ಶುಕ್ರವಾರ, ಜೂನ್ 25, 2021
26 °C
ಸಾವಿನ ಪ್ರಮಾಣ ಶೇ 1.93ಕ್ಕೆ ಕುಸಿತ

50 ಸಾವಿರ ದಾಟಿದ ಕೋವಿಡ್‌ ಸಾವು: 26 ಲಕ್ಷ ದಾಟಿದ ಪ್ರಕರಣ ಸಂಖ್ಯೆ

ಪಿಟಿಐ Updated:

ಅಕ್ಷರ ಗಾತ್ರ : | |

Coronavirus

ನವದೆಹಲಿ: ಭಾರತದಲ್ಲಿ ಕೋವಿಡ್‌ನಿಂದ ಸಾಯುವವರ ಪ್ರಮಾಣವು ಭಾನುವಾರ ಶೇ 1.93ಕ್ಕೆ ಕುಸಿದಿದೆ. ಸಾವಿನ ಪ್ರಮಾಣ ಅತ್ಯಂತ ಕಡಿಮೆ ಇರುವ ದೇಶಗಳಲ್ಲಿ ಭಾರತವೂ ಒಂದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಭಾನುವಾರ ರಾತ್ರಿ 9.30ರ ಅಂಕಿ ಅಂಶದ ಪ್ರಕಾರ, ಸಾವಿನ ಸಂಖ್ಯೆಯು 50,951 ಸಾವಿರ ಆಗಿದೆ. 

ಸಾವಿನ ಸಂಖ್ಯೆಯು 50 ಸಾವಿರ ದಾಟಲು ಬೇರೆ ಬೇರೆ ದೇಶಗಳಲ್ಲಿ ಎಷ್ಟು ದಿನಗಳಾಗಿವೆ ಎಂಬ ವಿವರವನ್ನೂ ಸಚಿವಾಲಯ ನೀಡಿದೆ. ಅಮೆರಿಕದಲ್ಲಿ 23 ದಿನ, ಬ್ರೆಜಿಲ್‌ನಲ್ಲಿ 95 ದಿನ ಮತ್ತು ಮೆಕ್ಸಿಕೊದಲ್ಲಿ 141 ದಿನಗಳಲ್ಲಿ ಸಾವಿನ ಸಂಖ್ಯೆ 50 ಸಾವಿರ ದಾಟಿತ್ತು. ಭಾರತದಲ್ಲಿ 156 ದಿನಗಳು ಬೇಕಾದವು ಎಂದು ಸಚಿವಾಲಯ ತಿಳಿಸಿದೆ. 

ದೇಶದಲ್ಲಿ ಮೊದಲ ಕೋವಿಡ್‌ ಪ್ರಕರಣ ಕೇರಳದಲ್ಲಿ ಪತ್ತೆಯಾಗಿತ್ತು. ಅದಾಗಿ, ಸುಮಾರು ಒಂದೂವರೆ ತಿಂಗಳ ನಂತರ ಮೊದಲ ಸಾವು ಸಂಭವಿಸಿತ್ತು. ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಸಾವು ವರದಿಯಾಗಿದೆ. ಮಿಜೋರಾಂನಲ್ಲಿ ಈವರೆಗೆ ಒಂದೂ ಸಾವಿನ ಪ್ರಕರಣ ವರದಿಯಾಗಿಲ್ಲ. ಸಿಕ್ಕಿಂನಲ್ಲಿ ಕೋವಿಡ್‌ನಿಂದಾಗಿ ಒಬ್ಬರು ಮಾತ್ರ ಮೃತಪಟ್ಟಿದ್ದಾರೆ. 

ದೇಶದಲ್ಲಿ ಸಾವಿನ ಪ್ರಮಾಣವು ಶೇ 1.93ರಷ್ಟಿದ್ದರೆ, ಮೂರು ರಾಜ್ಯ ಗಳಲ್ಲಿ ಇದಕ್ಕಿಂತ ಹೆಚ್ಚಿನ ಪ್ರಮಾಣ ದಾಖಲಾಗಿದೆ. ಗುಜರಾತ್‌ (ಶೇ 3.56), ಮಹಾರಾಷ್ಟ್ರ (ಶೇ 3.38) ಮತ್ತು ಮಧ್ಯ ಪ್ರದೇಶದಲ್ಲಿ (ಶೇ 2.46) ಸಾವಿನ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚು ಇದೆ. 

ದೇಶದಲ್ಲಿ ಭಾನುವಾರ 56 ಸಾವಿರ ಹೊಸ ಪ್ರಕರಣಗಳು ವರದಿ ಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆಯು 26.42 ಲಕ್ಷಕ್ಕೆ ಏರಿದೆ. ಈಗ ಇರುವ ಸಕ್ರಿಯ ಪ್ರಕರಣಗಳ ಸಂಖ್ಯೆಯು 6.81 ಲಕ್ಷ. ಆಗಸ್ಟ್ 7ರಿಂದ ಪ್ರತಿದಿನವೂ 60 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿ ಯಾಗುತ್ತಿವೆ. ಆಗಸ್ಟ್ 11ರಂದು ಮಾತ್ರ ಈ ಸಂಖ್ಯೆಯು 60 ಸಾವಿರಕ್ಕಿಂತ ಕಡಿಮೆ ಇತ್ತು. 

ಕೋವಿಡ್‌ ಚಿಕಿತ್ಸಾ ಪ್ರಕ್ರಿಯೆಯಲ್ಲಿ ಸಿಕ್ಕ ಅರಿವನ್ನು ಚಿಕಿತ್ಸಾ ಮಾರ್ಗ ಸೂಚಿಯಾಗಿ ತಕ್ಷಣವೇ ರೂಪಿಸುವುದು ಸಾಧ್ಯವಾಗಿದೆ. ಹಾಗಾಗಿಯೇ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸಾವಿನ ಪ್ರಮಾಣ ಕಡಿಮೆಯಾಗಿದೆ ಎಂದು ಸಾರ್ವಜನಿಕ ಆರೋಗ್ಯ ಪರಿಣತರು ಹೇಳಿದ್ದಾರೆ. ‌

ಹೆಚ್ಚು ಸಾವು ಎಲ್ಲಿ?

19,749 ಮಹಾರಾಷ್ಟ್ರ

5,766 ತಮಿಳುನಾಡು

4,196 ದೆಹಲಿ 

3,831 ಕರ್ನಾಟಕ 

2,393 ಉತ್ತರ ಪ್ರದೇಶ

2,377 ಪಶ್ಚಿಮ ಬಂಗಾಳ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು