ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೂಳು ನಿಯಂತ್ರಣ ನಿಯಮ ಉಲ್ಲಂಘನೆಗಾಗಿ ₹20 ಲಕ್ಷ ದಂಡ ವಿಧಿಸಿದ ದೆಹಲಿ ಸರ್ಕಾರ

Last Updated 10 ಅಕ್ಟೋಬರ್ 2020, 14:18 IST
ಅಕ್ಷರ ಗಾತ್ರ

ನವದೆಹಲಿ: ಇಲ್ಲಿನ ಟಾನ್ಸೆನ್ ಮಾರ್ಗ್‌ ಪ್ರದೇಶದ ಕಟ್ಟಡ ಉರುಳಿಸುವಿಕೆಯ ಸ್ಥಳದಲ್ಲಿ ಧೂಳು ನಿಯಂತ್ರಣ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ದೆಹಲಿ ಸರ್ಕಾರವು ಶನಿವಾರ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗೆ (ಎಫ್‌ಐಸಿಸಿಐ) ₹ 20 ಲಕ್ಷ ದಂಡ ವಿಧಿಸಿದೆ.

ಆದೇಶದ ಪ್ರಕಾರ, ದಂಡವನ್ನು 15 ದಿನಗಳಲ್ಲಿ ಠೇವಣಿ ಇಡಲು ವಾಣಿಜ್ಯ ಸಂಸ್ಥೆಗೆ ತಿಳಿಸಲಾಗಿದೆ.ಯೋಜನಾ ಸ್ಥಳದಲ್ಲಿ ಧೂಳು ನಿರೋಧಕ ಗನ್ ಅಳವಡಿಸದೆ ಯಾವುದೇ ಕೆಡವುವ ಚಟುವಟಿಕೆಯನ್ನು ಕೈಗೊಳ್ಳಬಾರದು ಅಥವಾ ಪುನಃ ಪ್ರಾರಂಭಿಸಬಾರದು ಎಂದು ನಿರ್ದೇಶನ ನೀಡಿರುವುದಾಗಿ ಆದೇಶದಲ್ಲಿ ಹೇಳಿದೆ.

ಅಕ್ಟೋಬರ್ 9 ರಂದು ತಪಾಸಣೆಯ ಸಮಯದಲ್ಲಿ ಕಂಡುಬಂದ ನ್ಯೂನತೆಗಳನ್ನು ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಮತ್ತು ಏನೇನು ಕ್ರಮ ಕೈಗೊಳ್ಳಲಾಗಿದೆ ಎಂಬುದರ ಕುರಿತು ವರದಿಯನ್ನು ಏಳು ದಿನಗಳಲ್ಲಿ ಸಲ್ಲಿಸಬೇಕು' ಎಂದು ಅದು ಹೇಳಿದೆ.

ಕಟ್ಟಡ ಕೆಡವುವ ಸ್ಥಳದಲ್ಲಿ ಕೆಲಸ ನಿಲ್ಲಿಸುವಂತೆ ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ ಈ ಹಿಂದೆ ಎಫ್‌ಐಸಿಸಿಐಗೆ ಹೇಳಿತ್ತು.

ಸರ್ಕಾರದ ಮಾರ್ಗಸೂಚಿಗಳ ಪ್ರಕಾರ, 20,000 ಚದರ ಮೀಟರ್‌ಗಿಂತ ದೊಡ್ಡದಾದ ನಿರ್ಮಾಣ ಮತ್ತು ಉರುಳಿಸುವಿಕೆ ಸ್ಥಳಗಳಲ್ಲಿ ಧೂಳು ವಿರೋಧಿ ಗನ್‌ಗಳನ್ನು ಸ್ಥಾಪಿಸುವುದು ಕಡ್ಡಾಯವಾಗಿದೆ.

ದೆಹಲಿಯಲ್ಲಿ 20,000 ಚದರ ಮೀಟರ್ ವಿಸ್ತೀರ್ಣ ಹೊಂದಿರುವ 39 ತಾಣಗಳಿವೆ. ಈ ಪೈಕಿ ಆರು ಕಡೆಗಳಲ್ಲಿ ಧೂಳು ನಿರೋಧಕ ಗನ್‌ಗಳಿಲ್ಲ ಮತ್ತು ಅಲ್ಲಿ ಕೆಲಸ ನಿಲ್ಲಿಸುವಂತೆ ತಿಳಿಸಲಾಗಿದೆ. ಎಫ್‌ಐಸಿಸಿಐ ಕ್ಯಾಂಪಸ್‌ನಲ್ಲಿ ಗಂಭೀರ ಉಲ್ಲಂಘನೆ ಕಂಡುಬಂದಿದೆ ಎಂದು ಪರಿಸರ ಸಚಿವ ಗೋಪಾಲ್ ರೈ ಶುಕ್ರವಾರ ಹೇಳಿದ್ದಾರೆ.

ಕಟ್ಟಡ ಕೆಡವಿದ ಅವಶೇಷಗಳನ್ನು ಪರಿಶೀಲಿಸಲಾಗಿದ್ದು, ಅಲ್ಲಿ ಧೂಳು ನಿರೋಧಕ ಗನ್ ಕಂಡುಬಂದಿಲ್ಲ. ಕೆಲಸವನ್ನು ನಿಲ್ಲಿಸಲು ನಾವೇ ನಿರ್ದೇಶನ ನೀಡಿದ್ದೇವೆ. ಹೀಗಿದ್ದರೂ ಕೆಲಸ ಮುಂದುವರಿಸಿದರೆ ಗುತ್ತಿಗೆದಾರರ ವಿರುದ್ಧ ಕಾನೂನು ಮತ್ತು ಆರ್ಥಿಕ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಹಲವಾರು ಎಚ್ಚರಿಕೆಗಳನ್ನು ನೀಡಿದರೂ ಧೂಳು ನಿಯಂತ್ರಣ ಮಾನದಂಡಗಳನ್ನು ಉಲ್ಲಂಘಿಸುವ ದೊಡ್ಡ ಸೈಟ್‌ಗಳಲ್ಲಿನ ಗುತ್ತಿಗೆದಾರರ ವಿರುದ್ಧವೂ ಇದೇ ರೀತಿಯ ಕ್ರಮ ಕೈಗೊಳ್ಳಲಾಗುವುದು. ಯಾರನ್ನೂ ಬಿಡಲಾಗುವುದಿಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT