ಗುರುವಾರ , ಮಾರ್ಚ್ 30, 2023
24 °C
ಕೋವಿಡ್ ಕಾರಣಕ್ಕಾಗಿ ಎರಡನೇ ವರ್ಷವೂ ಕಳೆಗುಂದಿದ ಆಚರಣೆ

ಕೋಲ್ಕತ್ತ: ದುರ್ಗಾಪೂಜೆ ಆಚರಣೆಗೆ ಸರಳ ಸಿದ್ಧತೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ದುರ್ಗಾಪೂಜೆ ಆಚರಣೆಗೆ ಇನ್ನೂ ಮೂರು ತಿಂಗಳು ಬಾಕಿ ಇರುವಾಗಲೇ ಪಶ್ಚಿಮ ಬಂಗಾಳದಲ್ಲಿ ಐದು ದಿನಗಳ ಹಬ್ಬಕ್ಕಾಗಿ ಈಗಿನಿಂದಲೇ ಸರಳವಾಗಿ ಸಿದ್ಧತೆ ಆರಂಭವಾಗಿದೆ.

ಕಳೆದ ವರ್ಷ ಕೋವಿಡ್ ಮೊದಲ ಅಲೆಯಲ್ಲಿ ವೈಭವವಾಗಿ ದುರ್ಗಾಪೂಜೆ ನಡೆದಿರಲಿಲ್ಲ. ಈ ಸಲವೂ ಕೋವಿಡ್ ಎರಡನೇ ಅಲೆ ಇರುವುದರಿಂದ, ಇದನ್ನು ಗಮನದಲ್ಲಿಟ್ಟುಕೊಂಡಿರುವ ಸಂಘಟಕರು ಮುನ್ನೆಚ್ಚರಿಕೆ ಕ್ರಮ ವಹಿಸಿ, ಸರಳ ಆಚರಣೆಗೆ ಸಿದ್ಧತೆಯಲ್ಲಿ ತೊಡಗಿದ್ದಾರೆ. 

ದುರ್ಗಾಪೂಜೆಯ ಆಚರಣೆಗೆ ಕ್ಷಣಗಣನೆ ಶುರುವಾಗಿದೆ ಎಂದು ತಿಳಿಸಲು ಸಲುವಾಗಿ 500 ಸಮುದಾಯ ದುರ್ಗಾಪೂಜೆಗಳ ವೇದಿಕೆಯಾದ ‘ಫೋರಂ ಫಾರ್ ದುರ್ಗೋತ್ಸವ್’ ಭಾನುವಾರ ಫೇಸ್‌ಬುಕ್ ಪುಟವನ್ನು ಆರಂಭಿಸಿದೆ. ಈ ವರ್ಷದ ದುರ್ಗಾಪೂಜೆ ಸಂಭ್ರಮಾಚರಣೆಗೆ ಅಳವಡಿಸಿಕೊಳ್ಳಬೇಕಾದ ಮಾನದಂಡಗಳ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ವೇದಿಕೆ ತಿಳಿಸಿದೆ. 

ಈ ನಡುವೆ ಸಾರಿಗೆ ಮತ್ತು ವಸತಿ ಸಚಿವ ಫಿರ್ಹಾದ್ ಹಕೀಂ ಅವರು, ‘ದೊಡ್ಡಮಟ್ಟದಲ್ಲಿ ದುರ್ಗಾಪೂಜೆ ಆಚರಣೆಗೆ ಇದು ಸೂಕ್ತ ಸಮಯವಲ್ಲ. ಈ ಬಾರಿ ಚಿಕ್ಕ ವಿಗ್ರಹವನ್ನು ತಯಾರಿಸಲು ಸೂಚಿಸಿದ್ದೇವೆ’ ಎಂದು ಹೇಳಿದ್ದಾರೆ.

ಸಚಿವ ಹಕೀಂ ಅವರ ಮಾತಿಗೆ ಸಹಮತ ವ್ಯಕ್ತಪಡಿಸಿರುವ ಮತ್ತೊಬ್ಬ ಸಚಿವ ಸುಬ್ರತಾ ಮುಖರ್ಜಿ, ‘ಈ ಬಾರಿ ಸಾಂಕ್ರಾಮಿಕ ರೋಗದ ಕಾರಣಕ್ಕಾಗಿ ದೊಡ್ಡ ವಿಗ್ರಹದ ಬದಲು ಸಣ್ಣ ವಿಗ್ರಹ ಇಡಲಾಗುವುದು. ಅದ್ದೂರಿ ಆಚರಣೆಗಿಂತ ಸರಳ ಆಚರಣೆಗೆ ಒತ್ತು ನೀಡಲಾಗುವುದು’ ಎಂದು ಹೇಳಿದ್ದಾರೆ.

‘ಕೋವಿಡ್ ಎರಡನೇ ಅಲೆಯಲ್ಲಿ ಅನೇಕರು ತಮ್ಮ ಆತ್ಮೀಯರನ್ನು ಕಳೆದುಕೊಂಡಿದ್ದಾರೆ. ಇದು ಆಡಂಬರ ಮತ್ತು ಅದ್ದೂರಿ ಆಚರಣೆಯ ಸಮಯವಲ್ಲ. ಉತ್ತಮ ದಿನಗಳಿಗಾಗಿ ನಾವು ಕಾಯೋಣ. ಈ ಬಾರಿ ದುರ್ಗೋತ್ಸವದ ವಿಷಯ ಮಾನವೀಯತೆಗೆ ಸಂಬಂಧಿಸಿದ್ದಾಗಿದೆ’ ಎಂದು ಭವಾನಿಪೋರ್‌ 75 ಪಲ್ಲಿಯ ದುರ್ಗೋತ್ಸವ ಆಚರಣೆ ಸಮಿತಿಯ ಕಾರ್ಯದರ್ಶಿ ಸುಬೀರ್ ದಾಸ್ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು