ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2024ರ ಮೇ ತನಕ ಪ್ರತಿಭಟನೆಗೆ ಸಿದ್ಧ: ರೈತ ಸಂಘಟನೆಯ ಮುಖಂಡರ ಹೇಳಿಕೆ

ದೆಹಲಿ ಗಡಿಯಲ್ಲಿನ ಪ್ರತಿಭಟನೆಯು ‘ಸೈದ್ಧಾಂತಿಕ ಕ್ರಾಂತಿ
Last Updated 17 ಜನವರಿ 2021, 19:31 IST
ಅಕ್ಷರ ಗಾತ್ರ

ನಾಗಪುರ: ಕೇಂದ್ರವು ಜಾರಿಗೆ ತಂದಿರುವ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಮೂರು ಕಾಯ್ದೆಗಳ ವಿರುದ್ಧ 2024ರ ಮೇ ತಿಂಗಳವರೆಗೆ ಪ್ರತಿಭಟನೆ ನಡೆಸಲು ಸಿದ್ಧ ಎಂದು ಭಾರತೀಯ ಕಿಸಾನ್‌ ಯೂನಿಯನ್‌ನ (ಬಿಕೆಯು) ಮುಖಂಡ ರಾಕೇಶ್‌ ಟಿಕಾಯತ್‌ ಭಾನುವಾರ ಹೇಳಿದ್ದಾರೆ. ದೆಹಲಿಯ ಗಡಿಗಳಲ್ಲಿ ಈಗ ನಡೆಯುತ್ತಿರುವ ಪ್ರತಿಭಟನೆಯು ‘ಸೈದ್ಧಾಂತಿಕ ಕ್ರಾಂತಿ’ ಎಂದು ಅವರು ಬಣ್ಣಿಸಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯು 2024ರ ಏಪ್ರಿಲ್‌–ಮೇ ಸಮಯದಲ್ಲಿ ನಡೆಯಲಿದೆ.

ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕುರಿತು ಕಾನೂನುಬದ್ಧ ಖಾತರಿ ಬೇಕು ಎಂದು ನಾಗಪುರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಟಿಕಾಯತ್‌ ಅವರು ಹೇಳಿದರು.

ಕೇಂದ್ರದ ಮೂರು ಕಾಯ್ದೆಗಳ ವಿರುದ್ಧ ಪಂಜಾಬ್‌, ಹರಿಯಾಣ, ಉತ್ತರ ಪ್ರದೇಶ ಮತ್ತು ಇತರೆಡೆಗಳ ರೈತರು 2020ರ ನವೆಂಬರ್‌ 26ರಿಂದಲೇ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕಾಯ್ದೆಗಳ ಅನುಷ್ಠಾನಕ್ಕೆ ಸುಪ್ರೀಂ ಕೋರ್ಟ್‌ ಕಳೆದ ಮಂಗಳವಾರ ತಡೆ ನೀಡಿದೆ.

ಪ್ರತಿಭಟನೆಗೆ ‘ಶ್ರೀಮಂತ ರೈತರು’ ಕುಮ್ಮಕ್ಕು ನೀಡುತ್ತಿದ್ದಾರೆ ಎಂಬ ಆರೋಪವನ್ನು ಅವರು ಅಲ್ಲಗಳೆದಿ
ದ್ದಾರೆ. ಗ್ರಾಮಗಳ ಜನರು ಮತ್ತು ವಿವಿಧ ಸಂಘಟನೆಗಳ ಜನರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ ಎಂದರು.

‘ದೆಹಲಿಯಲ್ಲಿ ಆರಂಭವಾಗಿರುವುದು ರೈತರ ಸೈದ್ಧಾಂತಿಕ ಕ್ರಾಂತಿ. ಅದು ವಿಫಲವಾಗದು. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಮೂರು ಕಾಯ್ದೆಗಳು ರದ್ದಾಗದೆ ಗ್ರಾಮಗಳಿಗೆ ಹಿಂದಿರುವುದನ್ನು ಗ್ರಾಮಸ್ಥರು ಬಯಸುವುದಿಲ್ಲ’ ಎಂದು ಟಿಕಾಯತ್‌ ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ ನೇಮಿಸಿದ ಸಮಿತಿಯ ಮುಂದೆ ಹೋಗುವುದಿಲ್ಲ. ಸರ್ಕಾರ ಮತ್ತು ರೈತರ ಸಂಘಟನೆಗಳು ಜತೆಯಾಗಿ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲಿವೆ ಎಂದು ಸರ್ಕಾರವೂ ಹೇಳಿದೆ ಎಂದು ಅವರು ತಿಳಿಸಿದರು.

ಸಮಿತಿ ಸಭೆ ನಾಳೆ:ಕೃಷಿ ಮಸೂದೆಗಳಿಗೆ ಸಂಬಂಧಿಸಿ ಸೃಷ್ಟಿಯಾಗಿರುವ ಬಿಕ್ಕಟ್ಟು ಪರಿಹಾರಕ್ಕೆ ಸುಪ್ರೀಂ ಕೋರ್ಟ್‌ ನೇಮಿಸಿದ ಸಮಿತಿಯ ಮೊದಲ ಸಭೆಯ ಮಂಗಳವಾರ ನಡೆಯಲಿದೆ ಎಂದು ಸಮಿತಿಯ ಸದಸ್ಯ ಅನಿಲ್‌ ಗಣವತ್‌ ತಿಳಿಸಿದ್ದಾರೆ. ಮುಂದಿನ ಕ್ರಮ ಏನು ಎಂಬುದನ್ನು ನಿರ್ಧರಿಸುವುದಕ್ಕಾಗಿ ಸದಸ್ಯರು ಮಾತ್ರ ಭೇಟಿಯಾಗಲಿದ್ದಾರೆ ಎಂದು ಅವರು ಹೇಳಿದ್ದಾರೆ. ಸಮಿತಿಯ ಕೆಲಸದ ಚೌಕಟ್ಟಿನ ಬಗ್ಗೆ ಮಾಹಿತಿ ಬಂದಿದೆ. ಇದೇ 21ರಿಂದ ಕೆಲಸ ಆರಂಭವಾಗಲಿದೆ ಎಂದೂ ಗಣವತ್‌ ಹೇಳಿದ್ದಾರೆ.

‘ಸುಪ್ರೀಂ’ ವಿಚಾರಣೆ ಇಂದು:ಕೃಷಿ ಕಾಯ್ದೆಗಳು, ದೆಹಲಿಯ ಗಡಿಯಲ್ಲಿ ರೈತರ ಪ್ರತಿಭಟನೆ ಮತ್ತು 26ರಂದು ದೆಹಲಿಯಲ್ಲಿ ರೈತರು ನಡೆಸಲು ಉದ್ದೇಶಿಸಿರುವ ಟ್ರ್ಯಾಕ್ಟರ್‌ ಜಾಥಾಕ್ಕೆ ಸಂಬಂಧಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ನಡೆಸಲಿದೆ. ಕೃಷಿ ಕಾಯ್ದೆಗಳಿಗೆ ಸಂಬಂಧಿಸಿ ಸೃಷ್ಟಿಯಾಗಿರುವ ಬಿಕ್ಕಟ್ಟು ಪರಿಹಾರಕ್ಕೆ ನೇಮಿಸಿದ ಸಮಿತಿಯಿಂದ ಭೂಪಿಂದರ್‌ ಸಿಂಗ್‌ ಮಾನ್‌ ಅವರು ಹೊರ ಹೋಗಿರುವ ವಿಚಾರದ ಬಗ್ಗೆಯೂ ಸುಪ್ರೀಂ ಕೋರ್ಟ್ ಗಮನ ಹರಿಸಲಿದೆ.

ಪಟ್ಟು ಬಿಡಿ, ಚರ್ಚೆಗೆ ಬನ್ನಿ: ರೈತರಿಗೆ ತೋಮರ್‌ ಕರೆ

ರೈತರು ತಮ್ಮ ಹಟಮಾರಿ ನಿಲುವು ಬಿಡಬೇಕು. ಮಂಗಳವಾರ ನಡೆಯಲಿರುವ ಸಭೆಯಲ್ಲಿ, ವಿವಾದಾತ್ಮಕ ಕಾಯ್ದೆಗಳ ಬಗ್ಗೆ ವಿವರವಾದ ಚರ್ಚೆಗೆ ಬರಬೇಕು ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಕರೆ ಕೊಟ್ಟಿದ್ದಾರೆ.

‘ಕಾಯ್ದೆಗಳಿಗೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ಕೊಟ್ಟಿದೆ. ಹಾಗಿರುವಾಗ ಇಷ್ಟೊಂದು ಹಟಮಾರಿ ನಿಲುವು ತಳೆಯುವ ಅಗತ್ಯ ಏನು’ ಎಂದು ಅವರು‌ ಪ್ರಶ್ನಿಸಿದ್ದಾರೆ.

ಕಾಯ್ದೆಗಳನ್ನು ಕೈಬಿಡಿ ಎಂಬ ಬೇಡಿಕೆಯನ್ನು ಬಿಟ್ಟು ರೈತರ ಬೇರೆ ಯಾವುದೇ ಬೇಡಿಕೆಯನ್ನು ಪರಿಶೀಲಿಸಲು ಕೇಂದ್ರವು ಸಿದ್ಧವಿದೆ, ಸರ್ಕಾರವು ಈ ವಿಚಾರದಲ್ಲಿ ಗಂಭೀರವಾಗಿ ಮತ್ತು ಮುಕ್ತವಾಗಿ ಇದೆ ಎಂದು ಅವರು ತಿಳಿಸಿದ್ದಾರೆ.

ಹಲವು ವಿನಾಯಿತಿಗಳನ್ನು ನೀಡುವುದಾಗಿ ಸರ್ಕಾರ ಹೇಳಿದೆ. ಆದರೆ, ರೈತರು ತಮ್ಮ ನಿಲುವು ಸಡಿಲಿಸುತ್ತಿಲ್ಲ, ಕಾಯ್ದೆಯನ್ನು ವಾಪಸ್‌ ಪಡೆಯಬೇಕು ಎಂದು ಪಟ್ಟು ಹಿಡಿದಿದ್ದಾರೆ ಎಂದು ಅವರು ಹೇಳಿದರು.

ಟ್ರ್ಯಾಕ್ಟರ್‌ ಜಾಥಾ ಖಚಿತ

ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ಟ್ರ್ಯಾಕ್ಟರ್‌ ಜಾಥಾ ನಡೆಸುವುದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ರೈತ ಸಂಘಟನೆಗಳು ಭಾನುವಾರ ಹೇಳಿವೆ.

‘ದೆಹಲಿಯ ಹೊರ ವರ್ತುಲ ರಸ್ತೆಯಲ್ಲಿ ಈ ಜಾಥಾ ನಡೆಯಲಿದೆ. ಇದು ಶಾಂತಿಯುತವಾಗಿ ಇರಲಿದೆ. ಗಣರಾಜ್ಯೋತ್ಸವ ಪಥಸಂಚಲನಕ್ಕೆ ಯಾವುದೇ ಅಡ್ಡಿ ಮಾಡುವುದಿಲ್ಲ. ರೈತರು ತಮ್ಮ ಟ್ರ್ಯಾಕ್ಟರ್‌ಗಳಲ್ಲಿ ತ್ರಿವರ್ಣ ಧ್ವಜ ಹಾಕಿಕೊಳ್ಳಲಿದ್ದಾರೆ’ ಎಂದು ರೈತ ಸಂಘಟನೆಯ ಮುಖಂಡ ಯೋಗೇಂದ್ರ ಯಾದವ್‌ ಅವರು ಸಿಂಘು ಗಡಿಯಲ್ಲಿ ತಿಳಿಸಿದ್ದಾರೆ.

ಎನ್‌ಐಎ ನೋಟಿಸ್‌ಗೆ ಖಂಡನೆ:ಸಿಖ್ಸ್‌ ಫಾರ್‌ ಜಸ್ಟಿಸ್‌ ಎಂಬ ನಿಷೇಧಿತ ಸಂಘಟನೆಗೆ ಸಂಬಂಧಿಸಿದ ಪ್ರಕರಣದಲ್ಲಿ, ಪ್ರತಿಭಟನೆಯಲ್ಲಿ ಭಾಗವಹಿಸಿರುವ 40 ವ್ಯಕ್ತಿಗಳಿಗೆ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ಸಾಕ್ಷಿಗಳಾಗಿ ಹಾಜರಾಗುವಂತೆ ನೋಟಿಸ್‌ ನೀಡಿದೆ.

‘ರೈತರ ಚಳವಳಿಯ ಭಾಗವಾಗಿರುವವರು ಅಥವಾ ಪ್ರತಿಭಟನೆಗೆ ಬೆಂಬಲ ನೀಡಿದವರ ವಿರುದ್ಧ ಎನ್‌ಐಎ ಪ್ರಕರಣ ದಾಖಲಿಸುತ್ತಿದೆ. ರೈತರ ಎಲ್ಲ ಸಂಘಟನೆಗಳು ಇದನ್ನು ಖಂಡಿಸುತ್ತಿವೆ. ಸಾಧ್ಯವಿರುವ ಎಲ್ಲ ರೀತಿಯಲ್ಲಿಯೂ ಇದರ ವಿರುದ್ಧ ಹೋರಾಟ ನಡೆಯಲಿದೆ’ ಎಂದು ಕ್ರಾಂತಿಕಾರಿ ಕಿಸಾನ್‌ ಯೂನಿಯನ್‌ನ ಅಧ್ಯಕ್ಷ ದರ್ಶನ್‌ ಪಾಲ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT