ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಭಾಷಣ: ರಾಜ್ಯಸಭೆಯಲ್ಲಿ ಕಾಂಗ್ರೆಸ್‌ ಪ್ರಸ್ತಾಪ

ಚರ್ಚೆಗೆ ಅವಕಾಶ ನಿರಾಕರಿಸಿದ ಸಭಾಪತಿ ನಾಯ್ಡು
Last Updated 6 ಏಪ್ರಿಲ್ 2022, 15:50 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧ ದ್ವೇಷಪೂರಿತ ಭಾಷಣಗಳನ್ನು ಮಾಡುವುದು ಹೆಚ್ಚುತ್ತಿದೆ ಎಂದು ರಾಜ್ಯಸಭೆಯಲ್ಲಿ ಕಾಂಗ್ರೆಸ್‌ ಸದಸ್ಯರು ಬುಧವಾರ ಹೇಳಿದರು.

ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳುವಂತೆ ವಿವಾದಾತ್ಮಕ ಸಂತ ಯತಿ ನರಸಿಂಗಾನಂದ ಅವರು ಹಿಂದೂಗಳಿಗೆ ಕರೆ ನೀಡುತ್ತಿರುವುದು ಕಳವಳಕಾರಿ ಎಂದೂ ಕಾಂಗ್ರೆಸ್‌ ಸದಸ್ಯರು ಹೇಳಿದರು.

ಆದರೆ, ನಿಯಮ 267ರಡಿ ಈ ವಿಷಯವನ್ನು ಪ್ರಸ್ತಾಪಿಸಲು ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ವಿರೋಧ ಪಕ್ಷಗಳ ಸದಸ್ಯರಿಗೆ ಅವಕಾಶ ನಿರಾಕರಿಸಿದರು. ನಿರ್ದಿಷ್ಟ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರ ಹತ್ಯೆಗೆ ಯತಿ ನರಸಿಂಗಾನಂದ ಕರೆ ನೀಡಿದ್ದಾರೆ ಎನ್ನಲಾದ ಭಾಷಣದ ಬಗ್ಗೆ ವಿರೋಧ ಪಕ್ಷಗಳು ಪ್ರಸ್ತಾಪಿಸಿದ್ದು, ಆ ಅಂಶಗಳನ್ನು ಕಡತದಿಂದ ತೆಗೆದು ಹಾಕುವಂತೆಯೂ ಅವರು ಆದೇಶಿಸಿದರು.

‘ನಿಗದಿತ ಕಲಾಪದ ಬದಲಾಗಿ, ನಿಯಮ 267ರಡಿ ಈ ವಿಷಯ ಕುರಿತು ಪ್ರಸ್ತಾಪಿಸಲು ಅವಕಾಶ ನೀಡಬೇಕು’ ಎಂದು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಅಲ್ಪಸಂಖ್ಯಾತರ ವಿರುದ್ದದ ದ್ವೇಷ ಭಾಷಣ ಹಾಗೂ ಕೆಲ ಆನ್‌ಲೈನ್‌ ಮಾಧ್ಯಮಗಳ ಪತ್ರಕರ್ತರಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪಗಳ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಲು ಅವಕಾಶ ನೀಡುವಂತೆಯೂ ಅವರು ನೋಟಿಸ್‌ ನೀಡಿದ್ದರು.

ಈ ಮನವಿಯನ್ನು ತಿರಸ್ಕರಿಸಿದ ಸಭಾಪತಿ ವೆಂಕಯ್ಯ ನಾಯ್ಡು ಅವರು, ‘ಯಾವುದೇ ಸಮುದಾಯದ ಹೆಸರು ಸಹ ಕಡತಕ್ಕೆ ಹೋಗುವುದಿಲ್ಲ. ವ್ಯಕ್ತಿಯೊಬ್ಬ ಅರ್ಥಹೀನ ಪದ ಬಳಸಿ ಮಾತನಾಡಿದ್ದರೆ, ಅದನ್ನು ಇಲ್ಲಿ ಹೇಳಬಾರದು. ಅದನ್ನೇ ಸದನದಲ್ಲಿ ಮತ್ತೆ ಪ್ರಸ್ತಾಪಿಸಿ ಚರ್ಚಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಹೀಗಾಗಿ ಇದಕ್ಕೆ ಅವಕಾಶ ನೀಡಿಲ್ಲ’ ಎಂದರು.

ಖರ್ಗೆ ಅವರಲ್ಲದೇ, ಟಿಎಂಸಿಯ ಸುಷ್ಮಿತಾ ದೇವ್, ಲಿಜಿನ್ಹೊ ಫೆಲಿರೊ ಹಾಗೂ ಮೊಹ್ಮದ್ ನದಿಮುಲ್ ಹಕ್ ಅವರು ಸಹ ಈ ಕುರಿತು ಮಾತನಾಡಲು ಅವಕಾಶ ಕೋರಿ ನೋಟಿಸ್‌ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT