ಗುರುವಾರ , ಅಕ್ಟೋಬರ್ 21, 2021
27 °C

ಅಫ್ಗಾನ್‌ನ ಅಸ್ಥಿರತೆ ಭಯೋತ್ಪಾದಕ ಸಿದ್ಧಾಂತಗಳಿಗೆ ಹುರಿದುಂಬಿಸುತ್ತದೆ: ಮೋದಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಅಫ್ಗಾನಿಸ್ತಾನದಲ್ಲಿ ಹೊಸ ಬದಲಾವಣೆಯನ್ನು ತರುವ ಕುರಿತಂತೆ ಜಾಗತಿಕ ಸಮುದಾಯವು ‘ಸಾಮೂಹಿಕವಾಗಿ’ ಮತ್ತು ‘ಚಿಂತನಶೀಲರಾಗಿ’ನಿರ್ಧಾರ ತೆಗೆದುಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.

ಆ ದೇಶದಲ್ಲಿ ಅಸ್ಥಿರತೆ ಮತ್ತು ಮೂಲಭೂತವಾದವನ್ನು ಮುಂದುವರಿಸುವುದು ವಿಶ್ವದಾದ್ಯಂತ ಭಯೋತ್ಪಾದಕ ಮತ್ತು ಉಗ್ರವಾದ ಸಿದ್ಧಾಂತಗಳಿಗೆ ಧೈರ್ಯ ತುಂಬುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ಶಾಂಘೈ ಸಹಕಾರ ಸಂಘಟನೆ(ಎಸ್‌ಸಿಒ) ಮತ್ತು ಸಾಮೂಹಿಕ ಭದ್ರತಾ ಒಪ್ಪಂದದ ಮುಖ್ಯಸ್ಥರ ಜೊತೆಗಿನ ವಿಡಿಯೊ ಸಭೆಯಲ್ಲಿ ಮಾತನಾಡಿದ ಮೋದಿ, ಯಾವುದೇ ದೇಶದಲ್ಲಿ ಭಯೋತ್ಪಾದನೆಯನ್ನು ಹರಡಲು ಅಫ್ಗಾನ್ ಮಣ್ಣನ್ನು ಬಳಸಬಾರದು, ಗಡಿಯಾಚೆಗಿನ ಭಯೋತ್ಪಾದನೆ ಮತ್ತು ಭಯೋತ್ಪಾದಕರಿಗೆ ಹಣಕಾಸು ನೆರವು ತಡೆಯುವ ನಿಟ್ಟಿನಲ್ಲಿ ನೀತಿ ಸಂಹಿತೆ ಬೇಕು ಎಂದು ಪ್ರತಿಪಾದಿಸಿದ್ದಾರೆ.

ಅಫ್ಘಾನಿಸ್ತಾನದಲ್ಲಿನ ಇತ್ತೀಚಿನ ಬೆಳವಣಿಗೆಗಳು ಭಾರತದಂತಹ ನೆರೆಯ ರಾಷ್ಟ್ರಗಳ ಮೇಲೆ ‘ಹೆಚ್ಚಿನ ಪರಿಣಾಮ’ಬೀರಿದೆ. ಈ ಸಮಸ್ಯೆಯನ್ನು ಎದುರಿಸಲು ಪ್ರಾದೇಶಿಕ ಗಮನ ಮತ್ತು ಸಹಕಾರದ ಅಗತ್ಯವಿದೆ ಎಂದು ಅವರು ಹೇಳಿದರು.

ತಾಲಿಬಾನ್ ಅನ್ನು ಹೆಸರಿಸದೆ, ಅಫ್ಗಾನಿಸ್ತಾನದಲ್ಲಿನ ಬೆಳವಣಿಗೆಗಳು ಮತ್ತು ಅಂತರರಾಷ್ಟ್ರೀಯ ಸಮುದಾಯಗಳು ಗಮನ ಹರಿಸಬೇಕಾದ ನಾಲ್ಕು ನಿರ್ದಿಷ್ಟ ಸಮಸ್ಯೆಗಳನ್ನು ಪ್ರಧಾನಿ ಪ್ರಸ್ತಾಪಿಸಿದರು.

ಅಫ್ಗಾನಿಸ್ತಾನದಲ್ಲಿ ಅಧಿಕಾರದ ಬದಲಾವಣೆಯ ಪ್ರಶ್ನೆ ಪ್ರಮುಖವಾದುದ್ದಾಗಿದೆ. ಏಕೆಂದರೆ, ಯಾವುದೇ ಮಾತುಕತೆ ಇಲ್ಲದೆ ಅಧಿಕಾರ ಪಡೆಯಲಾಗಿದೆ.

‘ಇದು ಹೊಸ ವ್ಯವಸ್ಥೆಯ ಸ್ವೀಕೃತಿಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಮಹಿಳೆಯರು ಮತ್ತು ಅಲ್ಪಸಂಖ್ಯಾತರು ಸೇರಿದಂತೆ ಅಫ್ಗಾನ್ ಸಮಾಜದ ಎಲ್ಲ ವರ್ಗಗಳ ಪ್ರಾತಿನಿಧ್ಯವೂ ಮುಖ್ಯವಾಗಿದೆ’ ಎಂದು ಮೋದಿ ಹೇಳಿದರು.

‘ಆದ್ದರಿಂದ, ಜಾಗತಿಕ ಸಮುದಾಯವು ಚಿಂತನಶೀಲ ಮತ್ತು ಸಾಮೂಹಿಕವಾಗಿ ಹೊಸ ವ್ಯವಸ್ಥೆಯನ್ನು ಗುರುತಿಸುವ ಬಗ್ಗೆ ನಿರ್ಧರಿಸುವುದು ಅತ್ಯಗತ್ಯ’ ಎಂದು ಅವರು ಹೇಳಿದರು.

ಅಫ್ಗಾನಿಸ್ತಾನದಲ್ಲಿ ಅಸ್ಥಿರತೆ ಮತ್ತು ಮೂಲಭೂತವಾದ ಮುಂದುವರಿದರೆ, ಅದು ವಿಶ್ವದಾದ್ಯಂತ ಭಯೋತ್ಪಾದಕ ಮತ್ತು ಉಗ್ರವಾದ ಸಿದ್ಧಾಂತಗಳಿಗೆ ಕಾರಣವಾಗುತ್ತದೆ. ಇತರ ಉಗ್ರಗಾಮಿ ಗುಂಪುಗಳು ಸಹ ಹಿಂಸೆಯ ಮೂಲಕ ಅಧಿಕಾರವನ್ನು ಪಡೆಯಲು ಪ್ರೋತ್ಸಾಹಿಸಿದಂತಾಗಬಹುದು. ನಾವು (ಎಲ್ಲಾ ದೇಶಗಳು) ಹಿಂದೆ ಭಯೋತ್ಪಾದನೆಗೆ ಬಲಿಯಾಗಿದ್ದೇವೆ ಎಂದು ಅವರು ಹೇಳಿದರು.

ಹಾಗಾಗಿ, ಅಫ್ಗಾನಿಸ್ತಾನದ ಮಣ್ಣನ್ನು ಯಾವುದೇ ದೇಶದಲ್ಲಿ ಭಯೋತ್ಪಾದನೆಯನ್ನು ಹರಡಲು ಬಳಸುವುದಿಲ್ಲ ಎಂಬುದನ್ನು ನಾವು ಒಟ್ಟಾಗಿ ಖಾತ್ರಿಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು