ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿರೋಧವನ್ನು ಭಯೋತ್ಪಾದನೆ ಎನ್ನದಿರಿ: ದೆಹಲಿ ಹೈಕೋರ್ಟ್‌

ಪ್ರತಿಭಟನಕಾರರಿಗೆ ಜಾಮೀನು: ಕೇಂದ್ರದ ಕಿವಿ ಹಿಂಡಿದ ನ್ಯಾಯಾಲಯ
Last Updated 15 ಜೂನ್ 2021, 19:31 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪ್ರತಿಭಟಿಸುವುದು ಮೂಲಭೂತ ಹಕ್ಕು. ಅದನ್ನು ಭಯೋತ್ಪಾದನಾ ಕೃತ್ಯ ಎನ್ನಲಾಗದು ಎಂದು ದೆಹಲಿ ಹೈಕೋರ್ಟ್‌ ಮಂಗಳವಾರ ಹೇಳಿದೆ.

ದೆಹಲಿ ಗಲಭೆಗೆ ಸಂಬಂಧಿಸಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಅಡಿಯಲ್ಲಿ ಮೇ 2020ರಿಂದಲೇ ಬಂಧನದಲ್ಲಿದ್ದ ಪಿಂಜ್ರಾ ತೋಡ್‌ (ಸಂಕೋಲೆ ಮುರಿಯಿರಿ ಅಭಿಯಾನ) ಕಾರ್ಯಕರ್ತರಾದ ನತಾಶಾ ನರ್ವಾಲ್‌ ಮತ್ತು ದೇವಾಂಗನಾ ಕಾಲಿತಾ ಹಾಗೂ ಇನ್ನೊಬ್ಬ ವಿದ್ಯಾರ್ಥಿ ಆಸಿಫ್‌ ಇಕ್ಬಾಲ್‌ ತನ್ಹಾ ಅವರಿಗೆ ದೆಹಲಿ ಹೈಕೋರ್ಟ್‌ನ ಪೀಠವು ಜಾಮೀನು ನೀಡಿದೆ.

ಸರ್ಕಾರ ಅಥವಾ ಸಂಸತ್ತಿನ ನಡೆಗಳ ಬಗ್ಗೆ ವ್ಯಾಪಕ ವಿರೋಧ ಇದ್ದಾಗ ಆಕ್ರೋಶಭರಿತ ಭಾಷಣಗಳು, ರಸ್ತೆ ತಡೆಯಂತಹ ಕೃತ್ಯಗಳು ಅಸಾಮಾನ್ಯ ಏನಲ್ಲ. ಸರ್ಕಾರ ಅಥವಾ ಸಂಸತ್ತಿನ ನಡವಳಿಕೆಯ ವಿರುದ್ಧ ಪ್ರತಿಭಟನೆ ನಡೆಸುವುದು ಕಾನೂನುಬಾಹಿರವೂ ಅಲ್ಲ. ಇಂತಹ ಪ್ರತಿಭಟನೆಗಳು ಶಾಂತಿಯುತವಾಗಿ, ಅಹಿಂಸಾತ್ಮಕವಾಗಿ ಇರಬೇಕು. ಆದರೆ, ಪ್ರತಿಭಟನಕಾರರು ಕಾನೂನಿನ ಮಿತಿಯನ್ನು ಮೀರುವುದೂ ಅಸಾಮಾನ್ಯ ಅಲ್ಲ ಎಂದು ನ್ಯಾಯಮೂರ್ತಿಗಳಾದ ಸಿದ್ಧಾರ್ಥ ಮೃದುಲ್‌ ಮತ್ತು ಅನೂಪ್‌ ಜೆ. ಭಂಭಾನಿ ಅವರ ಪೀಠವು ಹೇಳಿದೆ.

‘ಈಗಿನ ಪ್ರಕರಣದಲ್ಲಿ, ಆಕ್ರೋಶಭರಿತ ಭಾಷಣ ಮಾಡಲಾಗಿದೆ, ಮಹಿಳಾ ಪ್ರತಿಭಟನಕಾರರಿಗೆ
ಕುಮ್ಮಕ್ಕು ನೀಡಲಾಗಿದೆ ಎಂದು ವಾದಕ್ಕೆ ಒಪ್ಪಿಕೊಂಡು, ಸಂವಿಧಾನವು ನೀಡಿದ ಪ್ರತಿಭಟನೆಯ ಮಿತಿಯನ್ನು ಇದು ಮೀರಿದೆ ಎಂದು ಭಾವಿಸಿದರೂ ಇದನ್ನು ಕಾನೂನುಬಾಹಿರ ಕೃತ್ಯಗಳ ತಡೆ ಕಾಯ್ದೆಯಲ್ಲಿ ವಿವರಿಸಿರುವ ಭಯೋತ್ಪಾದನಾ ಕೃತ್ಯ ಅಥವಾ ಷಡ್ಯಂತ್ರ ಎಂದು ಪರಿಗಣಿಸಲು ಸಾಧ್ಯವಿಲ್ಲ’ ಎಂದು ಪೀಠವು ವಿವರಿಸಿದೆ.

ಆರೋಪಿಗಳ ಮೇಲೆ ಹೊರಿಸಲಾಗಿರುವ ಆರೋಪಗಳಿಗೂ ಆರೋಪಪಟ್ಟಿ ಮತ್ತು ಅದರ ಜತೆಗೆ ಇರಿಸಿದ್ದ ದಾಖಲೆಗಳಿಗೂ ಯಾವುದೇ ಸಂಬಂಧ ಇರುವುದು ಮೇಲ್ನೋಟಕ್ಕೆ ಕಾಣಿಸುತ್ತಿಲ್ಲ ಎಂದೂ ಪೀಠವು ಹೇಳಿದೆ.

ಭಿನ್ನಮತವನ್ನು ದಮನಿಸುವ ಕಾತರ ಮತ್ತು ಪರಿಸ್ಥಿತಿಯು ಕೈಮೀರಿ ಹೋಗಬಹುದು ಎಂಬ ಅನಾರೋಗ್ಯಕರ ಭೀತಿಯಿಂದಾಗಿ, ಸಂವಿಧಾನವು ಖಾತರಿಪಡಿಸಿರುವ ಪ್ರತಿಭಟನೆಯ ಹಕ್ಕು ಮತ್ತು ಭಯೋತ್ಪಾದನೆಯ ನಡುವಣ ರೇಖೆಯನ್ನು ಸರ್ಕಾರವು ಮಸುಕಾಗಿಸಿದೆ. ಈ ಮನಸ್ಥಿತಿಯೇ ಗಟ್ಟಿಗೊಂಡರೆ ಅದು ಪ್ರಜಾಪ್ರಭುತ್ವಕ್ಕೆ
ವಿಷಾದದ ದಿನ ಎಂದು ಹೇಳದೆ ವಿಧಿಯಿಲ್ಲ ಎಂದು ಪೀಠವು ಹೇಳಿದೆ.

ತನ್ಹಾ ಅವರು ಜಾಮಿಯಾ ಮಿಲಿಯಾ ಇಸ್ಲಾಮಿಯಾದ ವಿದ್ಯಾರ್ಥಿ. ನರ್ವಾಲ್‌ ಮತ್ತು ಕಾಲಿತಾ ಅವರು ದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ಪಿಎಚ್‌ಡಿ ವಿದ್ಯಾರ್ಥಿಗಳು.

ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭದಲ್ಲಿ 2020ರ ಫೆಬ್ರುವರಿಯಲ್ಲಿ ನಡೆದ ಕೋಮುಗಲಭೆಗೆ ಸಂಬಂಧಿಸಿ ಇವರನ್ನು ಬಂಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT