ಚಳಿ, ಮಳೆಗೆ ಧರಣಿ ನಿರತ ರೈತರ ಸೆಡ್ಡು: ಮುಂದುವರಿದ ಪ್ರತಿಭಟನೆ

ನವದೆಹಲಿ: ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಹಾಗೂ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನಿನ ಬಲ ನೀಡಬೇಕು ಎಂಬ ಬೇಡಿಕೆ ಕುರಿತು ಪಟ್ಟು ಸಡಿಲಸದ ಕೃಷಿಕರು, ಕೊರೆಯುವ ಚಳಿ ಮತ್ತು ಮಳೆಯ ನಡುವೆಯೂ ಧರಣಿ ಮುಂದುವರಿಸಿದ್ದಾರೆ.
ಸರ್ಕಾರದ ಜೊತೆಗೆ ಸೋಮವಾರ ನಡೆದಿದ್ದ ಏಳನೇ ಸುತ್ತಿನ ಮಾತುಕತೆಯೂ ವಿಫಲವಾಗಿದ್ದು, ಅನಿಶ್ಚಿತತೆ ಮುಂದುವರಿದಿದೆ. ಮತ್ತೊಮ್ಮೆ ಕೃಷಿಕ ಸಂಘಟನೆಗಳ ಮುಖಂಡರು ಮತ್ತು ಸರ್ಕಾರದ ನಡುವೆ ಜನವರಿ 8ರಂದು ಮಾತುಕತೆ ನಡೆಯಲಿದೆ.
ಬಹುತೇಕ ಪಂಜಾಬ್, ಹರಿಯಾಣ, ಉತ್ತರ ಪ್ರದೇಶದ ರೈತರೇ ಹೆಚ್ಚಿರುವ ಪ್ರತಿಭಟನನಿರತ ರೈತರು ತಮ್ಮ ಬೇಡಿಕೆಗಳ ಕುರಿತು ಸರ್ಕಾರದ ಮೇಲೆ ಒತ್ತಡ ಹೇರುವ ಕ್ರಮವಾಗಿ 40 ದಿನಗಳಿಂದ ದೆಹಲಿಗೆ ಸಂಪರ್ಕಿಸುವ ಎಲ್ಲ ಗಡಿಯಲ್ಲೂ ದಿಗ್ಬಂಧನ ಹೇರಿದ್ದಾರೆ. ಈ ಭಾಗದಲ್ಲಿ ಇತ್ತೀಚಿನ ದಿನದಲ್ಲಿ ಹೆಚ್ಚಿರುವ ಚಳಿಯಿಂದಲೂ ಅವರು ಧೃತಿಗೆಟ್ಟಿಲ್ಲ.
ಈ ಮಧ್ಯೆ, ಎರಡು ದಿನಗಳಿಂದ ಮಳೆ ಸುರಿಯುತ್ತಿದ್ದು, ಧರಣಿ ನಿರತ ರೈತರನ್ನು ಇನ್ನಷ್ಟು ಹೈರಾಣಾಗಿಸಿದೆ. ಮಳೆಯಿಂದ ರಕ್ಷಣೆ ಪಡೆಯಲು ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿಯು ತಾತ್ಕಾಲಿಕ ಟೆಂಟ್ ವ್ಯವಸ್ಥೆಯನ್ನು ಸಿಂಘು ಗಡಿ ಸಮೀಪ ಕಲ್ಪಿಸಿದೆ.
ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ದೆಹಲಿಗೆ ಸಂಪರ್ಕ ಕಲ್ಪಿಸುವ ಸಿಂಘು, ಔಚಂಡಿ, ಪಿಯು, ಮನಿಯಾರಿ, ಸಬೋಲಿ ಮತ್ತು ಮಂಗೇಶ್ ಗಡಿ ಭಾಗಗಳಲ್ಲಿ ವಾಹನಗಳ ಸಂಚಾರ ಬಹುತೇಕ ಸ್ಥಗಿತವಾಗಿದೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.