ಶನಿವಾರ, ಜನವರಿ 29, 2022
17 °C
ಲೋಕಸಭೆಗೆ ಸರ್ಕಾರದಿಂದ ಮಾಹಿತಿ

ಬೂಸ್ಟರ್‌ ಡೋಸ್‌: ತಜ್ಞರ ಶಿಫಾರಸಿನಂತೆ ನಿರ್ಧಾರ

ಪಿಟಿಐ Updated:

ಅಕ್ಷರ ಗಾತ್ರ : | |

ಸಾಂದರ್ಭಿಕ ಚಿತ್ರ

ನವದೆಹಲಿ: ‘ಬೂಸ್ಟರ್‌ ಡೋಸ್‌ ನೀಡುವ ಬಗ್ಗೆ ಮತ್ತು ಮಕ್ಕಳಿಗೆ ಕೋವಿಡ್‌ ಲಸಿಕೆ ನೀಡುವ ಸಂಬಂಧ ತಜ್ಞರು ನೀಡಿರುವ ವೈಜ್ಞಾನಿಕ ಮಾರ್ಗಸೂಚಿಗಳ ಆಧಾರದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ’ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಹೇಳಿದ್ದಾರೆ.

ಲೋಕಸಭೆಯಲ್ಲಿ ಶುಕ್ರವಾರ ಓಮೈಕ್ರಾನ್‌ ರೂಪಾಂತರ ಕೋವಿಡ್‌ ತಳಿಯ ಕುರಿತು ನಡೆದ ಚರ್ಚೆಯ ವೇಳೆ ಅವರು ಈ ಮಾತು ಹೇಳಿದ್ದಾರೆ.

‘ಓಮೈಕ್ರಾನ್‌ ಹರಡುವುದನ್ನು ತಡೆಗಟ್ಟಲು ಕೇಂದ್ರ ಸರ್ಕಾರವು ಈಗಾಗಲೇ ಸಾಕಷ್ಟು ಕ್ರಮ ತೆಗೆದುಕೊಂಡಿದೆ. ಓಮೈಕ್ರಾನ್‌ ಪತ್ತೆಯಾಗಿರುವ ದೇಶಗಳಿಂದ ಬರುವ ಪ್ರಯಾಣಿಕರನ್ನು ಆರ್‌ಟಿ–ಪಿಸಿಆರ್‌ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈವರೆಗೆ 16,000 ವಿದೇಶಿ ಪ್ರಯಾಣಿಕರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಅವರಲ್ಲಿ 18 ಜನರಲ್ಲಿ ಕೋವಿಡ್ ಇರುವುದು ಪತ್ತೆಯಾಗಿದೆ. ಆ 18 ಜನರ ಮೂಗು ಮತ್ತು ಗಂಟಲ ದ್ರವದ ಮಾದರಿಯನ್ನು ವೈರಾಣು ಸಂರಚನೆ ವಿಶ್ಲೇಷಣೆಗೆ ಕಳುಹಿಸಲಾಗಿದೆ’ ಎಂದು ಅವರು ಲೋಕಸಭೆಗೆ ಮಾಹಿತಿ ನೀಡಿದ್ದಾರೆ.

‘ದೇಶದಲ್ಲಿ ಕೋವಿಡ್‌ ಮತ್ತೆ ತೀವ್ರತೆ ಪಡೆದರೆ ಅದನ್ನು ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಲ್ಲಾ ರಾಜ್ಯಗಳಲ್ಲಿ ಸಾಕಷ್ಟು ಸಂಖ್ಯೆಯ ಲಸಿಕೆ ಲಭ್ಯವಿದೆ. ರಾಜ್ಯಗಳ ಬಳಿ ಇನ್ನೂ 21 ಕೋಟಿ ಡೋಸ್‌ಗಳಷ್ಟು ಲಸಿಕೆ ಸಂಗ್ರಹವಿದೆ. ಈ ತಿಂಗಳ ಅಂತ್ಯದ ವೇಳೆಗೆ ಇನ್ನೂ 10 ಕೋಟಿ ಡೋಸ್‌ ಲಸಿಕೆ ಪೂರೈಕೆ ಮಾಡುತ್ತೇವೆ’ ಎಂದು ಅವರು ಹೇಳಿದ್ದಾರೆ.

ರಾಜಸ್ಥಾನ: 9 ಶಂಕಿತ ಪ್ರಕರಣ

ದಕ್ಷಿಣ ಆಫ್ರಿಕಾದಿಂದ ಜೈಪುರಕ್ಕೆ ವಾಪಸಾಗಿದ್ದ ಒಂದೇ ಕುಟುಂಬದ ನಾಲ್ವರಿಗೆ ಕೋವಿಡ್‌ ಇರುವುದು ದೃಢಪಟ್ಟಿದೆ. ಅದೇ ಕುಟುಂಬದ ಇನ್ನೂ ಐವರಿಗೆ ಕೋವಿಡ್‌ ತಗುಲಿದೆ. ಈ ಒಂಬತ್ತೂ ಜನರಿಗೆ ಓಮೈಕ್ರಾನ್‌ನಿಂದ ಕೋವಿಡ್‌ ತಗುಲಿದೆಯೇ ಎಂಬುದನ್ನು ದೃಢಪಡಿಸಿಕೊಳ್ಳಲು ವೈರಾಣು ಸಂರಚನೆ ವಿಶ್ಲೇಷಣೆಗೆ ಮಾದರಿಗಳನ್ನು ಕಳಿಸಲಾಗಿದೆ ಎಂದು ರಾಜಸ್ಥಾನ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ತಮಿಳುನಾಡಿನಲ್ಲಿ ಎರಡು ಶಂಕಿತ ಪ್ರಕರಣ: ಓಮೈಕ್ರಾನ್‌ ಅಪಾಯವಿರುವ ದೇಶಗಳಿಂದ ತಮಿಳುನಾಡಿಗೆ ಬಂದಿದ್ದ ಇಬ್ಬರು ಪ್ರಯಾಣಿಕರಿಗೆ ಕೋವಿಡ್‌ ಇರುವುದು ದೃಢಪಟ್ಟಿದೆ. ಬ್ರಿಟನ್‌ನಿಂದ ಚೆನ್ನೈಗೆ ತನ್ನ ಕುಟುಂಬದ ಜತೆಗೆ ಬಂದಿದ್ದ 10 ವರ್ಷದ ಬಾಲಕಿಗೆ ಕೋವಿಡ್‌ ಇರುವುದು ಪತ್ತೆಯಾಗಿದೆ. ಸಿಂಗಪುರದಿಂದ ತಿರುಚಿರಾಪಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರೊಬ್ಬರಿಗೆ ಕೋವಿಡ್‌ ಇರುವುದು ಪತ್ತೆಯಾಗಿದೆ. ಇಬ್ಬರ ಮೂಗು ಮತ್ತು ಗಂಟಲ ದ್ರವದ ಮಾದರಿಯನ್ನು ವೈರಾಣು ಸಂರಚನೆ ವಿಶ್ಲೇಷಣೆಗೆ ಕಳುಹಿಸಲಾಗಿದೆ ಎಂದು ತಮಿಳುನಾಡು ಸರ್ಕಾರವು ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು