ಭಾನುವಾರ, ಆಗಸ್ಟ್ 14, 2022
26 °C

ಎಲ್ಗಾರ್‌ ಪರಿಷತ್‌ ಪ್ರಕರಣ: ಸ್ಟ್ಯಾನ್‌ ಸ್ವಾಮಿ ಜಾಮೀನು ಅರ್ಜಿಗೆ ಎನ್‌ಐಎ ವಿರೋಧ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಬುಡಕಟ್ಟು ಸಮುದಾಯದ ಹೋರಾಟಗಾರ ಫಾದರ್‌ ಸ್ಟ್ಯಾನ್‌ ಸ್ವಾಮಿ ಅವರು ಜಾಮೀನು ಕೋರಿ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಇದಕ್ಕೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಸೋಮವಾರ ವಿರೋಧ ವ್ಯಕ್ತಪಡಿಸಿದೆ.

ಎಲ್ಗಾರ್‌ ಪರಿಷತ್‌ ಪ‍್ರಕರಣಕ್ಕೆ ಸಂಬಂಧಿಸಿದಂತೆ ಸ್ವಾಮಿ ಅವರನ್ನು ಅಕ್ಟೋಬರ್‌ 8ರಂದು ರಾಂಚಿಯ ಅವರ ನಿವಾಸದಲ್ಲಿ ಬಂಧಿಸಲಾಗಿತ್ತು. ಬಳಿಕ ಅವರನ್ನು ತಲೋಜಾ ಜೈಲಿನಲ್ಲಿಡಲಾಗಿತ್ತು.

‘ತಾವು ಪಾರ್ಕಿನ್‌ಸನ್‌ ಕಾಯಿಲೆಯಿಂದ ಬಳಲುತ್ತಿರುವುದರಿಂದ ಆರೋಗ್ಯದಲ್ಲಿ ಏರುಪೇರಾಗುತ್ತಿದೆ. ಇದಕ್ಕೆ ಸೂಕ್ತ ಚಿಕಿತ್ಸೆ ಪಡೆಯಬೇಕಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಜಾಮೀನು ಮಂಜೂರು ಮಾಡಿ’ ಎಂದು ಸ್ವಾಮಿ ಅವರು ಇತ್ತೀಚೆಗೆ ಮನವಿ ಮಾಡಿದ್ದರು.

ಈ ಸಂಬಂಧ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಪ್ರಕಾಶ್‌ ಶೆಟ್ಟಿ ಅವರ ಮೂಲಕ ನ್ಯಾಯಾಲಯಕ್ಕೆ ಅಫಿಡವಿಟ್‌ ಸಲ್ಲಿಸಿರುವ ಎನ್‌ಐಎ, 83 ವರ್ಷ ವಯಸ್ಸಿನ ಸ್ವಾಮಿ ಅವರ ಮೇಲಿನ ಆರೋಪ ಸಾಬೀತುಪಡಿಸಲು ಅಗತ್ಯವಿರುವ ಎಲ್ಲಾ ಸಾಕ್ಷಾಧಾರಗಳೂ ನಮ್ಮ ಬಳಿ ಇವೆ. ಸ್ವಾಮಿ ಅವರಿಂದ ವಶಪಡಿಸಿಕೊಂಡಿರುವ ಕಂಪ್ಯೂಟರ್‌ ನೆರವಿನಿಂದ ಅವರ ಇ ಮೇಲ್‌ಗಳನ್ನು ಪರಿಶೀಲಿಸಲಾಗುತ್ತಿದೆ. ಹೀಗಾಗಿ ಅವರಿಗೆ ಜಾಮೀನು ಮಂಜೂರು ಮಾಡಬಾರದು ಎಂದು ಕೇಳಿಕೊಂಡಿದೆ.

ಎನ್‌ಐಎ ವಿಶೇಷ ನ್ಯಾಯಾಲಯವು ಇದೇ 21ರಂದು ಸ್ವಾಮಿ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಲಿದೆ. ಬಂಧನದ ವೇಳೆ ತಮ್ಮಿಂದ ವಶಪಡಿಸಿಕೊಂಡಿರುವ ಬ್ಯಾಗ್ ಹಾಗೂ ಹಾರ್ಡ್‌ ಡಿಸ್ಕ್‌ನ ಕ್ಲೋನ್‌ ಕಾಪಿಯನ್ನು ಹಿಂತಿರುಗಿಸುವಂತೆ ಹಾಗೂ ತಲೋಜಾ ಜೈಲಿನಿಂದ ಬೇರೆಡೆಗೆ ಸ್ಥಳಾಂತರಿಸದಂತೆ ಎನ್‌ಐಎ ಅಧಿಕಾರಿಗಳಿಗೆ ನಿರ್ದೇಶಿಸಬೇಕೆಂದು ಕೋರಿ ಸ್ವಾಮಿ ಅವರು ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳ ವಿಚಾರಣೆಯೂ ಅಂದೇ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು