ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಎ ಅಥವಾ ಬಿಜೆಪಿ ವಿರೋಧಿ ರಂಗದ ನೇತೃತ್ವ ಬೇಡ: ಶರದ್ ಪವಾರ್

‘ಬಿಜೆಪಿಗೆ ಪರ್ಯಾಯ –ಕಾಂಗ್ರೆಸ್‌ ಕೈಬಿಡಲಾಗದು’
Last Updated 3 ಏಪ್ರಿಲ್ 2022, 19:24 IST
ಅಕ್ಷರ ಗಾತ್ರ

ಪುಣೆ: ‘ಬಿಜೆಪಿಗೆ ವಿರುದ್ಧವಾದ ಯಾವುದೇ ರಂಗವನ್ನು ಮುನ್ನಡೆಸುವುದಿಲ್ಲ. ಸಂಯುಕ್ತ ಪ್ರಗತಿಪರ ಮೈತ್ರಿಕೂಟದ (ಯುಪಿಎ) ಅಧ್ಯಕ್ಷರಾಗುವ ಉದ್ದೇಶವೂ ಇಲ್ಲ’ ಎಂದು ಹಿರಿಯ ಮುಖಂಡ, ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಹೇಳಿದ್ದಾರೆ.

ಭಾನುವಾರ ಕೊಲ್ಹಾಪುರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ‘ಬಿಜೆಪಿಗೆ ಪರ್ಯಾಯವಾಗಿಕೇಂದ್ರದಲ್ಲಿ ರಚನೆಯಾಗುವ ಯಾವುದೇ ರಂಗದಿಂದ ಕಾಂಗ್ರೆಸ್ ಪಕ್ಷವನ್ನು ಕೈಬಿಡಲಾಗದು’ ಎಂದು ಪ್ರತಿಪಾದಿಸಿದರು.

‘ಬಿಜೆಪಿಗೆ ವಿರುದ್ಧವಾಗಿ ವಿವಿಧ ಪಕ್ಷಗಳನ್ನು ಒಳಗೊಂಡ ಯಾವುದೇ ರಂಗದ ನೇತೃತ್ವವನ್ನು ನಾನು ವಹಿಸುವುದಿಲ್ಲ. ಯುಪಿಎ ಅಧ್ಯಕ್ಷ ಆಗಬೇಕು ಎಂದು ಈಚೆಗೆ ಪಕ್ಷದ ಯುವ ಘಟಕ ನಿರ್ಣಯ ಅಂಗೀಕರಿಸಿದೆ. ನನಗೆ ಆ ಬಗ್ಗೆ ಆಸಕ್ತಿ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ಆದರೆ, ಬಿಜೆಪಿಗೆ ಪರ್ಯಾಯವಾಗಿ ಯಾವುದೇ ರಂಗ ಸ್ಥಾಪಿಸುವ, ಬೆಳೆಸುವ ಯತ್ನಕ್ಕೆ ಪೂರ್ಣ ಸಹಕಾರ, ಬೆಂಬಲ ಇರಲಿದೆ. ಈಗಿನ ಸಂದರ್ಭದಲ್ಲಿ ವಿರೋಧ ಪಕ್ಷಗಳು ಒಗ್ಗೂಡಬೇಕಿದೆ. ಅದೇ ಸಂದರ್ಭದಲ್ಲಿ ಕೆಲವು ಅಂಶಗಳನ್ನು ಕಡೆಗಣಿಸಬೇಕಿದೆ’ ಎಂದು ಹೇಳಿದರು.

ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸದ್ಯ ಪಶ್ಚಿಮ ಬಂಗಾಳದಲ್ಲಿ ಪ್ರಬಲವಾಗಿದೆ. ಪ್ರಾದೇಶಿಕ ಪಕ್ಷಗಳು ಕೂಡಾ ಆಯಾಯ ರಾಜ್ಯಗಳಲ್ಲಿ ಪ್ರಬಲವಾಗಿವೆ. ಕಾಂಗ್ರೆಸ್‌ ಪಕ್ಷ ಪ್ರಸ್ತುತ ಅಧಿಕಾರದಲ್ಲಿ ಇಲ್ಲದಿದ್ದರೂ ದೇಶವ್ಯಾಪಿ ಅಸ್ತಿತ್ವವನ್ನು ಹೊಂದಿದೆ. ಹೀಗಾಗಿ, ಪರ್ಯಾಯವನ್ನು ರೂಪಿಸುವ ಪ್ರಕ್ರಿಯೆಯಲ್ಲಿ ಆ ಪಕ್ಷವನ್ನು ಪರಿಗಣಿಸಬೇಕು ಎಂದು ಪ್ರತಿಪಾದಿಸಿದರು.

‘ಆರೋಗ್ಯಯುತ ಪ್ರಜಾಪ್ರಭುತ್ವಕ್ಕಾಗಿ ಪ್ರಬಲವಾದ ವಿರೋಧಪಕ್ಷವೂ ಅಗತ್ಯ. ಒಂದೇ ಪಕ್ಷ ಬಲಶಾಲಿಯಾಗಿದ್ದರೆ ಅದು ಪುಟಿನ್‌ನಂತೆ (ರಷ್ಯಾದ ಅಧ್ಯಕ್ಷ) ಆಗುತ್ತದೆ. ಪುಟಿನ್‌ ಮತ್ತು ಚೀನಾ ಅಧ್ಯಕ್ಷ ತಾವು ಜೀವಂತವಾಗಿ ಇರುವವರೆಗೂ ಆಯಾಯ ದೇಶವನ್ನು ಮುನ್ನಡೆಸುವರು. ಭಾರತವು ಅಂತಹ ಪುಟಿನ್‌ ಹೊಂದುವುದಿಲ್ಲ ಎಂದು ಭಾವಿಸುತ್ತೇನೆ’ ಎಂದು ಪವಾರ್ ಹೇಳಿದರು.

‘ತನಿಖಾ ಸಂಸ್ಥೆಗಳ ದುರ್ಬಳಕೆ ಆಗುತ್ತಿದೆ ಎಂಬ ಬಗ್ಗೆ ಕೇಂದ್ರ ಸರ್ಕಾರ ಉತ್ತರಿಸಬೇಕಿದೆ’ ಎಂದು ಒತ್ತಾಯಿಸಿದ ಅವರು, ‘ಹಣದುಬ್ಬರ ಸದ್ಯ ದೇಶದ ಮುಂದಿರುವ ದೊಡ್ಡ ಸಮಸ್ಯೆ. ಬಿಜೆಪಿ ಆಡಳಿತದಲ್ಲಿ ದಿನಬಿಟ್ಟು ದಿನ ಇಂಧನ ದರ ಏರಿಕೆಯಾಗುತ್ತಿದೆ. ಇದರ ಪರಿಣಾಮ ಜನಸಾಮಾನ್ಯರ ಮೇಲಾಗುತ್ತಿದೆ. ಹಿಂದೆ, ಇಂಧನ ದರ ಏರಿಕೆ ಆಗುತ್ತಿರಲಿಲ್ಲ ಎಂದಲ್ಲ. ಈಗ ನಿತ್ಯವೂ ಆಗುತ್ತಿದೆ’ ಎಂದರು.

‘ಗುಜರಾತ್‌ನ ಸ್ಥಿತಿ ಕೆಟ್ಟದಾಗಿತ್ತು’

‘ಕಾಶ್ಮೀರ್‌ ಫೈಲ್ಸ್‌’ ಚಲನಚಿತ್ರವು ವಾಸ್ತವಾಂಶಗಳನ್ನು ಆಧರಿಸಿದ್ದಲ್ಲ. ಆದರೆ, ಅದು ದ್ವೇಷ ಮತ್ತು ವರ್ಣಭೇದಕ್ಕೆ ಪ್ರಚೋದನೆ ನೀಡುತ್ತಿದೆ. ದೇಶ ಮುನ್ನಡೆಸುವರೇ ಚಿತ್ರ ಬೆಂಬಲಿಸುತ್ತಾರೆ, ಅವರ ಪಕ್ಷದವರೇ ಉಚಿತವಾಗಿ ಟಿಕೆಟ್‌ ಹಂಚುತ್ತಾರೆ ಎಂದರೆ ಅದರ ಉದ್ದೇಶ, ಜನರ ವಿಭಜನೆ ಮತ್ತು ರಾಜಕೀಯ ಲಾಭ ಪಡೆಯುವುದೇ ಆಗಿದೆ’ ಎಂದು ಶರದ್‌ ಪವಾರ್ ಟೀಕಿಸಿದರು.

ಬಿಜೆಪಿ ಮತ್ತು ಪ್ರಧಾನಿ ಮೋದಿ ಅವರ ಹೆಸರನ್ನು ಉಲ್ಲೇಖಿಸದೆಯೇ ಅವರು, ‘ಗುಜರಾತ್‌ ರಾಜ್ಯದಲ್ಲಿನ ಪರಿಸ್ಥಿತಿಯು ಆಗ ಕಾಶ್ಮೀರ ಕಣಿವೆಯದಕ್ಕಿಂತಲೂ ಕೆಟ್ಟದಾಗಿತ್ತು. ಆ ಸಂದರ್ಭದಲ್ಲಿ (ಗೋಧ್ರಾ ಗಲಭೆ) ಅನೇಕ ಮಂದಿ ಪ್ರಾಣ ಕಳೆದುಕೊಂಡರು. ಆಗ ಗುಜರಾತ್‌ ಸರ್ಕಾರದ ಮುಖ್ಯಸ್ಥರಾಗಿದ್ದವರು ಇದಕ್ಕೆ ವಿವರಣೆ ನೀಡಿದ್ದನ್ನು ನಾನಂತೂ ಕೇಳಿಲ್ಲ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT