ನವದೆಹಲಿ: ಜಾಮೀನಿನ ಮೇಲೆ ಆರೋಪಿಯೊಬ್ಬ ಬಿಡುಗಡೆಯಾದರೆ ಆತ ಆ ಅವಧಿಯಲ್ಲಿ ಗಂಭೀರ ಅಪರಾಧಗಳನ್ನು ನಡೆಸಬಹುದೇ ಎಂಬುದನ್ನು ಅಂದಾಜಿಸಲಿಕ್ಕಾಗಿ ಅಂತಹ ವ್ಯಕ್ತಿಯ ಇತಿಹಾಸ ತಿಳಿಯುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಕೊಲೆ ಆರೋಪಿಯೊಬ್ಬನಿಗೆ ಜಾಮೀನು ನೀಡಿದ್ದ ಆದೇಶವೊಂದನ್ನು ರದ್ದುಪಡಿಸಿದ ವೇಳೆ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಎಂ.ಆರ್.ಷಾ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.
‘ಜಾಮೀನು ಅರ್ಜಿಗಳನ್ನು ನಿರ್ಧರಿಸುವಾಗ ಆರೋಪದ ಗಹನತೆ ಮತ್ತು ಸಾಕ್ಷ್ಯಗಳೂ ಪ್ರಮುಖವಾಗುತ್ತವೆ. ಆರೋಪ ಸಾಬೀತಾದ ಸಂದರ್ಭದಲ್ಲಿ ಶಿಕ್ಷೆಯ ಪ್ರಮಾಣವನ್ನು ನಿರ್ಧರಿಸುವಲ್ಲಿಯೂ ಇದು ಮುಖ್ಯವಾಗುತ್ತದೆ’ ಎಂದು ಪೀಠ ಹೇಳಿತು.
ಈ ಹಿಂದಿನ ನಿರ್ಧಾರಗಳನ್ನು ಉಲ್ಲೇಖಿಸಿದ ಪೀಠ, ಜಾಮೀನು ನಿರಾಕರಿಸುವ ಮೂಲಕ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವುದು ಶಿಕ್ಷೆಯ ಉದ್ದೇಶಕ್ಕಾಗಿ ಅಲ್ಲ, ಬದಲಿಗೆ ನ್ಯಾಯದಾನದಲ್ಲಿನ ಹಲವು ಹಿತಾಸಕ್ತಿಗಳನ್ನು ಈಡೇರಿಸುವುದಕ್ಕಾಗಿರುತ್ತದೆ ಎಂದು ತಿಳಿಸಿತು.
ಯಾವುದೇ ಆರೋಪಿಗೆ ಜಾಮೀನು ನೀಡುವುದಕ್ಕೆ ಮೊದಲು ಆತ ಎಂತಹ ಅಪರಾಧ ಎಸಗಿದ್ದಾನೆ, ಒಂದು ವೇಳೆ ಆರೋಪ ಸಾಬೀತಾದರೆ ಎಂತಹ ಶಿಕ್ಷೆ ಅನುಭವಿಸಬಹುದು, ಪೂರಕ ಸಾಕ್ಷ್ಯಗಳ ಲಕ್ಷಣಳೇನು, ಸಾಕ್ಷ್ಯಗಳನ್ನು ನಾಶಪಡಿಸುವ ಅಥವಾ ತಿರುಚುವ ಸಾಧ್ಯತೆಗಳಿವೆಯೇ, ಕಕ್ಷಿದಾರನಿಗೆ ಬೆದರಿಕೆ ಒಡ್ಡಬಹುದಾದ ಸಾಧ್ಯತೆಗಳಿವಯೇ ಮೊದಲಾದ ವಿಚಾರಗಳನ್ನು ಗಮನಕ್ಕೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಪೀಠ ಹೇಳಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.