ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳಿ ಮಾತೆ ಕೈಯಲ್ಲಿ ಸಿಗರೇಟು: ವಿವಾದದ ಬಗ್ಗೆ ಭಯವಿಲ್ಲ ಎಂದ ನಿರ್ದೇಶಕಿ ಲೀನಾ

ಅನಿಸಿದ್ದನ್ನು ಹೇಳಲು ಪ್ರಾಣ ತೆರಲೂ ಸಿದ್ಧ ಎಂದ ಚಿತ್ರ ನಿರ್ದೇಶಕಿ
Last Updated 4 ಜುಲೈ 2022, 13:45 IST
ಅಕ್ಷರ ಗಾತ್ರ

ನವದೆಹಲಿ: ತಮ್ಮ ಸಾಕ್ಷ್ಯಚಿತ್ರದಲ್ಲಿ ಕಾಳಿ ಮಾತೆಯ ಕೈಯಲ್ಲಿ ಸಿಗರೇಟು ಮತ್ತು ಎಲ್‌ಜಿಬಿಟಿಕ್ಯು ಬಾವುಟ ಹಿಡಿದ ಪೋಸ್ಟರ್‌ನಿಂದಾಗಿ ವಿವಾದಕ್ಕೀಡಾಗಿರುವ ಚಿತ್ರ ನಿರ್ದೇಶಕಿ ಲೀನಾ ಮಣಿಮೇಕಲೈ ಅವರು ತಾವು ಬದುಕಿರುವವವರೆಗೂ ಯಾವುದೇ ಭಯವಿಲ್ಲದೇ ಧ್ವನಿ ಎತ್ತುವುದಾಗಿ ಸೋಮವಾರ ತಿಳಿಸಿದ್ದಾರೆ.

‘ಲೀನಾ ಮಣಿಮೇಕಲೈ ಬಂಧಿಸಿ’ ಹ್ಯಾಷ್‌ಟ್ಯಾಗ್ ಅಡಿಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟರ್ ವಿರುದ್ಧ ಅಭಿಯಾನ ನಡೆಯುತ್ತಿದ್ದು, ಚಿತ್ರ ನಿರ್ದೇಶಕಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ‘ಗೌ ಮಹಾಸಭಾ’ ಸಂಘಟನೆಯ ಸದಸ್ಯರೊಬ್ಬರು ಆರೋಪಿಸಿ ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ.

ತಮ್ಮ ವಿರುದ್ಧವಾದ ವ್ಯಕ್ತವಾಗಿರುವ ಆಕ್ರೋಶಗಳಿಗೆ ಟ್ವಿಟರ್‌ನಲ್ಲಿ ತಮಿಳಿನಲ್ಲಿ ಲೇಖನದ ಮೂಲಕ ಪ್ರತಿಕ್ರಿಯಿಸಿರುವ ಲೀನಾ, ‘ನನಗೆ ಕಳೆದುಕೊಳ್ಳಲು ಏನೂ ಇಲ್ಲ. ನಾನು ಬದುಕಿರುವವರೆಗೂ ನಾನು ನಂಬಿದ್ದನ್ನು ನಿರ್ಭೀತಿಯಿಂದ ಮಾತನಾಡಲು ಬಯಸುತ್ತೇನೆ. ಇದಕ್ಕಾಗಿ ನಾನು ನನ್ನ ಪ್ರಾಣವನ್ನು ತೆರಬೇಕಾಗಿ ಬಂದರೆ, ಅದಕ್ಕೂ ಸಿದ್ಧ’ ಎಂದು ಬರೆದುಕೊಂಡಿದ್ದಾರೆ.

ಮದುರೆಯಲ್ಲಿ ಹುಟ್ಟಿರುವ, ಟೊರೊಂಟೊ ಮೂಲದ ನಿರ್ದೇಶಕಿ ಲೀನಾ ಅವರು ಟ್ವಿಟರ್‌ನಲ್ಲಿ ಶನಿವಾರ ‘ಕಾಳಿ’ ಮಾತೆಯ ಚಿತ್ರ ಹಂಚಿಕೊಂಡಿದ್ದರು. ‘ಈ ಸಿನಿಮಾವು ಟೊರೊಂಟೊದಲ್ಲಿರುವ ಅಗಾ ಖಾನ್ ಮ್ಯೂಸಿಯಂನ ‘ರಿದಮ್ಸ್ ಆಫ್ ಕೆನಡಾ’ದ ಭಾಗವಾಗಿದೆ. ಪೋಸ್ಟರ್‌ನ ಹಿಂದಿರುವ ಉದ್ದೇಶಗಳನ್ನು ಅರ್ಥಮಾಡಿಕೊಳ್ಳಲು ಜನರು ಸಿನಿಮಾವನ್ನು ವೀಕ್ಷಿಸಬೇಕೆಂದು ಲೀನಾ ಒತ್ತಾಯಿಸಿದ್ದಾರೆ.

‘ಟೊರೊಂಟೊ ನಗರದಲ್ಲಿ ಒಂದು ಸಂಜೆ ವೇಳೆ ಕಾಳಿ ಮಾತೆಯು ಸುತ್ತಾಡುತ್ತಿರುವಾಗ ನಡೆದ ವಿದ್ಯಮಾನಗಳ ಕುರಿತ ಚಿತ್ರ ಇದಾಗಿದೆ. ಜನರು ಈ ಚಿತ್ರ ವೀಕ್ಷಿಸಿದಲ್ಲಿ ಅವರು ‘ಲೀನಾ ಮಣಿಮೇಕಲೈ ಬಂಧಿಸಿ’ ಎನ್ನುವ ಹ್ಯಾಷ್‌ಟ್ಯಾಗ್ ಬದಲು ‘ಲವ್ ಯೂ ಲೀನಾ ಮಣಿಮೇಕಲೈ’ ಎನ್ನುವ ಹ್ಯಾಷ್ ಟ್ಯಾಗ್ ಹಾಕುವರು ಎಂದೂ ಅವರು ಮತ್ತೊಂದು ಲೇಖನದಲ್ಲಿ ಪ್ರತಿಕ್ರಿಯಿಸಿದ್ದಾರೆ.

‘ಗೌ ಮಹಾಸಭಾ’ದ ಮತ್ತೊಬ್ಬ ಸದಸ್ಯ ಅಜಯ್ ಗೌತಮ್ ಅವರು ಲೀನಾ ಅವರ ವಿರುದ್ಧ ಪೊಲೀಸರಿಗೆ ಸಲ್ಲಿಸಿರುವ ದೂರಿನ ಪ್ರತಿಯನ್ನು ಸುದ್ದಿಗಾರರಿಗೆ ನೀಡಿದ್ದು, ‘ಚಿತ್ರ ನಿರ್ದೇಶಕಿ ಕಾಳಿ ಮಾತೆಯನ್ನು ಅವಹೇಳನಕಾರಿ ಮತ್ತು ಆಕ್ಷೇಪಾರ್ಹವಾಗಿ ಚಿತ್ರಿಸಿದ್ದಾರೆ. ಇದರಿಂದಾಗಿ ಲಕ್ಷಾಂತರ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ’ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

‘ಇದುವರೆಗೆ ಯಾವುದೇ ದೂರನ್ನು ಸ್ವೀಕರಿಸಿಲ್ಲ’ ಎಂದು ಸೈಬರ್ ಸೆಲ್ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

‘ಕಾಳಿ ಮಾತೆಯು ಸಿಗರೇಟ್‌ ಸೇದುತ್ತಿರುವ ಚಿತ್ರವು ಆಕ್ಷೇಪಾರ್ಹವಾಗಿದ್ದು, ಮುಜುಗರವುಂಟು ಮಾಡುತ್ತದೆ. ಚಿತ್ರದ ನಿರ್ದೇಶಕಿ ಲೀನಾ ಮಣಿಮೇಕಲೈ ಅವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ದೆಹಲಿ ಪೊಲೀಸರಿಗೆ ಹಿಂದೂ ಸೇನೆಯು ಒತ್ತಾಯಿಸುತ್ತದೆ’ ಎಂದು ಹಿಂದೂ ಸೇನೆಯ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಗುಪ್ತಾ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT