ಮಂಗಳವಾರ, ಅಕ್ಟೋಬರ್ 27, 2020
23 °C
ಬಲವಂತವಾಗಿ ಪೇಟ ತೆಗೆಸಿದ ಆರೋಪ

ಸಿಖ್‌ ಜನಾಂಗದ ವ್ಯಕ್ತಿ ಮೇಲೆ ಹಲ್ಲೆ: ಅಲ್ಪಸಂಖ್ಯಾತ ಆಯೋಗಕ್ಕೆ ಬಿಜೆಪಿ ದೂರು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪಶ್ಚಿಮ ಬಂಗಾಳದ ಹೌರಾದಲ್ಲಿ ನಡೆದ ಬಿಜೆಪಿ ರ‍್ಯಾಲಿಯಲ್ಲಿ ಸಿಖ್ ಸಮುದಾಯದ ಬಲ್ವಿಂದರ್ ಸಿಂಗ್ ಅವರ ಮೇಲೆ ನಡೆದ ಹಲ್ಲೆ ನಡೆಸಿರುವ ಪೊಲೀಸರು ಅವರ ಪೇಟವನ್ನು (ಟರ್ಬನ್‌) ಬಲವಂತವಾಗಿ ತೆಗೆಸಿದ್ದಾರೆ ಎಂದು ಆರೋಪಿಸಿ, ದೆಹಲಿಯ ಬಿಜೆಪಿ ವಕ್ತಾರ ತಾಜಿಂದರ್ ಪಾಲ್ ಸಿಂಗ್ ಬಗ್ಗಾ ಅವರು ನೀಡಿದ ದೂರನ್ನು ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ ಪರಿಗಣಿಸಿದೆ.

ಹೌರಾದಲ್ಲಿ ಗುರುವಾರ ನಡೆದ ಬಿಜೆಪಿ ರ‍್ಯಾಲಿಯಲ್ಲಿ ಭದ್ರತಾ ಅಧಿಕಾರಿ ಬಲ್ವಿಂದರ್ ಸಿಂಗ್ ಪಾಲ್ಗೊಂಡಿದ್ದರು. ಆ ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ಬಿಜೆಪಿ ದೂರಿದೆ. ಆದರೆ, ಬಲ್ವಿಂದರ್ ತಮ್ಮ ಕೈಯಲ್ಲಿ ಮಾರಕಾಸ್ತ್ರ ಹೊಂದಿದ್ದರು. ಆ ಸಮಯದಲ್ಲಿ ಉಂಟಾದ ಘರ್ಷಣೆಯಲ್ಲಿ ಅವರ ಪೇಟ ಬಿದ್ದಿದೆ ಎಂದು ಪೊಲೀಸರು ವಿವರಣೆ ನೀಡಿದ್ದರು.

ಈ ಸಂಬಂಧ ಬಿಜೆಪಿಯ ವಕ್ತಾರ ತಾಜಿಂದರ್ ಅವರು ಭಾನುವಾರ, ಅಲ್ಪಸಂಖ್ಯಾತ ಆಯೋಗದ ಸದಸ್ಯ ಅತಿಫ್ ರಶೀದ್ ಅವರಿಗೆ ಪತ್ರ ಬರೆದಿದ್ದು, ಈ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು.

‘ಬಂಗಾಳದಲ್ಲಿ ಆಗಿರುವುದು ಕ್ಷಮಿಸಲಾಗದ್ದು. ಭದ್ರತಾ ಅಧಿಕಾರಿ ಬಲ್ವಿಂದ್ ಸಿಂಗ್ ಅವರ ಮೇಲೆ ನಡೆದ ಕ್ರೂರ ದಾಳಿ ಮತ್ತು ಪಶ್ಚಿಮ ಬಂಗಾಳ ಪೊಲೀಸರು ಅವರ ಪೇಟಕ್ಕೆ ತೋರಿರುವ ಅಗೌರವ ನಿಜಕ್ಕೂ ನಾಚಿಕೆಗೇಡು ಮತ್ತು ಖಂಡನೀಯ. ಈ ಬಗ್ಗೆ ಸಂಬಂಧಿಸಿದ ಪೊಲೀಸ್ ಅಧಿಕಾರಗಳ ವಿರುದ್ಧ ಶೀಘ್ರವೇ ಕ್ರಮ ತೆಗೆದುಕೊಳ್ಳಬೇಕು’ ಎಂದೂ ‌ತಾಜಿಂದರ್ ಪತ್ರದಲ್ಲಿ ಬರೆದಿದ್ದಾರೆ.

‘ಅಲ್ಪಸಂಖ್ಯಾತ ಆಯೋಗದ ಸದಸ್ಯನಾಗಿ ನಾನು ತಕ್ಷಣವೇ ನಿಮ್ಮ ದೂರನ್ನು ಅರಿತುಕೊಂಡಿದ್ದೇನೆ. ನಾಳೆಯ ಹೊತ್ತಿಗೆ ಆಯೋಗವು ಈ ಸಂಬಂಧ ಕ್ರಮ ಕೈಗೊಳ್ಳಲಿದೆ’ ಎಂದು ಅತಿಫ್ ಟ್ವೀಟ್ ಮಾಡಿದ್ದಾರೆ.

ಬಲ್ವಿಂದರ್ ಸಿಂಗ್ ಅವರು ಭಾರತೀಯ ಸೇನೆಯ ಮಾಜಿ ಸೈನಿಕರಾಗಿದ್ದು, ಪ್ರಸ್ತುತ ಬಿಜೆಪಿಯ ನಾಯಕರಿಗೊಬ್ಬರಿಗೆ ಭದ್ರತಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಬಿಜೆಪಿ ಪಕ್ಷದ ಮೂಲಗಳು ಹೇಳಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು