ಸೋಮವಾರ, ಮೇ 17, 2021
25 °C

ಉಗ್ರರು-ಭದ್ರತಾ ಸಿಬ್ಬಂದಿ ನಡುವಿನ ಚಕಮಕಿ ನೇರಪ್ರಸಾರ ನಿಷೇಧ: ಸಂಪಾದಕರ ಕೂಟ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಉಗ್ರರು ಮತ್ತು ಭದ್ರತಾ ಸಿಬ್ಬಂದಿ ಮಧ್ಯೆ ನಡೆಯುವ ಚಕಮಕಿಯ ನೇರ ಪ್ರಸಾರ ಮಾಡುವುದನ್ನು ನಿಷೇಧಿಸಿ ಕಾಶ್ಮೀರ ಪೊಲೀಸರು ಮಾಧ್ಯಮಗಳಿಗೆ ನೀಡಿರುವ ನಿರ್ದೇಶನವನ್ನು ಹಿಂದೆಗೆದುಕೊಳ್ಳಬೇಕು’ ಎಂದು ಭಾರತೀಯ ಸಂಪಾದಕರ ಕೂಟವು ಒತ್ತಾಯಿಸಿದೆ.

‘ಚಕಮಕಿಯ ನೇರ ವರದಿಗಳಿಂದ ಹಿಂಸಾಚಾರಕ್ಕೆ ಪ್ರಚೋದನೆ ಲಭಿಸುವ ಅಥವಾ ರಾಷ್ಟ್ರವಿರೋಧಿ ಶಕ್ತಿಗಳಿಗೆ ಉತ್ತೇಜನ ಉಂಟಾಗುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳುತ್ತಾರೆ. ಹಿಂಸಾಚಾರವನ್ನು ನಿಯಂತ್ರಿಸುವ ಮೂಲಕ ಶಾಂತಿ ಸ್ಥಾಪನೆಯ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂಬ ಭಾವನೆಯನ್ನು ಇಂಥ
ಹೇಳಿಕೆಗಳ ಮೂಲಕ ಪೊಲೀಸರು ಮೂಡಿಸಿದ್ದಾರೆ. ಆದರೆ ವಾಸ್ತವದಲ್ಲಿ, ಹಿಂಸಾಚಾರದ ಹಿಂದಿನ ಘಟನಾವಳಿಗಳ ಬಗ್ಗೆ ಮಾಧ್ಯಮಗಳು ಪರಿಶೀಲನೆ ನಡೆಸುವುದನ್ನು ಭದ್ರತಾಪಡೆಗಳು ತಡೆಯುತ್ತಿವೆ’ ಎಂದು ಕೂಟ ಹೇಳಿದೆ.

‘ಉಗ್ರರು ಮತ್ತು ಭದ್ರತಾ ಪಡೆಗಳ ನಡುವಿನ ಚಕಮಕಿಯೂ ಸೇರಿದಂತೆ, ಸಂಘರ್ಷ ನಡೆಯುವ ಸ್ಥಳದಿಂದಲೇ ಸುದ್ದಿಯ ನೇರ ಪ್ರಸಾರ ಮಾಡುವುದು ಯಾವುದೇ ಜವಾಬ್ದಾರಿಯುತ ಮಾಧ್ಯಮದ ಅತಿ ಮುಖ್ಯ ಹೊಣೆಯಾಗಿದೆ. ಇದಕ್ಕೆ ವರದಿಗಾರರಲ್ಲಿ ಸಾಕಷ್ಟು ಧೈರ್ಯ ಹಾಗೂ ಬದ್ಧತೆಗಳು ಬೇಕಾಗುತ್ತವೆ. ಇದನ್ನು ನಿಷೇಧಿಸುವ ಬದಲು, ಭದ್ರತಾಪಡೆಗಳ ತಂತ್ರಗಾರಿಕೆ, ಯೋಜನೆಗಳನ್ನು ಬಹಿರಂಗಪಡಿಸದಿರುವುದು, ಪತ್ರಕರ್ತರ ಮಧ್ಯಪ್ರವೇಶವನ್ನು ತಡೆಯುವುದು, ಸುದ್ದಿಯ ಮೂಲಕ ವೀಕ್ಷಕರ ಭಾವನೆ ಕಲಕುವುದಕ್ಕೆ ತಡೆ ಮುಂತಾದ ವಿಚಾರದಲ್ಲಿ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವುದು ಸೂಕ್ತ. ಜವಾಬ್ದಾರಿಯುತ ಸರ್ಕಾರಗಳು ಇಂಥ ಕ್ರಮಗಳನ್ನು ಅನುಸರಿಸುತ್ತಿವೆ. ಕಾಶ್ಮೀರ ಪೊಲೀಸರು ನೀಡಿರುವ ನಿರ್ದೇಶನವು ಪ್ರಜಾಪ್ರಭುತ್ವ ವಿರೋಧಿಯಾಗಿವೆ. ಆದ್ದರಿಂದ ಅದನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು’ ಎಂದು ಕೂಟದ ಅಧ್ಯಕ್ಷರಾದ ಸೀಮಾ ಮುಸ್ತಫಾ, ಕಾರ್ಯದರ್ಶಿ ಸಂಜಯ್‌ ಕಪೂರ್‌ ಹಾಗೂ ಖಜಾಂಚಿ ಅನಂತನಾಥ್‌ ಒತ್ತಾಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು