ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಪಟ್ಟಿ ಪರಿಷ್ಕರಣೆ: 4 ಅರ್ಹತಾ ದಿನಾಂಕ ನಿಗದಿಗೆ ಚುನಾವಣಾ ಆಯೋಗ ಚಿಂತನೆ

Last Updated 12 ಡಿಸೆಂಬರ್ 2021, 13:44 IST
ಅಕ್ಷರ ಗಾತ್ರ

ನವದೆಹಲಿ: ಜನಪ್ರತಿನಿಧಿಗಳ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಮತದಾರರ ಪಟ್ಟಿಗೆ ಹೆಸರು ನೋಂದಣಿಗೆ ವಾರ್ಷಿಕ ನಾಲ್ಕು ಪ್ರತ್ಯೇಕ ಅರ್ಹತಾ ದಿನಾಂಕ ನಿಗದಿಪಡಿಸಲು ಕೇಂದ್ರ ಚುನಾವಣಾ ಆಯೋಗ ಚಿಂತನೆ ನಡೆಸಿದೆ.

ಈ ಕ್ರಮವು ಭವಿಷ್ಯದಲ್ಲಿ ಲೋಕಸಭೆ, ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಏಕರೂಪದ ಮತದಾರರ ಪಟ್ಟಿ ಹೊಂದಲು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಹಕಾರಿಯಾಗಲಿದೆ ಎಂದು ಹೇಳಲಾಗಿದೆ.

ಹಾಲಿ ನಿಯಮದ ಅನುಸಾರ, ನಿರ್ದಿಷ್ಟ ವರ್ಷ ನಡೆಯುವ ಚುನಾವಣೆಗೆ ಮತದಾನದ ಹಕ್ಕು ಪಡೆಯಲು ಆ ವರ್ಷ ಅಥವಾ ಅದಕ್ಕೂ ಮೊದಲು 18 ವರ್ಷ ವಯಸ್ಸು ಪೂರ್ಣವಾದವರಷ್ಟೇ ಹೆಸರು ನೋಂದಣಿಗೆ ಅವಕಾಶವಿದೆ. ಸದ್ಯ, ಜನವರಿ 1 ಅನ್ನು ಅರ್ಹತಾ ದಿನವಾಗಿ ಪರಿಗಣಿಸಲಾಗುತ್ತದೆ. ಇದರ ಪ್ರಕಾರ, ಜನವರಿ 2ರಂದು 18 ವರ್ಷ ಪೂರ್ಣವಾಗುವವರು ಆ ವರ್ಷ ಮತದಾರ ಪಟ್ಟಿಗೆ ಹೆಸರು ನೋಂದಾಯಿಸಲು ಅವಕಾಶ ಇರುವುದಿಲ್ಲ.

ಹೀಗಾಗಿ, ಹೆಚ್ಚಿನ ಯುವಜನರು ಹೆಸರು ನೋಂದಣಿ ಮಾಡಿಸಲು ಅವಕಾಶ ಇರುವಂತೆ ಕಾಯ್ದೆಗೆ ತಿದ್ದುಪಡಿ ತಂದು ಮತದಾರರ ಪಟ್ಟಿಗೆ ಹೆಸರು ನೋಂದಣಿಗೆ ಅರ್ಹತಾ ದಿನವಾಗಿ ಜನವರಿ 1, ಏಪ್ರಿಲ್‌ 1, ಜುಲೈ 1 ಮತ್ತು ಅಕ್ಟೋಬರ್ 1 ಅನ್ನು ನಿಗದಿಪಡಿಸಬಹುದು ಎಂದು ಕಾನೂನು ಸಚಿವಾಲಯ ಸಂಸದೀಯ ಸಮಿತಿಗೆ ತಿಳಿಸಿದೆ.

ನಾಲ್ಕು ಅರ್ಹತಾ ದಿನಾಂಕ ಹೊಂದುವುದು ಒಳಗೊಂಡಂತೆ ಸಮಗ್ರ ಸುಧಾರಣೆ ಕ್ರಮಗಳನ್ನು ಸಂಪುಟದ ಮುಂದಿಡಲು ಕರಡು ಪ್ರತಿಯನ್ನು ಚುನಾವಣಾ ಆಯೋಗವು ಸಿದ್ಧಪಡಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಕಾನೂನು ಸಚಿವಾಲಯದ ಬೇಡಿಕೆ ಮತ್ತು ಅನುದಾನ ಕುರಿತ 107ನೇ ವರದಿ ಮೇಲೆ ಕೈಗೊಂಡ ಕ್ರಮಗಳಿಗೆ ಸಂಬಂಧಿತ ವರದಿಯನ್ನು ಸಂಸದೀಯ ಸ್ಥಾಯಿ ಸಮಿತಿಯು ಶುಕ್ರವಾರ ಮಂಡಿಸಿತು.

ಚುನಾವಣಾ ಆಯೋಗದ ಮಾಹಿತಿ ಅನುಸಾರ, ಪ್ರಸ್ತುತ 25 ರಾಜ್ಯಗಳು ಮತ್ತು ಎಂಟು ಕೇಂದ್ರಾಡಳಿತ ಪ್ರದೇಶಗಳು, ಸ್ಥಳೀಯ ಸಂಸ್ಥೆಗಳ ಚುನಾವಣೆಗಾಗಿ ಮತಪಟ್ಟಿಯನ್ನು ಸಿದ್ಧಪಡಿಸಲು ಅಯೋಗ ರೂಪಿಸಿದ ಮತಪಟ್ಟಿಯನ್ನೇ ಆಧಾರವಾಗಿ ಬಳಸಲಿವೆ. ಹೆಸರು ಸೇರ್ಪಡೆಗೆ ಜನವರಿ 1 ಅರ್ಹತಾ ದಿನವಾಗಿ ಪರಿಗಣಿಸುವ ಕಾರಣ ಕೆಲವು ರಾಜ್ಯಗಳು ಆಯೋಗದ ಪಟ್ಟಿ ಬಳಸಲು ಒಪ್ಪುವುದಿಲ್ಲ. ಇದೇ ಕಾರಣದಿಂದ ಮತಪಟ್ಟಿ ಪರಿಷ್ಕರಣೆ, ಹೆಸರು ಸೇರ್ಪಡೆಗೆ ನಾಲ್ಕು ಪ್ರತ್ಯೇಕ ಅರ್ಹತಾದಿನವನ್ನು ಹೊಂದುವುದು ಒಳಿತು ಎಂದು ಸಲಹೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT