ಗುರುವಾರ , ಮೇ 13, 2021
39 °C

ಕೋವಿಡ್‌: ಹತ್ತು ರಾಜ್ಯಗಳಲ್ಲಿ ಗರಿಷ್ಠ ಪ್ರಕರಣಗಳು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದ ಹತ್ತು ರಾಜ್ಯಗಳಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ ಎಂದು ಕೇಂದ್ರದ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ.

ಮಹಾರಾಷ್ಟ್ರ, ಉತ್ತರಪ್ರದೇಶ, ದೆಹಲಿ, ಛತ್ತೀಸಗಡ, ಕರ್ನಾಟಕ, ಮಧ್ಯಪ್ರದೇಶ, ಕೇರಳ, ತಮಿಳುನಾಡು, ಗುಜರಾತ್‌ ಹಾಗೂ ರಾಜಸ್ಥಾನದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೊಸ ಸೋಂಕಿತರಲ್ಲಿ ಶೇ 80.76ರಷ್ಟು ಮಂದಿ ಈ ಹತ್ತು ರಾಜ್ಯಗಳಿಗೆ ಸೇರಿದವರು ಎಂದು ಸಚಿವಾಲಯ ತಿಳಿಸಿದೆ.

‌ಗುರುವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಿರುವ 24 ಗಂಟೆಗಳ ಅವಧಿಯಲ್ಲಿ, ದೇಶದಲ್ಲಿ 2,00,739 ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ. ಮಹಾರಾಷ್ಟ್ರವೊಂದರಲ್ಲೇ 58,952 ಪ್ರಕರಣಗಳು ದಾಖಲಾಗಿವೆ. ಉತ್ತರಪ್ರದೇಶದಲ್ಲಿ 20,439 ಹಾಗೂ ದೆಹಲಿಯಲ್ಲಿ 17,282 ಪ್ರಕರಣಗಳು ದೃಢಪಟ್ಟಿವೆ. ಈ ಅವಧಿಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ 1.06 ಲಕ್ಷದಷ್ಟು ಏರಿಕೆಯಾಗಿದೆ.

ಮುಂಬೈಯನ್ನು ಹಿಂದಿಕ್ಕಿದ ದೆಹಲಿ

ದೆಹಲಿಯಲ್ಲಿ ಬುಧವಾರ 17,282 ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ. ಆ ಮೂಲಕ ದೆಹಲಿಯು ಅತಿ ಹೆಚ್ಚು ಸೋಂಕಿತ ನಗರಗಳ ಪಟ್ಟಿಯಲ್ಲಿ ಮುಂಬೈಯನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೆ ಏರಿದೆ.

ಕಳೆದ ಐದು ದಿನಗಳಿಂದ ದೆಹಲಿಯಲ್ಲಿ ಸೋಂಕು ವಿಪರೀತ ವೇಗದಲ್ಲಿ ಹರಡುತ್ತಿದ್ದು, ಆರೋಗ್ಯ ಸೇವಾ ಕ್ಷೇತ್ರವು ಭಾರಿ ಸಮಸ್ಯೆ ಎದುರಿಸುವಂತಾಗಿದೆ. ‘ನಗರದ ಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿದೆ. ಯುವಕರು, ವೃದ್ಧರು, ಲಸಿಕೆ ಪಡೆದಿರುವವರು, ಪಡೆಯದಿರುವವರು ಹೀಗೆ ಪ್ರತಿಯೊಬ್ಬರೂ ಸೋಂಕಿಗೆ ಒಳಗಾಗುತ್ತಿದ್ದಾರೆ. ಪರಿಸ್ಥಿತಿ ಆತಂಕಕಾರಿಯಾಗಿದೆ’ ಎಂದು ಅಪೊಲೊ ಆಸ್ಪತ್ರೆಯ ಹಿರಿಯ ವೈದ್ಯಕೀಯ ಸಲಹೆಗಾರ ಸುರಂಜಿತ್‌ ಚಟರ್ಜಿ ಹೇಳಿದ್ದಾರೆ.

ವಿದೇಶಿ ಲಸಿಕೆ: ಮೂರು ದಿನಗಳಲ್ಲಿ ತೀರ್ಮಾನ

‘ವಿದೇಶಿ ನಿರ್ಮಿತ ಕೋವಿಡ್‌ ಲಸಿಕೆಗಳನ್ನು ಭಾರತದಲ್ಲಿ ತುರ್ತು ಸಂದರ್ಭದಲ್ಲಿ ಬಳಕೆಗೆ ಅನುಮತಿ ನೀಡುವ ವಿಚಾರವಾಗಿ ಮೂರು ದಿನದೊಳಗೆ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಸರ್ಕಾರ ಹೇಳಿದೆ.

ವಿದೇಶಿ ಲಸಿಕೆಗಳ ಆಮದಿಗೆ ಸಂಬಂಧಿಸಿದಂತೆ ಒಂದು ನಿಯಂತ್ರಣ ವ್ಯವಸ್ಥೆಯನ್ನು ಕೇಂದ್ರದ ಆರೋಗ್ಯ ಸಚಿವಾಲಯವು ಗುರುವಾರ ಸಿದ್ಧಪಡಿಸಿದೆ. ಅದರಂತೆ, ತುರ್ತು ಸಂದರ್ಭದಲ್ಲಿ ನಿಯಂತ್ರಿತ ಬಳಕೆಗೆ ಸಂಬಂಧಿಸಿದಂತೆ ಲಸಿಕೆ ತಯಾರಿಸುವ ವಿದೇಶಿ ಸಂಸ್ಥೆಗಳು ಸಲ್ಲಿಸಿರುವ ಅರ್ಜಿಗಳನ್ನು ಕೇಂದ್ರದ ಔಷಧ ಮತ್ತು ಗುಣಮಟ್ಟ ನಿಯಂತ್ರಣ ಸಂಸ್ಥೆಯು (ಸಿಡಿಎಸ್‌ಸಿಒ) ಪರಿಶೀಲಿಸುವುದು. ಇದಾದ ನಂತರ, ಭಾರತೀಯ ಔಷಧ ನಿಯಂತ್ರಣ ಮಹಾನಿರ್ದೇಶನಾಲಯವು (ಡಿಸಿಜಿಐ) ಮುಂದಿನ ಪ್ರಕ್ರಿಯೆ ನಡೆಸಿ, ಲಸಿಕೆ ಆಮದು ಪರವಾನಗಿ ನೀಡುವ ಕೆಲಸಕ್ಕೆ ಚಾಲನೆ ನೀಡುವುದು. ಇದೆಲ್ಲವೂ ಮೂರು ದಿನಗಳಲ್ಲಿ ನಡೆಯಲಿದೆ’ ಎಂದು ಸರ್ಕಾರ ಹೇಳಿದೆ.

ವಾಕಿಂಗ್‌, ಜಾಗಿಂಗ್‌ಗೂ ನಿಷೇಧ

ಮುಂಬೈ: ಮಹಾರಾಷ್ಟ್ರದ ಕೆಲವೆಡೆ ಲಾಕ್‌ಡೌನ್‌ನಂಥ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಲಾಗಿದ್ದು, ಮುಂಜಾನೆಯ ವಾಕಿಂಗ್‌, ಜಾಗಿಂಗ್‌, ಸೈಕ್ಲಿಂಗ್‌ ಮುಂತಾದ ಚಟುವಟಿಕೆಗಳನ್ನೂ ನಿರ್ಬಂಧಿಸಲಾಗಿದೆ.

ರಾಜ್ಯದಲ್ಲಿ 15ದಿನಗಳ ಕಾಲ ಲಾಕ್‌ಡೌನ್‌ ಮಾದರಿಯ ನಿಷೇಧಗಳನ್ನು ವಿಧಿಸಲಾಗಿದೆ. ಆದರೆ ಈ ಕುರಿತು ಜನರಲ್ಲಿ ಅನೇಕ ಗೊಂದಲಗಳಿದ್ದವು. ಅದಕ್ಕೆ ಸ್ಪಷ್ಟನೆಯ ರೂಪದಲ್ಲಿ ಸರ್ಕಾರವು ಪ್ರಶ್ನೋತ್ತರ ಮಾದರಿಯ ಆರು ಪುಟಗಳ ಸ್ಪಷ್ಟನೆಯನ್ನು ಬಿಡುಗಡೆ ಮಾಡಿದೆ.

ಮದ್ಯ, ಸಿಗರೇಟು ಮುಂತಾದವು ಅಗತ್ಯವಸ್ತುಗಳ ವ್ಯಾಪ್ತಿಯಲ್ಲಿ ಬರುವುದಿಲ್ಲವಾದ್ದರಿಂದ ಇವುಗಳನ್ನು ಮಾರಾಟ ಮಾಡುವ ಅಂಗಡಿಗಳನ್ನು ಮುಚ್ಚಲು ಆದೇಶ ನೀಡಲಾಗಿದೆ. ಪುಸ್ತಕದ ಅಂಗಡಿಗಳು, ಟ್ರಾವೆಲ್‌ ಏಜನ್ಸಿಗಳು  ತುರ್ತು ಸಂದರ್ಭದಲ್ಲಿ ಆನ್‌ಲೈನ್‌ನಲ್ಲಿ ಕಾರ್ಯನಿರ್ವಹಿಸಬಹುದು ಎಂದು ಸೂಚಿಸಲಾಗಿದೆ.

ರಾಜಸ್ಥಾನದಲ್ಲಿ ರಾತ್ರಿ ಕರ್ಫ್ಯೂ

ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವುದರಿಂದ ರಾಜಸ್ಥಾನದಲ್ಲಿ ಶುಕ್ರವಾರದಿಂದ 15 ದಿನಗಳ ಅವಧಿಗೆ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಹೇಳಿದ್ದಾರೆ.

ಸಂಜೆ 6 ಗಂಟೆಯಿಂದ ಮರುದಿನ ಮುಂಜಾನೆ 5ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ. ಏ.16ರಿಂದ 30ರವರೆಗೆ ಶೈಕ್ಷಣಿಕ ಸಂಸ್ಥೆಗಳು, ಕೋಚಿಂಗ್‌ ಕೇಂದ್ರ, ಗ್ರಂಥಾಲಯಗಳನ್ನು ಮುಚ್ಚಲಾಗುವುದು ಎಂದು ಸರ್ಕಾರ ಹೇಳಿದೆ. ಮದುವೆ, ಮುಂಜಿ ಮುಂತಾದ ಸಾರ್ವಜನಿಕ ಸಮಾರಂಭಗಳಲ್ಲಿ ಗರಿಷ್ಠ 50 ಮಂದಿ ಹಾಗೂ  ಅಂತ್ಯಸಂಸ್ಕಾರದಲ್ಲಿ ಗರಿಷ್ಠ 20 ಜನರು ಮಾತ್ರ ಪಾಲ್ಗೊಳ್ಳಬಹುದು ಎಂದು ಸರ್ಕಾರ ಹೇಳಿದೆ.

ಪೂಜಾ ಸ್ಥಳಗಳಲ್ಲಿ ಆಡಳಿತ ಮಂಡಳಿಯವರು ದೈನಂದಿನ ವಿಧಿವಿಧಾನಗಳನ್ನು ನೆರವೇರಿಸಬಹುದು. ಆದರೆ, ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ಚಿತ್ರಮಂದಿರ, ಮಲ್ಟಿಪ್ಲೆಕ್ಸ್‌, ಪಾರ್ಕ್‌ ಮುಂತಾದ ಮನರಂಜನಾ ಸ್ಥಳಗಳನ್ನೂ ಮುಚ್ಚಲಾಗುವುದು ಎಂದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು