ಸೋಮವಾರ, ಮೇ 23, 2022
22 °C

ಶ್ರೀನಗರಕ್ಕೆ 24 ದೇಶಗಳ ರಾಜತಾಂತ್ರಿಕ ಅಧಿಕಾರಿಗಳ ಭೇಟಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿನ ವಿಶೇಷ ಸ್ಥಾನಮಾನವನ್ನು 2019ರಲ್ಲಿ ರದ್ದುಪಡಿಸಿದ ನಂತರ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಲು ಫ್ರಾನ್ಸ್‌, ಯುರೋಪ್‌ ಒಕ್ಕೂಟ ಹಾಗೂ ಮಲೇಷ್ಯಾ ಸೇರಿದಂತೆ 24 ದೇಶಗಳ ರಾಜತಾಂತ್ರಿಕ ಅಧಿಕಾರಿಗಳು ಬುಧವಾರ ಕಣಿವೆ ರಾಜ್ಯಕ್ಕೆ ಬಂದಿಳಿದಿದ್ದಾರೆ.

ಎರಡು ದಿನಗಳ ಭೇಟಿಗಾಗಿ ಆಗಮಿಸಿರುವ ನಿಯೋಗದಲ್ಲಿ ಬ್ರೆಜಿಲ್, ಇಟಲಿ, ಫಿನ್ಲೆಂಡ್, ಬಾಂಗ್ಲಾದೇಶ, ಕ್ಯೂಬಾ, ಚಿಲಿ, ಪೋರ್ಚುಗಲ್, ನೆದರ್ಲೆಂಡ್ಸ್, ಬೆಲ್ಜಿಯಂ, ಸ್ಪೇನ್, ಸ್ವೀಡನ್, ಸೆನೆಗಲ್, ತಜಿಕಿಸ್ತಾನ್, ಕಿರ್ಗಿಸ್ತಾನ್, ಐರ್ಲೆಂಡ್, ಘಾನಾ, ಎಸ್ಟೋನಿಯಾ, ಬೊಲಿವಿಯಾ, ಮಾಲವಿ, ಎರಿಟ್ರಿಯಾ, ಐವರಿ ಕೋಸ್ಟ್‌ ರಾಷ್ಟ್ರಗಳ ರಾಜತಾಂತ್ರಿಕರು ಇದ್ದಾರೆ.

ನಿಯೋಗವನ್ನು ಬರಮಾಡಿಕೊಂಡ ಅಧಿಕಾರಿಗಳು, ಕಾಶ್ಮೀರದ ಕೇಂದ್ರಭಾಗ ಬುಡ್ಗಾಂನಲ್ಲಿರುವ ಸರ್ಕಾರಿ ಕಾಲೇಜಿಗೆ ಕರೆದೊಯ್ದರು. ಅಲ್ಲಿ ಪಂಚಾಯತ್ ರಾಜ್‌ ವ್ಯವಸ್ಥೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಬಲವರ್ಧನೆಯ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು.

ನಿಯೋಗದ ಸದಸ್ಯರು ಪಂಚರು ಮತ್ತು ಸರಪಂಚರ ಜತೆಗೆ ಕಣಿವೆಯಲ್ಲಿ ಮುಕ್ತವಾಗಿ ಪ್ರಯಾಣಿಸುತ್ತಾ, ಅವರ ಕುಂದುಕೊರತೆಗಳನ್ನು ಆಲಿಸಿದರು.

ಗುರುವಾರ ಜಮ್ಮುವಿಗೆ ಭೇಟಿ ನೀಡಿರಲಿರುವ ನಿಯೋಗದ ಸದಸ್ಯರು, ಅಲ್ಲಿ ಕೇಂದ್ರಾಡಳಿತ ಅಧಿಕಾರಿಗಳನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಜಿಲ್ಲಾ ಅಭಿವೃದ್ಧಿ ಮಂಡಳಿ ಸದಸ್ಯರು ಮತ್ತು ನಾಗರಿಕ ಸಮಾಜದ ಪ್ರತಿನಿಧಿಗಳನ್ನೂ ಭೇಟಿ ಮಾಡಲು ನಿರ್ಧರಿಸಿದ್ದಾರೆ.

ಅಲ್ಲದೇ, ದಾಲ್ ಸರೋವರದ ದಂಡೆಯಲ್ಲಿರುವ ಪವಿತ್ರ ಹಜರತ್ಬಲ್ ಮಂದಿರಕ್ಕೂ ಭೇಟಿ ನೀಡಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಈ ಭೇಟಿ ಹಿನ್ನೆಲೆಯಲ್ಲಿ ಶ್ರೀನಗರ ಸೇರಿದಂತೆ ಕಣಿವೆಯ ಹಲವಡೆ ಬಿಗಿ ಭದ್ರತೆಯ ವ್ಯವಸ್ಥೆ ಮಾಡಲಾಗಿತ್ತು. ಶ್ರೀನಗರದ ಕೆಲವು ಭಾಗಗಳಲ್ಲಿ ಅಂಗಡಿಮುಂಗಟ್ಟು ಮುಚ್ಚಲಾಗಿತ್ತು. ಲಾಲ್‌ಚೌಕ ಮತ್ತು ಸುತ್ತಮುತ್ತಲ ಪ್ರದೇಶದಲ್ಲೂ ಅಂಗಡಿಮುಂಗಟ್ಟು ಬಂದ್‌ ಮಾಡಲಾಗಿತ್ತು.

ನಿಯೋಗ ಸಾಗುವ ಮಾರ್ಗದುದ್ದಕ್ಕೂ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು