ಬುಧವಾರ, ಸೆಪ್ಟೆಂಬರ್ 22, 2021
29 °C
ಹಲವೆಡೆ ಉರುಳಿಬಿದ್ದ ಮರಗಳು: 155 ಕಿಲೋ ಮೀಟರ್‌ ವೇಗದಲ್ಲಿ ಬೀಸುತ್ತಿರುವ ಬಿರುಗಾಳಿ

ಒಡಿಶಾಗೆ ಅಪ್ಪಳಿಸಿದ ’ಯಸ್‌’ ಚಂಡಮಾರುತ

ಪಿಟಿಐ Updated:

ಅಕ್ಷರ ಗಾತ್ರ : | |

ಬಾಲಾಸೋರ್‌/ದಿಘಾ/ಕೋಲ್ಕತ್ತ: ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ‘ಯಸ್‌’ ಚಂಡಮಾರುತವು ಒಡಿಶಾದ ಭದ್ರಕ್‌ ಜಿಲ್ಲೆಯ ಧಾಮ್ರ ಬಂದರು ಸಮೀಪದಲ್ಲಿ ಬುಧವಾರ ಬೆಳಿಗ್ಗೆ 9.15ಕ್ಕೆ ಭೂಪ್ರದೇಶಕ್ಕೆ ಅಪ್ಪಳಿಸಿದೆ.

ಬಾಲಾಸೋರ್‌ನಿಂದ 50 ಕಿಲೋ ಮೀಟರ್‌ ದೂರದಲ್ಲಿ ಈ ಚಂಡಮಾರುತ ಅಪ್ಪಳಿಸಿದೆ. ಪ್ರತಿ ಗಂಟೆಗೆ ಸುಮಾರು 130ರಿಂದ 155 ಕಿಲೋ ಮೀಟರ್‌ ವೇಗದಲ್ಲಿ ಬಿರುಗಾಳಿ ಬೀಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಚಂಡಮಾರುತ ಅಪ್ಪಳಿಸುವ ಪ್ರಕ್ರಿಯೆ ಆರಂಭವಾಗಿದೆ. ಮೂರರಿಂದ ನಾಲ್ಕು ಗಂಟೆ ಒಳಗೆ ಪೂರ್ಣಗೊಳ್ಳುತ್ತದೆ. ಬಾಲಾಸೋರ್‌ ಮತ್ತು ಭದ್ರಕ್‌ ಜಿಲ್ಲೆಯಲ್ಲಿ ಅಪಾರ ಪರಿಣಾಮ ಬೀರಲಿದೆ’ ಎಂದು ಒಡಿಶಾದ ವಿಶೇಷ ಪರಿಹಾರ ಆಯುಕ್ತ ಪಿ.ಕೆ. ಜೆನಾ ತಿಳಿಸಿದ್ದಾರೆ.

‘ಹವಾಮಾನ ಇಲಾಖೆ ಈ ಮೊದಲು ಬಿರುಗಾಳಿಯು ಪ್ರತಿ ಗಂಟೆಗೆ 155–165 ಕಿಲೋ ಮೀಟರ್‌ ವೇಗದಲ್ಲಿ ಬೀಸಲಿದೆ ಎಂದು ಅಂದಾಜಿಸಿತ್ತು. ಆದರೆ, ಚಂಡಮಾರುತ ಅಪ್ಪಳಿಸುವ ಸಂದರ್ಭದಲ್ಲಿ ತೀವ್ರತೆ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ. ಬಿರುಗಾಳಿ ಪ್ರತಿ ಗಂಟೆಗೆ 165 ಕಿಲೋ ಮೀಟರ್‌ ಬದಲು 130ರಿಂದ 140 ಕಿಲೋ ಮೀಟರ್‌ ವೇಗದಲ್ಲಿ ಬೀಸುತ್ತಿದೆ’ ಎಂದು ಅವರು ತಿಳಿಸಿದ್ದಾರೆ.

‘ಕೆಲವು ಸ್ಥಳಗಳಲ್ಲಿ ಮರಗಳು ಉರುಳಿ ಬಿದ್ದಿರುವುದು ವರದಿಯಾಗಿದೆ. ಉಳಿದಂತೆ ಅಪಾರ ಹಾನಿಯಾದ ವರದಿಯಾಗಿಲ್ಲ. ಸುಮಾರು 5.80 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳಾದ ಪೂರ್ವ ಮಿದ್ನಾಪುರ ಮತ್ತು ದಕ್ಷಿಣ 24 ಪರಗಣದ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದರಿಂದ ಪೂರ್ವ ಮಿದ್ನಾಪುರದಲ್ಲಿ ಹಲವು ಒಡ್ಡುಗಳು ಒಡೆದುಹೋಗಿವೆ.

ಪೂರ್ವ ಮಿದ್ನಾಪುರದ ದಿಘಾಪುರದಲ್ಲಿ ಪ್ರತಿ ಗಂಟೆಗೆ 90 ಕಿಲೋ ಮೀಟರ್‌ ವೇಗದಲ್ಲಿ ಬಿರುಗಾಳಿ ಬೀಸುತ್ತಿತ್ತು. ಕೋಲ್ಕತ್ತದಲ್ಲೂ ಪ್ರತಿ ಗಂಟೆಗೆ 62 ಕಿಲೋ ಮೀಟರ್‌ ವೇಗದಲ್ಲಿ ಬಿರುಗಾಳಿ ಬೀಸುತ್ತಿತ್ತು. ದಕ್ಷಿಣ ಬಂಗಾಳದ ಪ್ರದೇಶಗಳಲ್ಲೂ ಮಂಗಳವಾರ ರಾತ್ರಿಯಿಂದ ಭಾರೀ ಮಳೆಯಾಗಿದೆ.

ಪಶ್ಚಿಮ ಬಂಗಾಳದಲ್ಲಿ 9 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಒಡಿಶಾದ ಹಲವು ಭಾಗಗಳಲ್ಲಿ ಮಳೆಯಾಗಿದೆ. ಭದ್ರಕ್‌ ಜಿಲ್ಲೆಯಲ್ಲಿ 273 ಮಿಲಿಮೀಟರ್‌ ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ದಾಖಲಾದ ಅತಿ ಹೆಚ್ಚಿನ ಪ್ರಮಾಣದಲ್ಲಿ ಸುರಿದ ಮಳೆ ಇದಾಗಿದೆ.

ಪರಿಹಾರ ಮತ್ತು ರಕ್ಷಣಾ ಕಾರ್ಯ ಕೈಗೊಳ್ಳಲು 52 ಎನ್‌ಡಿಆರ್‌ಎಫ್‌ ಸೇರಿದಂತೆ 404 ತಂಡಗಳನ್ನು ನಿಯೋಜಿಸಲಾಗಿದೆ.

ಪಶ್ಚಿಮ ಬಂಗಳಾದಲ್ಲಿ ಚಂಡಮಾರುತದ ಬಳಿಕ ವಿದ್ಯುತ್‌ ಸ್ಪರ್ಶದಿಂದ ಇಬ್ಬರು ಸಾವಿಗೀಡಾಗಿದ್ದು, 80 ಮನೆಗಳು ಭಾಗಶಃ ಹಾನಿಗೊಳಗಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು