ಶುಕ್ರವಾರ, ಜುಲೈ 1, 2022
27 °C
ಸಹೋದರರಿಗೆ ತಿಂಗಳಿಗೆ ₹ 10 ಲಕ್ಷ ಕಳುಹಿಸುತ್ತಿರುವ ದಾವೂದ್‌ ಇಬ್ರಾಹಿಂ

ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಕರಾಚಿಯಲ್ಲಿದ್ದಾನೆ: ಇ.ಡಿಗೆ ಸಾಕ್ಷಿದಾರರ ಹೇಳಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಮಹಾರಾಷ್ಟ್ರ ಸಚಿವ ನವಾಬ್‌ ಮಲಿಕ್‌ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣದ ಸಾಕ್ಷಿದಾರರೊಬ್ಬರು ಭೂಗತ ಪಾತಕಿ ದಾವುದ್‌ ಇಬ್ರಾಹಿಂ ಪಾಕಿಸ್ತಾನದ ಕರಾಚಿಯಲ್ಲಿ ನೆಲೆಸಿದ್ದಾನೆ ಎಂಬುದಾಗಿ ಸಾಕ್ಷಿ ನುಡಿದಿದ್ದಾರೆ. ದಾವೂದ್‌ ತನ್ನ ಒಡಹುಟ್ಟಿದವರಿಗೆ ಪ್ರತಿ ತಿಂಗಳು ₹ 10 ಲಕ್ಷ ಕಳುಹಿಸುತ್ತಾನೆ ಎಂಬುದಾಗಿ ಮತ್ತೊಬ್ಬ ಸಾಕ್ಷಿದಾರ ಜಾರಿ ನಿರ್ದೇಶನಾಲಯದ (ಇ.ಡಿ) ಮುಂದೆ ಹೇಳಿಕೆ ನೀಡಿದ್ದಾರೆ. 

ದಾವೂದ್ ಇಬ್ರಾಹಿಂ ಆಸ್ತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನವಾಬ್‌ ಮಲಿಕ್ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿರುವ ಚಾರ್ಜ್ ಶೀಟ್‌ನಲ್ಲಿ ಈ ಇಬ್ಬರು ಸಾಕ್ಷಿದಾರರ ಹೇಳಿಕೆಗಳನ್ನು ದಾಖಲಿಸಲಾಗಿದೆ. ಅಲಿಶಾಹ್‌ ಪಾರ್ಕರ್ ಹಾಗೂ ಖಾಲಿದ್ ಉಸ್ಮಾನ್ ಶೇಖ್ ಇ.ಡಿ ಎದುರು ಹೇಳಿಕೆ ನೀಡಿರುವ ಸಾಕ್ಷಿದಾರರು.

‘ದಾವೂದ್‌ ಇಬ್ರಾಹಿಂ ನನ್ನ ಮಾವ (ಸೋದರ ಮಾವ). 1986ರ ಸುಮಾರಿಗೆ ಅವರು ಮುಂಬೈನ ದಂಬರ್ವಾಲಾ ಕಟ್ಟಡದ 4ನೇ ಮಹಡಿಯಲ್ಲಿ ವಾಸಿಸುತ್ತಿದ್ದರು’ ಎಂದು ದಾವೂದ್‌ನ ಸಹೋದರಿ ಹಸೀನಾ ಪಾರ್ಕರ್‌ ಅವರ ಮಗ ಅಲಿಶಾಹ್‌ ಪಾರ್ಕರ್‌ ಹೇಳಿದ್ದಾರೆ. 

‘1986ರ ಬಳಿಕ ದಾವೂದ್‌ ಪಾಕಿಸ್ತಾನದ ಕರಾಚಿಯಲ್ಲಿ ವಾಸಿಸುತ್ತಿದ್ದಾರೆ ಎಂಬುದಾಗಿ ವಿವಿಧ ಮೂಲಗಳು ಮತ್ತು ಕುಟುಂಬದವರಿಂದ ತಿಳಿದಿದ್ದೇನೆ. ಅವರು ಕರಾಚಿಗೆ ಹೋದಾಗ ನಾನಿನ್ನೂ ಹುಟ್ಟಿರಲಿಲ್ಲ. ನಾನು ಅಥವಾ ನನ್ನ ಕುಟುಂಬದವರು ಅವರೊಂದಿಗೆ ಸಂಪರ್ಕದಲ್ಲಿಲ್ಲ’ ಎಂದು ಅವರು ಇ.ಡಿಗೆ ತಿಳಿಸಿದ್ದಾರೆ. 

‘ಆದರೆ ಈದ್‌, ದೀಪಾವಳಿ ಮತ್ತು ಇತರ ಹಬ್ಬಗಳ ಸಂದರ್ಭದಲ್ಲಿ ನನ್ನ ಪತ್ನಿ ಮತ್ತು ಸಹೋದರಿಯರ ಜತೆಗೆ ದಾವೂದ್‌ ಅವರ ಪತ್ನಿ ಸಂಪರ್ಕದಲ್ಲಿರುತ್ತಾರೆ’ ಎಂದು ಪಾರ್ಕರ್ ಹೇಳಿಕೆ ನೀಡಿದ್ದಾರೆ. 

‘ದಾವೂದ್‌ ತನ್ನ ಜನರ ಮೂಲಕ ಹಣ ಕಳುಹಿಸುತ್ತಾರೆ ಎಂದು ಆತನ ಸಹೋದರ ಕಸ್ಕರ್‌ (ಇಕ್ಬಾಲ್‌) ತಿಳಿಸಿರುವುದಾಗಿ’ ಮತ್ತೊಬ್ಬ ಸಾಕ್ಷಿದಾರ ಖಾಲಿದ್‌ ಉಸ್ಮಾನ್‌ ಶೇಖ್‌ ಹೇಳಿಕೆ ನೀಡಿದ್ದಾರೆ. ‘ಪ್ರತಿ ತಿಂಗಳು ₹ 10 ಲಕ್ಷವನ್ನು ತಾನು ಪಡೆಯುತ್ತಿರುವುದಾಗಿ ಕಸ್ಕರ್‌ ನನ್ನ ಬಳಿ ಹೇಳಿದ್ದಾರೆ. ಅಲ್ಲದೆ ಒಂದೆರಡು ಸಾರಿ ಅವರು ನನಗೆ ಆ ಹಣವನ್ನೂ ತೋರಿಸಿ, ಇದು ದಾವೂದ್‌ಭಾಯಿ ಅವರಿಂದ ಸ್ವೀಕರಿಸಿದ್ದು ಎಂದೂ ತಿಳಿಸಿದ್ದಾರೆ’ ಎಂದು ಹೇಳಿಕೆಯಲ್ಲಿ ದಾಖಲಿಸಿದ್ದಾರೆ. 

ಎನ್‌ಸಿಪಿ ಹಿರಿಯ ನಾಯಕರೂ ಆಗಿರುವ ಮಲಿಕ್ (62) ಅವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಈ ವರ್ಷ ಫೆಬ್ರುವರಿ 23ರಂದು ಇ.ಡಿ ಬಂಧಿಸಿತ್ತು. ಅವರು ಪ್ರಸ್ತುತ ಜೈಲಿನಲ್ಲಿದ್ದಾರೆ.

1993ರ ಮುಂಬೈ ಸರಣಿ ಬಾಂಬ್‌ ಸ್ಫೋಟದ ಪ್ರಮುಖ ಆರೋಪಿ, ಭಯೋತ್ಪಾದಕ ದಾವೂದ್‌ ಇಬ್ರಾಹಿಂ ಮತ್ತು ಅವರ ಸಹಚರರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ ಇತ್ತೀಚೆಗೆ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಎಫ್‌ಐಆರ್‌ ದಾಖಲಿಸಿದೆ. ಅದನ್ನು ಆಧರಿಸಿ ಇ.ಡಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು