ಬುಧವಾರ, ಅಕ್ಟೋಬರ್ 28, 2020
20 °C
₹1,000 ಕೋಟಿ ಹವಾಲ ದಂಧೆ ಆರೋಪ ಎದುರಿಸುತ್ತಿರುವ ಚಾರ್ಲಿ ಪೆಂಗ್‌

ಚೀನಾ ಪ್ರಜೆ ವಿರುದ್ಧ ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿದ ಇ.ಡಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಹವಾಲ ದಂಧೆ ನಡೆಸುತ್ತಿರುವ ಆರೋಪದಡಿ ಬಂಧನಕ್ಕೆ ಒಳಗಾಗಿರುವ ಚೀನಾ ಮೂಲದ ಪ್ರಜೆ ಚಾರ್ಲಿ ಪೆಂಗ್‌ ವಿರುದ್ಧ ಜಾರಿ ನಿರ್ದೇಶನಾಲಯ(ಇ.ಡಿ) ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. 

ದಂಧೆಯ ಮುಖ್ಯ ಆರೋಪಿ ಆಗಿರುವ ಚಾರ್ಲಿ ವಿರುದ್ಧ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ(ಪಿಎಂಎಲ್‌ಎ)  ವಿವಿಧ ಸೆಕ್ಷನ್‌ಗಳಡಿ ಇ.ಡಿ ಪ್ರಕರಣ ದಾಖಲಿಸಿದೆ. ಚಾರ್ಲಿ ಹಾಗೂ ಸಹಚರರಿಗೆ ಸೇರಿದ್ದ 24ಕ್ಕೂ ಅಧಿಕ ಆಸ್ತಿಗಳ ಮೇಲೆ ಆಗಸ್ಟ್‌ 12ರಂದು ಆದಾಯ ತೆರಿಗೆ(ಐ.ಟಿ) ಇಲಾಖೆ ಅನಿರೀಕ್ಷಿತ ದಾಳಿ ನಡೆಸಿದ್ದರು. ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸುವ ಮೊದಲು ಐಟಿ ಇಲಾಖೆ ಸಂಗ್ರಹಿಸಿರುವ ಸಾಕ್ಷ್ಯಗಳು ಹಾಗೂ ದೆಹಲಿ ವಿಶೇಷ ಪೊಲೀಸರ ಘಟಕ ದಾಖಲಿಸಿರುವ ಎಫ್‌ಐಆರ್ ಅನ್ನು ಇ.ಡಿ ಪರಿಶೀಲಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. 

‘ಚಾರ್ಲಿ ಭಾರತದ ನಕಲಿ ಪಾಸ್‌ಪೋರ್ಟ್‌ ಹೊಂದಿದ್ದು, ಭಾರತ ಮತ್ತು ಚೀನಾ ನಡುವೆ ಹವಾಲ ದಂಧೆ ನಡೆಸಲು ಕಳೆದ ಎರಡು–ಮೂರು ವರ್ಷಗಳಲ್ಲಿ ಹಲವು ನಕಲಿ ಕಂಪನಿಗಳನ್ನು ಸೃಷ್ಟಿಸಿದ್ದನು. ಪ್ರಮುಖವಾಗಿ ವೈದ್ಯಕೀಯ ಮತ್ತು ಎಲೆಕ್ಟ್ರಾನಿಕ್‌ ವಸ್ತುಗಳ ಆಮದು ಮತ್ತು ರಫ್ತು ಹೆಸರಿನಲ್ಲಿ ಈತ ಉದ್ಯಮ ನಡೆಸುತ್ತಿದ್ದನು. ವಂಚನೆ ಪ್ರಕರಣದಲ್ಲಿ 2018 ಸೆಪ್ಟೆಂಬರ್‌ನಲ್ಲಿ ದೆಹಲಿ ಪೊಲೀಸ್‌ ವಿಶೇಷ ಘಟಕ ಆತನನ್ನು ಬಂಧಿಸಿತ್ತು. ಮಣಿಪುರ ಮೂಲದ ಮಹಿಳೆಯನ್ನು ಮದುವೆಯಾಗಿದ್ದ ಚಾರ್ಲಿ ಅಲ್ಲಿಯೇ ನಕಲಿ ಪಾಸ್‌ಪೋರ್ಟ್‌ ಪಡೆದಿದ್ದನು. ದಾಳಿ ವೇಳೆ ನಕಲಿ ಆಧಾರ್‌ ಕಾರ್ಡ್‌ಗಳೂ ದೊರೆತಿದ್ದವು’ ಎಂದು ಮೂಲಗಳು ತಿಳಿಸಿವೆ. 

ಪ್ರಸ್ತುತ ಆದಾಯ ತೆರಿಗೆ ಇಲಾಖೆ ಚಾರ್ಲಯನ್ನು ಕಸ್ಟಡಿಗೆ ಪಡೆದಿದ್ದು ವಿಚಾರಣೆ ನಡೆಸುತ್ತಿದೆ. ಚಾರ್ಲಿ ಸೃಷ್ಟಿಸಿರುವ ನಕಲಿ ಕಂಪನಿ ಜೊತೆ ಸಂಬಂಧ ಇರುವ 12ಕ್ಕೂ ಅಧಿಕ ಬ್ಯಾಂಕ್‌ ಖಾತೆಗಳನ್ನೂ ಐ.ಟಿ ಇಲಾಖೆ ಪರಿಶೀಲನೆ ನಡೆಸುತ್ತಿದ್ದು, ಹಲವು ಖಾತೆಗಳಿಗೆ ನೋಟಿಸ್‌ ನೀಡಿದೆ. ದೆಹಲಿಯಲ್ಲಿದ್ದುಕೊಂಡು ತನ್ನ ಕೆಲಸ ಮಾಡುತ್ತಿದ್ದ ಟಿಬೆಟ್‌ ಮೂಲದ ಪ್ರಜೆಗಳಿಗೆ ಚಾರ್ಲಿ ಲಂಚ ನೀಡುತ್ತಿದ್ದನೇ ಎನ್ನುವುದನ್ನೂ ಐ.ಟಿ ಹಾಗೂ ಇ.ಡಿ ತನಿಖೆ ನಡೆಸುತ್ತಿದೆ. 

‘ಕೆಲ ಚೀನಾ ಮೂಲದ ಪ್ರಜೆಗಳು ಹಾಗೂ ಭಾರತದಲ್ಲಿ ಇರುವ ಅವರ ಸಹವರ್ತಿಗಳು ಹಣ ಅಕ್ರಮ ವರ್ಗಾವಣೆ ಮಾಡುತ್ತಿದ್ದಾರೆ ಹಾಗೂ ನಕಲಿ ಕಂಪನಿಗಳ ಮುಖಾಂತರ ಹವಾಲ ದಂಧೆ ನಡೆಸುತ್ತಿದ್ದಾರೆ ಎನ್ನುವ ಖಚಿತ ಮಾಹಿತಿಯಿದ್ದ ಕಾರಣ ದಾಳಿ ನಡೆಸಲಾಯಿತು’ ಎಂದು ಕಳೆದ ವಾರ ಆದಾಯ ತೆರಿಗೆ ಇಲಾಖೆ ತಿಳಿಸಿತ್ತು. 

‘ಚೀನಾ ಕಂಪನಿಗೆ ಅಧೀನದಲ್ಲಿ ಇರುವ ಕಂಪನಿಯೊಂದು ಭಾರತದಲ್ಲಿ ಉದ್ಯಮ ಆರಂಭಿಸಲು ಶೆಲ್‌ ಕಂಪನಿಗಳಿಂದ(ಕೇವಲ ಹೆಸರು ಮಾತ್ರಕ್ಕೆ ಇರುವ ಕಂಪನಿ)₹100 ಕೋಟಿ ಅಕ್ರಮ ಸಾಲ ಪಡೆದಿತ್ತು. ತನಿಖೆ ಸಂದರ್ಭದಲ್ಲಿ ಚೀನಾ ಮೂಲದ ಪ್ರಜೆಗಳ ಪರವಾಗಿ ನಕಲಿ ಕಂಪನಿಗಳಲ್ಲಿ 40ಕ್ಕೂ ಅಧಿಕ ಬ್ಯಾಂಕ್‌ ಖಾತೆಗಳನ್ನು ತೆರೆದು, ₹1000 ಕೋಟಿಗೂ ಅಧಿಕ ಸಾಲ ಪಡೆದಿರುವುದು ಹಾಗೂ ಹವಾಲ ದಂಧೆಗೆ ಸಂಬಂಧಿಸಿದ ದಾಖಲೆಗಳು ಮತ್ತು ಬ್ಯಾಂಕ್‌ ಸಿಬ್ಬಂದಿಯೂ ಇದಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ’ ಎಂದು ಇಲಾಖೆ ತಿಳಿಸಿತ್ತು.        ‌       

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು