ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ ಚುನಾವಣೆ: ಚಿರಾಗ್ ಪಾಲಿಗೆ ‘ಶತ್ರುವಿನ ಶತ್ರು ಮಿತ್ರ’

ನಿತೀಶ್‌ ವಿರುದ್ಧ ಮುಗಿಯದ ಸಿಟ್ಟು: ಬಿಜೆಪಿ ಅಭ್ಯರ್ಥಿ ಶ್ರೇಯಸಿ ಗೆಲುವಿಗೆ ಚಿರಾಗ್ ಕರೆ
Last Updated 19 ಅಕ್ಟೋಬರ್ 2020, 18:45 IST
ಅಕ್ಷರ ಗಾತ್ರ

ಪಟ್ನಾ: ಲೋಕಜನಶಕ್ತಿ ಪಕ್ಷದ (ಎಲ್‌ಜೆಪಿ) ಅಧ್ಯಕ್ಷ ಚಿರಾಗ್ ಪಾಸ್ವಾನ್ ಅವರ ಹೇಳಿಕೆಗಳನ್ನು ಬಿಜೆಪಿ ಖಂಡಿಸಿ, ಎಲ್‌ಜೆಪಿ ಜತೆ ಯಾವುದೇ ಮೈತ್ರಿ ಇಲ್ಲ ಎಂದು ಸ್ಪಷ್ಟಪಡಿಸಿದ್ದರೂ ಪಾಸ್ವಾನ್ ಅವರು ಬಿಜೆಪಿ ಅಭ್ಯರ್ಥಿ ಪರ ಭಾವನಾತ್ಮಕವಾಗಿ ಮಾತನಾಡಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆ ಯಲ್ಲಿ ಜಮುಯಿ ಕ್ಷೇತ್ರದಿಂದ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಶ್ರೇಯಸಿ ಸಿಂಗ್ ಅವರ ಗೆಲುವನ್ನು ಖಾತರಿಪಡಿಸುವಂತೆ ತಮ್ಮ ಪಕ್ಷದ ಕಾರ್ಯಕರ್ತರಿಗೆ ಚಿರಾಗ್ ಕರೆ ಕೊಟ್ಟಿದ್ದಾರೆ. ಚಿರಾಗ್ ಅವರು ಜಮುಯಿ ಕ್ಷೇತ್ರವನ್ನು ಲೋಕಸಭೆಯಲ್ಲಿ ಪ್ರತಿನಿಧಿಸುತ್ತಿದ್ದಾರೆ.

ಶ್ರೇಯಸಿ ಅವರು ಕೇಂದ್ರದ ಮಾಜಿ ಸಚಿವ ದಿಗ್ವಿಜಯ ಸಿಂಗ್ ಅವರ ಪುತ್ರಿಯಾಗಿದ್ದು, ಜಮುಯಿ ಕ್ಷೇತ್ರದಿಂದ ಚೊಚ್ಚಲ ಬಾರಿಗೆ ಕಣಕ್ಕಿಳಿದಿದ್ದಾರೆ. ಇವರು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಶೂಟಿಂಗ್‌ನಲ್ಲಿ ಚಿನ್ನದ ಪದಕ ಗಳಿಸಿದ್ದರು.

‘ನನ್ನ ತಂಗಿಗೆ ಶುಭವಾಗಲಿ. ಎಲ್‌ಜೆಪಿ ಕಾರ್ಯಕರ್ತರು ಶ್ರೇಯಸಿ ಅವರನ್ನು ಬೆಂಬಲಿಸಬೇಕು. ಬಿಜೆಪಿ ಹಾಗೂ ಎಲ್‌ಜೆಪಿ ಜತೆಗೂಡಿ ಹೊಸ ಬಿಹಾರವನ್ನು ಕಟ್ಟಲಿವೆ’ ಎಂದು ಚಿರಾಗ್ ಟ್ವೀಟ್ ಮಾಡಿದ್ದಾರೆ.

ಜೆಡಿಯು ಪಕ್ಷದ ಹಿರಿಯ ನಾಯಕರಾಗಿದ್ದ ದಿಗ್ವಿಜಯ ಸಿಂಗ್ ಅವರು ಬಂಕಾ ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿದ್ದರು. ಆದರೆ ನಿತೀಶ್ ಅವರ ಜೊತೆ ಎಂದಿಗೂ ಸೌಹಾರ್ದಯುತ ಸಂಬಂಧ ಹೊಂದಿರಲಿಲ್ಲ. ಅಟಲ್‌ ಬಿಹಾರಿ ವಾಜಪೇಯಿ ಅವರ ಕಾಲದಲ್ಲೇ ಇಬ್ಬರ ಮಧ್ಯೆ ವೈಮನಸ್ಸು ಇತ್ತು. ವಾಜಪೇಯಿ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿದ್ದ ನಿತೀಶ್‌ ಅವರ ಸಹಾಯಕ ಸಚಿವರಾಗಿ ದಿಗ್ವಿಜಯ ನೇಮಕಗೊಂಡಿದ್ದರು. ಆದರೆ ಭಿನ್ನಮತದ ಕಾರಣ ದಿಗ್ವಿಜಯ ಅವರನ್ನು ವಿದೇಶಾಂಗ ಖಾತೆಯ ರಾಜ್ಯ ಸಚಿವರನ್ನಾಗಿ ಬದಲಾಯಿಸಲಾಗಿತ್ತು.

ದಿಗ್ವಿಜಯ ನಿಧನಾನಂತರ ಅವರ ಪತ್ನಿ ಪುತುಲ್ ಸಿಂಗ್ ಅವರನ್ನು ಬಿಜೆಪಿ 2014ರಲ್ಲಿ ಬಂಕಾ ಕ್ಷೇತ್ರದಿಂದ ಕಣಕ್ಕಿಳಿಸಿತ್ತು. ಈ ಬಾರಿ ಅವರ ಪುತ್ರಿ ಶ್ರೇಯಸಿ ಸಿಂಗ್ ಅವರು ಬಿಜೆಪಿಯಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಈ ಸನ್ನಿವೇಶ ಗಮನಿಸಿದರೆ, ಚಿರಾಗ್‌ಗೆ ‘ಶತ್ರುವಿನ ಶತ್ರು ಮಿತ್ರ’ ಆಗಿದ್ದಾನೆ ಎಂದು ರಾಜಕೀಯ ವಿಶ್ಲೇಷಕ ಅಜಯ್ ಕುಮಾರ್ ಹೇಳಿದ್ದಾರೆ. ನಿತೀಶ್ ಅವರಿಂದ ತಮ್ಮ ತಂದೆ ಅನುಭವಿಸಿದ ಕಷ್ಟಗಳನ್ನು ಶ್ರೇಯಸಿ ಮರೆತಿಲ್ಲ. ನಿತೀಶ್‌ ಜತೆ ಶತ್ರುತ್ವ ಸಾಧಿಸುತ್ತಿ ರುವ ಚಿರಾಗ್ ಪಾಸ್ವಾನ್, ಶ್ರೇಯಸಿ ಅವರ ಪರವಾಗಿ ಭದ್ರವಾಗಿ ನಿಂತಿದ್ದಾರೆ. ಇಬ್ಬರ ಶತ್ರು ನಿತೀಶ್ ಒಬ್ಬರೇ.

ನಿತೀಶ್ ಅವರನ್ನು ದೀರ್ಘಕಾಲದಿಂದ ಎದುರುಹಾಕಿಕೊಂಡಿದ್ದ ಹಾಗೂ ಬಿಜೆಪಿ ವಿರುದ್ಧ ಬಂಡಾಯ ಎದ್ದಿರುವ ಮುಖಂಡರಿಗೆ ಟಿಕೆಟ್ ಕೊಟ್ಟು ಎಲ್‌ಜೆಪಿ ಕಣಕ್ಕಿಳಿಸಿದೆ.

ಚಿರಾಗ್‌ ಪರ ನಿಂತ ತೇಜಸ್ವಿ

ಚಿರಾಗ್ ಪಾಸ್ವಾನ್ ಅವರಿಗೆ ನಿತೀಶ್ ಕುಮಾರ್ ಅವರು ನ್ಯಾಯ ಒದಗಿಸಿಲ್ಲ ಎಂದು ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಟೀಕಿಸಿದ್ದಾರೆ.

‘ಚಿರಾಗ್ ವಿಷಯದಲ್ಲಿ ನಿತೀಶ್ ಅವರು ನಡೆದುಕೊಂಡ ರೀತಿ ಸರಿಯಾಗಿಲ್ಲ. ರಾಮ್‌ವಿಲಾಸ್ ಪಾಸ್ವಾನ್‌ ಅವರ ಅವಶ್ಯಕತೆ ಹಿಂದೆಂದಿಗಿಂತಲೂ ಈ ಬಾರಿ ಹೆಚ್ಚು ಇತ್ತು. ಈ ಬಗ್ಗೆ ಬೇಸರವಿದೆ’ ಎಂದು ತೇಜಸ್ವಿ ಟ್ವೀಟ್ ಮಾಡಿದ್ದಾರೆ. ಬಹುಮತಕ್ಕೆ‌ ಕಡಿಮೆ ಬಿದ್ದರೆ ಚಿರಾಗ್ ಬೆಂಬಲ‌ ಪಡೆಯುವುದಾಗಿ ತೇಜಸ್ವಿ ಹೇಳಿದ್ದಾರೆ.

ಇಂದು, ನಾಳೆ ನಡ್ಡಾ ರ್‍ಯಾಲಿ

ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಮಂಗಳವಾರ ಹಾಗೂ ಬುಧವಾರ ಬಿಹಾರದಲ್ಲಿ ನಾಲ್ಕುರ್‍ಯಾಲಿಗಳಲ್ಲಿ ಭಾಗವಹಿಸಲಿದ್ದಾರೆ. ಮೊದಲ ದಿನ ಬಕ್ಸಾರ್ ಹಾಗೂ ಅರಾಹ್‌ನಲ್ಲಿ, ಎರಡನೇ ದಿನ ಭಟಿಯಾ ಮತ್ತು ಮೋತಿಹಾರಿಯಲ್ಲಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT