಅನೇಕರು ಉತ್ತರಿಸಿದ್ದರಿಂದ ಉದ್ಘಾಟನಾ ಸಮಾರಂಭದಲ್ಲಿ ಮಾತುಗಳು ವಿಜೃಂಭಿಸಿದವು.

ಈ ವರ್ಷದ ಇನ್ನೊಂದು ಬೆಳವಣಿಗೆ ಎಂದರೆ ಚಿತ್ರೋತ್ಸವದ ಆರಂಭಕ್ಕೆ ಮೊದಲೇ ಉದ್ಘಾಟನಾ ಚಿತ್ರ ಆಸ್ಟ್ರಿಯಾ ದೇಶದ ಡಯಟರ್‌ ಬರ್ನರ್‌ ನಿರ್ದೇಶನದ ‘ಅಲ್ಮ ಅಂಡ್‌ ಆಸ್ಕರ್‌’ ಚಿತ್ರದ ಪ್ರದರ್ಶನ ನಡೆದದ್ದು. ಚಿತ್ರ ತಂಡದ ಸದಸ್ಯರು ಮತ್ತು ಬರ್ನರ್‌ ಅವರಿಗೆ ಕೆಂಪುಹಾಸಿನ ಸ್ವಾಗತ ನೀಡಲಾಯಿತು.

ಸೌರಾಗೆ ಜೀವಮಾನ ಸಾಧನೆ ಪ್ರಶಸ್ತಿ: ದಿ. ಸತ್ಯಜಿತ್‌ ರೇ ಜೀವಮಾನ ಸಾಧನೆ ಪ್ರಶಸ್ತಿಯನ್ನು ಸ್ಪ್ಯಾನಿಷ್‌ ಚಿತ್ರ ನಿರ್ದೇಶಕ ಕಾರ್ಲೋಸ್‌ ಸೌರಾ ಅವರಿಗೆ ಪ್ರದಾನ ಮಾಡಲಾಯಿತು. ಕಾರ್ಲೋಸ್‌ ಅವರ ಮಗಳು ಅನ್ನಾ ಸಾರಾ ಅವರು ಸಚಿವ ಅನುರಾಗ್‌ ಸಿಂಗ್‌ ಠಾಕೂರ್‌ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ಇದೇ ವೇದಿಕೆಯಲ್ಲಿ ‘ಇಂಡಿಯನ್‌ ಫಿಲ್ಮ್‌ ಪರ್ಸನಾಲಿಟಿ ಆಫ್‌ ದಿ ಇಯರ್‌’ ಪ್ರಶಸ್ತಿಯನ್ನು ತೆಲುಗಿನ ಮೆಗಾಸ್ಟಾರ್‌ ನಟ ಚಿರಂಜೀವಿ ಅವರಿಗೆ ನೀಡಲಾಗಿದೆ ಎಂದು ಘೋಷಿಸಲಾಯಿತು.

ನಟರಾದ ಮನೋಜ್‌ ಬಾಜಪೇಯಿ, ಸುನಿಲ್‌ ಶೆಟ್ಟಿ, ಪರೇಶ್‌ ರಾವಲ್‌, ಸಿನಿಮಾ ಲೇಖಕ ವಿಜಯೇಂದ್ರ ಪ್ರಸಾದ್‌ ಅವರನ್ನು ಉದ್ಘಾಟನಾ ಸಮಾರಂಭದಲ್ಲಿ ಸತ್ಕರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT