ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಜೂರಾದ ಹುದ್ದೆಗೆ ನೇಮಕಗೊಂಡಿದ್ದರೆ ಮಾತ್ರ ದಿನಗೂಲಿ ನೌಕರನ ಸೇವೆ ಕಾಯಂ

Last Updated 9 ಫೆಬ್ರುವರಿ 2023, 14:28 IST
ಅಕ್ಷರ ಗಾತ್ರ

ನವದೆಹಲಿ: ಮಂಜೂರಾದ ಹುದ್ದೆಗೆ ಸಕ್ಷಮ ಪ್ರಾಧಿಕಾರವು ನೇಮಕ ಮಾಡಿರದ ಹೊರತು, ದಿನಗೂಲಿ ನೌಕರನ ಸೇವೆಯನ್ನು ಕಾಯಂಗೊಳಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್‌ ಹೇಳಿದೆ.

ತನ್ನ ಸೇವೆಯನ್ನು ಕಾಯಂಗೊಳಿಸುವಂತೆ ಕೋರಿ ಮಧ್ಯಪ್ರದೇಶದ ವಿಭೂತಿಶಂಕರ್‌ ಪಾಂಡೆ ಎಂಬ ದಿನಗೂಲಿ ನೌಕರ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ, ನ್ಯಾಯಮೂರ್ತಿಗಳಾದ ಎಸ್‌.ರವೀಂದ್ರ ಭಟ್ ಹಾಗೂ ಸುಧಾಂಶು ಧುಲಿಯಾ ಅವರಿದ್ದ ನ್ಯಾಯಪೀಠ ಈ ಮಾತನ್ನು ಹೇಳಿದೆ.

ಈ ಪ್ರಕರಣದಲ್ಲಿ ಮಧ್ಯಪ್ರದೇಶ ಹೈಕೋರ್ಟ್‌ನ ವಿಭಾಗೀಯ ಪೀಠವು 2020ರ ಫೆಬ್ರುವರಿ 13ರಂದು ನೀಡಿದ್ದ ಆದೇಶವನ್ನು ಪ್ರಶ್ನಿಸಿ ವಿಭೂತಿಶಂಕರ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಪೀಠ ವಜಾಗೊಳಿಸಿತು.

ಪ್ರಕರಣದ ವಿವರ: ವಿಭೂತಿಶಂಕರ್‌ ಅವರು 1980ರಲ್ಲಿ ದಿನಗೂಲಿ ಆಧಾರದ ಮೇಲೆ ಜಲ ಸಂಪನ್ಮೂಲ ಇಲಾಖೆಯಲ್ಲಿ ಸೂಪರ್‌ವೈಸರ್‌ ಆಗಿ ನೇಮಕಗೊಂಡಿದ್ದರು. ಈ ಹುದ್ದೆಗೆ ನೇಮಕವಾಗಲು ಅಭ್ಯರ್ಥಿಯು ಗಣಿತದೊಂದಿಗೆ ಮೆಟ್ರಿಕ್ಯುಲೇಷನ್‌ನಲ್ಲಿ ತೇರ್ಗಡೆಯಾಗಿರಬೇಕಿತ್ತು. ವಿಭೂತಿಶಂಕರ್‌ ಈ ಶೈಕ್ಷಣಿಕ ಅರ್ಹತೆ ಹೊಂದಿರಲಿಲ್ಲ.

ಆದರೆ, 2010ರ ಡಿಸೆಂಬರ್‌ 31ರಂದು ಈ ಹುದ್ದೆಗೆ ನಿಗದಿಪಡಿಸಿದ್ದ ಶೈಕ್ಷಣಿಕ ಅರ್ಹತೆಯಲ್ಲಿ ವಿನಾಯಿತಿ ನೀಡಲಾಗಿತ್ತು.

ದಿನಗೂಲಿ ನೌಕರರ ಪೈಕಿ ತನಗಿಂತ ಕಿರಿಯರ ಸೇವೆಯನ್ನು 1990ರಲ್ಲಿ ಹಾಗೂ ಅದಕ್ಕೂ ಮುಂಚೆಯೂ ಕಾಯಂಗೊಳಿಸಲಾಗಿದೆ. ಹೀಗಾಗಿ, ತನ್ನ ಸೇವೆಯನ್ನು ಕಾಯಂಗೊಳಿಸುವಂತೆ ಕೋರಿ ಅರ್ಜಿದಾರ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಇಲಾಖೆಯಲ್ಲಿ ಸೂಪರ್‌ವೈಸರ್‌ ಆಗಿ ವಿಭೂತಿಶಂಕರ್‌ ಅವರ ಸೇವೆಯನ್ನು ಕಾಯಂಗೊಳಿಸುವಂತೆ ನಿರ್ದೇಶಿಸಿ ಹೈಕೋರ್ಟ್‌ನ ಏಕ ಸದಸ್ಯ ಪೀಠ ಆದೇಶಿಸಿತ್ತು. ನಂತರ, ವಿಭಾಗೀಯ ಪೀಠವು ಏಕಸದಸ್ಯ ಪೀಠದ ಆದೇಶವನ್ನು ರದ್ದುಗೊಳಿಸಿತ್ತು. ವಿಭಾಗೀಯ ಪೀಠದ ಈ ತೀರ್ಪನ್ನು ಪ್ರಶ್ನಿಸಿ ವಿಭೂತಿಶಂಕರ್‌ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ವೇಳೆ, ‘ಕರ್ನಾಟಕ ಸರ್ಕಾರದ ಕಾರ್ಯದರ್ಶಿ ವಿರುದ್ಧ ಉಮಾದೇವಿ ಹಾಗೂ ಇತರರು’ ಪ್ರಕರಣದಲ್ಲಿ 2006ರಲ್ಲಿ ನೀಡಿದ್ದ ತೀರ್ಪನ್ನು ನ್ಯಾಯಪೀಠ ಉಲ್ಲೇಖಿಸಿತು.

‘ಸಕ್ಷಮ ಪ್ರಾಧಿಕಾರದಿಂದ ನೇಮಕಾತಿ ನಡೆದಿರಬೇಕು ಹಾಗೂ ದಿನಗೂಲಿ ನೌಕರ ಕರ್ತವ್ಯ ನಿರ್ವಹಿಸುತ್ತಿರುವ ಹುದ್ದೆಯು ಮಂಜೂರಾದ ಹುದ್ದೆಯಾಗಿರಬೇಕು. ಈ ಎರಡು ಅಂಶಗಳನ್ನು ಏಕಸದಸ್ಯ ಪೀಠವು ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದು ಅಭಿಪ್ರಾಯಪಟ್ಟು ಮಧ್ಯಪ್ರದೇಶ ಹೈಕೋರ್ಟ್‌ ವಿಭಾಗೀಯ ಪೀಠವು ನೀಡಿರುವ ತೀರ್ಪು ಸರಿಯಾಗಿಯೇ ಇದೆ’ ಎಂದು ಸುಪ್ರೀಂಕೋರ್ಟ್‌ ಹೇಳಿತು.

‘ಕನಿಷ್ಠ ವಿದ್ಯಾರ್ಹತೆಯಲ್ಲಿ ವಿನಾಯಿತಿ ನೀಡಿರುವ ಅಂಶವು ಅರ್ಜಿದಾರನ ಸೇವೆಯನ್ನು ಕಾಯಂಗೊಳಿಸಲು ಅಡ್ಡಿಯಾಗುವುದಿಲ್ಲ. ಆದರೆ, ಮಂಜೂರಾದ ಹುದ್ದೆಯೊಂದಕ್ಕೆ ಅರ್ಜಿದಾರ ನೇಮಕಗೊಂಡಿಲ್ಲ ಎಂಬುದು ವಾಸ್ತವ ಸಂಗತಿ’ ಎಂದೂ ಸುಪ್ರೀಂಕೋರ್ಟ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT