ಸೋಮವಾರ, ಆಗಸ್ಟ್ 15, 2022
20 °C

ವಿಸ್ಟ್ರಾನ್‌ ಗಲಭೆ: ಯಡಿಯೂರಪ್ಪ ಧೋರಣೆಗೆ ಸಿಪಿಐ(ಎಂ) ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ವಿಸ್ಟ್ರಾನ್‌ ಕಾರ್ಖಾನೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಕಾರ್ಮಿಕ ವಿರೋಧಿ ನಿಲುವು ಕೈಗೊಂಡಿದ್ದಾರೆ ಎಂದು ಸಿಪಿಐ(ಎಂ) ಆರೋಪಿಸಿದೆ.

ಪಕ್ಷದ ಪಾಲಿಟ್‌ ಬ್ಯೂರೊ ಸಭೆಯಲ್ಲಿ ಈ ವಿಷಯದ ಬಗ್ಗೆ ಸಮಾಲೋಚನೆ ನಡೆಸಿದ ಮುಖಂಡರು, ಕಾರ್ಮಿಕರ ಬಂಧನ ಮತ್ತು ಪೊಲೀಸರ ದೌರ್ಜನ್ಯವನ್ನು ಖಂಡಿಸಿದರು.

ನಾಲ್ಕು ತಿಂಗಳು ಕಾಲ ಗುತ್ತಿಗೆ ಕಾರ್ಮಿಕರಿಗೆ ವೇತನ ನೀಡಿರಲಿಲ್ಲ ಮತ್ತು 12 ಗಂಟೆಗಳ ಕಾಲ ದುಡಿಸಿಕೊಳ್ಳಲಾಗುತ್ತಿತ್ತು. ಹೀಗಾಗಿಯೇ ಕಾರ್ಮಿಕರು ರೊಚ್ಚಿಗೆದ್ದು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.

ವಿಸ್ಟ್ರಾನ್‌ನಲ್ಲಿನ ಸುಮಾರು ಹತ್ತು ಸಾವಿರ ಕಾರ್ಮಿಕರಲ್ಲಿ ಶೇಕಡ 80ರಷ್ಟು ಮಂದಿ ಗುತ್ತಿಗೆ ಕಾರ್ಮಿಕರಿದ್ದಾರೆ. ಇವರನ್ನು ಕಾಯಂ ಮಾಡಿಕೊಂಡಿರಲಿಲ್ಲ. ಬಹುರಾಷ್ಟ್ರೀಯ ಕಂಪನಿಗಳಲ್ಲಿ ಈ ರೀತಿ ಕಾನೂನುಗಳನ್ನು ಉಲ್ಲಂಘಿಸುವುದು ಸಾಮಾನ್ಯವಾಗುತ್ತಿದೆ. ಆ್ಯಪಲ್‌ ಕಂಪನಿ ಸಹ ವಿಸ್ಟ್ರಾನ್‌ ಕಂಪನಿ ನಿಯಮಗಳನ್ನು ಉಲ್ಲಂಘಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. ಆದರೆ, ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಕಾರ್ಮಿಕರ ಪರ ನಿಲುವು ತೆಗೆದುಕೊಳ್ಳದೆಯೇ ವಿಸ್ಟ್ರಾನ್‌ ಕಂಪನಿಗೆ ಬೆಂಬಲ ಸೂಚಿಸುತ್ತಿದ್ದಾರೆ ಎಂದು ತಿಳಿಸಿದೆ.

 ಹೊಸ ಕಾರ್ಮಿಕ ಸಂಹಿತೆ ಜಾರಿಯಾದರೆ ಕಾರ್ಮಿಕರ ಹಕ್ಕುಗಳನ್ನು ಉಲ್ಲಂಘಿಸುವುದು ಮತ್ತಷ್ಟು ಸಹಜವಾಗುತ್ತದೆ.  ವಿದೇಶಿ ಬಂಡವಾಳ ಹೂಡಿಕೆ ಆಕರ್ಷಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಹ ಕಾರ್ಮಿಕ ವಿರೋಧಿ ನಿಲುವು ಕೈಗೊಳ್ಳಬಾರದು ಎಂದು ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು