ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು ಬಸ್‌ ನಿಲ್ದಾಣದಲ್ಲಿ 7 ಕೆಜಿ ಸುಧಾರಿತ ಸ್ಫೋಟಕ ಪತ್ತೆ; ತಪ್ಪಿದ ಅನಾಹುತ

Last Updated 14 ಫೆಬ್ರುವರಿ 2021, 9:43 IST
ಅಕ್ಷರ ಗಾತ್ರ

ಜಮ್ಮು: ಜಮ್ಮುವಿನ ಬಸ್ ನಿಲ್ದಾಣದಲ್ಲಿ ಭಾನುವಾರ ಏಳು ಕಿಲೋಗ್ರಾಂ ತೂಕದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಪತ್ತೆಯಾಗಿದೆ.

ಜನಸಂದಣೆ ಇರುವ ಬಸ್‌ ನಿಲ್ದಾಣ ಪ್ರದೇಶದಲ್ಲಿ ಸುಧಾರಿತ ಸ್ಫೋಟಕ ಪತ್ತೆಯಾಗಿದ್ದು, ಈ ಮೂಲಕ ಸಂಭವಿಸಬಹುದಾಗಿದ್ದ ಭಾರಿ ಅನಾಹುತ ತಪ್ಪಿದಂತಾಗಿದೆ. 2019ರ ಪುಲ್ವಾಮಾ ದಾಳಿಯ ಎರಡನೇ ವರ್ಷಾಚರಣೆಯ ಪ್ರಯುಕ್ತ ಮತ್ತೊಂದು ಸ್ಫೋಟ ನಡೆಸುವ ಉಗ್ರರ ಯೋಜನೆಯು ವಿಫಲಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮುವಿನ ಕುಂಜ್ವಾನಿ ಮತ್ತು ಸಾಂಬಾ ಜಿಲ್ಲೆಯ ಬಡೀ ಬ್ರಾಹ್ಮಣ ಪ್ರದೇಶದಿಂದ ಇಬ್ಬರು ಪ್ರಮುಖ ಉಗ್ರರನ್ನು ಬಂಧಿಸಿರುವ ಬೆನ್ನಲ್ಲೇ ಐಇಡಿ ಪತ್ತೆ ಮಾಡಲಾಗಿದೆ. ನಿರ್ಧಿಷ್ಟ ಮಾಹಿತಿಯನ್ನು ಆಧರಿಸಿ ನಡೆಸಿದ ಕಾರ್ಯಾಚರಣೆಯಲ್ಲಿ ಸ್ಫೋಟಕ ಸಾಧನ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಳೆದ ವರ್ಷ ದಕ್ಷಿಣ ಕಾಶ್ಮೀರದಲ್ಲಿ ಮೂವರು ಬಿಜೆಪಿ ಕಾರ್ಯಕರ್ತರು ಹಾಗೂ ಒಬ್ಬ ಪೊಲೀಸ್ ಹತ್ಯೆಗೆ ಸಂಬಂಧಿಸಿದಂತೆ ಉಗ್ರ ಝಹೂರ್‌ ಅಹ್ಮದ್‌ ರಾಥರ್‌ಗಾಗಿ ಹುಡುಕಾಟ ನಡೆದಿತ್ತು. ಶನಿವಾರ ಸಾಂಬಾದ ಬಡೀ ಬ್ರಾಹ್ಮಣ ಪ್ರದೇಶದಲ್ಲಿ ದಿ ರೆಸಿಸ್ಟೆನ್ಸ್‌ ಫ್ರಂಟ್‌ನೊಂದಿಗೆ (ಟಿಆರ್‌ಎಫ್‌) ಗುರುತಿಸಿಕೊಂಡಿರುವ ಉಗ್ರ ಝಹೂರ್‌ನನ್ನು ಬಂಧಿಸಲಾಯಿತು.

ಲಷ್ಕರ್–ಎ–ಮುಸ್ತಫಾ (ಎಲ್ಇಎಂ) ಸಂಘಟನೆಯ ಕಮಾಂಡರ್‌ ಎಂದು ಕರೆದುಕೊಂಡಿರುವ ಹಿಂದಾಯತುಲ್ಲಾಹ್‌ ಮಲ್ಲಿಕ್‌ ಅಲಿಯಾಸ್‌ ಹಸ್ನೈನ್‌ನನ್ನು ಫೆಬ್ರುವರಿ 6ರಂದು ಜಮ್ಮುವಿನ ಕುಂಜ್ವಾನಿ ಪ್ರದೇಶದಲ್ಲಿ ಭದ್ರತಾ ಪಡೆಗಳು ವಶಕ್ಕೆ ಪಡೆದಿವೆ.

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಎರಡು ವರ್ಷಗಳ ಹಿಂದೆ (2019ರ ಫೆಬ್ರುವರಿ 14) ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕ ಸಂಘಟನೆ ಜೈಶ್‌–ಎ–ಮೊಹಮ್ಮದ್‌ ನಡೆಸಿದ ದಾಳಿಯಲ್ಲಿ ಸಿಆರ್‌ಪಿಎಫ್‌ನ 40 ಯೋಧರು ಸಾವಿಗೀಡಾದರು. ಸಿಆರ್‌ಪಿಎಫ್‌ ಸಿಬ್ಬಂದಿ ಸಾಗುತ್ತಿದ್ದ 70 ವಾಹನಗಳ ಮೇಲೆ ದಾಳಿ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT